
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ವಿಚಾರಣೆ ವೇಳೆ ಅನಾಮಿಕ ದೂರುದಾರ ನೀಡಿದ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ SIT ಅಧಿಕಾರಿಗಳು, ಆ ದೂರುದಾರನೊಂದಿಗೆ ಕೆಲಸ ಮಾಡಿದವರನ್ನು ಪತ್ತೆಹಚ್ಚಿದ್ದಾರೆ. ಅನಾಮಿಕನ ಜೊತೆಗೆ ಕೆಲಸ ಮಾಡಿದವರನ್ನೂ ಗುರುತಿಸಿದ್ದಾರೆ. ಸಫಾಯಿ ಕರ್ಮಚಾರಿಗಳಾಗಿ ದೂರುದಾರನೊಂದಿಗೆ ಕೆಲಸ ಮಾಡಿದ ತಮಿಳುನಾಡು ಮೂಲದ ಐವರನ್ನು ವಿಚಾರಣೆಗಾಗಿ ಕರೆಸಿ, ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ತಮಿಳುನಾಡು ಸೇರಿದಂತೆ ಇತರ ಪ್ರದೇಶಗಳಿಂದಲೂ ಕೆಲವರನ್ನು ವಿಚಾರಣೆಗಾಗಿ ಹಾಜರುಪಡಿಸಲಾಗಿದೆ. 1995ರಿಂದ 2014ರವರೆಗೆ ಅನಾಮಿಕ ದೂರುದಾರನೊಂದಿಗೆ ಕೆಲಸ ಮಾಡಿದವರ ವಿಚಾರಣೆಯನ್ನೂ SIT ನಡೆಸಿದೆ. ಅದೇ ರೀತಿಯಲ್ಲಿ, ಧರ್ಮಸ್ಥಳ ಗ್ರಾಮ ಪಂಚಾಯತ್‌ನಿಂದ ಪಡೆದ ಹಳೆಯ ದಾಖಲೆಗಳನ್ನು ಆಧಾರವಾಗಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ. ಗ್ರಾಮ ಪಂಚಾಯತ್‌ನಿಂದ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯೂ ಈಗ ಸಕ್ರಿಯವಾಗಿದೆ.
ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ ವಿಶೇಷ ತನಿಖಾ ತಂಡ (SIT) ಇದೀಗ ಸ್ಪಾಟ್ ನಂಬರ್ 13ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದೆ. ಬೆಂಗಳೂರಿನಿಂದ ತರಲಾಗುವ GPR ಅಥವಾ ಮೌಂಟಡ್ ರಾಡಾರ್‌ಗಾಗಿ SIT ಕಾಯುತ್ತಿದೆ. ಈ ತಂತ್ರಜ್ಞಾನ ನೆಲದಡಿಯಲ್ಲಿರುವ ವಸ್ತುಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.SIT ಅಧಿಕಾರಿಗಳು ಖಾಸಗಿ ಕಂಪನಿಯೊಂದರಿಂದ GPR ಯಂತ್ರವನ್ನು ಬಾಡಿಗೆಗೆ ತರಲು ನಿರ್ಧರಿಸಿದ್ದು, ಈ ಕುರಿತು ತಜ್ಞರ ಸಲಹೆಯನ್ನು SIT ಮುಖ್ಯಸ್ಥ ಪ್ರಣವ್ ಮೊಹಾಂತಿ ಪಡೆದುಕೊಂಡಿದ್ದಾರೆ. ಆದಾಗ್ಯೂ, ಈ ತಂತ್ರಜ್ಞಾನ ಅತ್ಯಂತ ದುಬಾರಿ. ದಿನಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆ ವಿಧಿಸಲಾಗುವ ಸಾಧ್ಯತೆ ಇದ್ದು, ಯಂತ್ರ ಬಾಡಿಗೆ ವೆಚ್ಚವು ಸುಮಾರು ₹20 ಲಕ್ಷ ಎಂದು ಅಂದಾಜಿಸಲಾಗಿದೆ. ಮಷೀನ್ ಬಳಕೆಗೆ ಅಗತ್ಯವಾದ ಅನುಮತಿಗಾಗಿ SIT ಇನ್ನೂ ಕಾಯುತ್ತಿದೆ. ಜೌಗು ಪ್ರದೇಶವಾಗಿರುವ ಹಾಗೂ ಹೆಚ್ಚಿನ ಮಳೆಯಾಗುವ ಈ ಸ್ಥಳದಲ್ಲಿ GPR ಬಳಕೆ ಸವಾಲಿನ ಸಂಗತಿ. ಮಣ್ಣು ಒದ್ದೆಯಾಗಿರುವುದರಿಂದ GPR ಸಿಗ್ನಲ್ ದುರ್ಬಲವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, ಬೆಳ್ತಂಗಡಿಯ ಎಸ್ಐಟಿ ಕಚೇರಿಯನ್ನು ಅಧಿಕೃತವಾಗಿ ಎಸ್ಐಟಿ ಪೊಲೀಸ್ ಠಾಣೆಯಾಗಿ ಪರಿವರ್ತಿಸಲಾಗಿದೆ. ಡಿಜಿ ಹಾಗೂ ಐಜಿಪಿ ಡಾ. ಎಂ. ಎ. ಸಲೀಂ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನು ನೇರವಾಗಿ ಬೆಳ್ತಂಗಡಿ ಎಸ್ಐಟಿ ಪೊಲೀಸ್ ಠಾಣೆಯಲ್ಲೇ ದಾಖಲಿಸಲು ಅವಕಾಶ ನೀಡಲಾಗಿದೆ. ಹಿಂದಿನ ನಿಯಮದಂತೆ, ದೂರುಗಳನ್ನು ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕಾಗುತ್ತಿತ್ತು. ನಂತರ ಆ ದೂರುಗಳನ್ನು ಸ್ಥಳೀಯ ಠಾಣೆಯಿಂದ ಎಸ್ಐಟಿಗೆ ವರ್ಗಾಯಿಸಲಾಗುತ್ತಿತ್ತು. ಈಗ ಹೊಸ ಆದೇಶದೊಂದಿಗೆ, ದೂರು ದಾಖಲಿಸುವ ಪ್ರಕ್ರಿಯೆ ಸುಗಮಗೊಂಡಿದೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ಪ್ರಮುಖ ಮಾಹಿತಿಯನ್ನು ನೀಡಿದ ಅನಾಮಿಕ ದೂರುದಾರನಿಗೆ ಭದ್ರತೆ ಸಂಬಂಧಿಸಿದ ಆತಂಕ ಉಂಟಾಗಿದೆ. ತನಿಖಾ ಪ್ರಕ್ರಿಯೆಯಲ್ಲಿ ತನ್ನ ಮೇಲೂ ದಾಳಿ ನಡೆಯಬಹುದೆಂಬ ಭಯದಿಂದ, ಉತ್ಖನನ ಕಾರ್ಯಾಚರಣೆ ಬಳಿಕವೂ ಭದ್ರತೆ ನೀಡುವಂತೆ ದೂರುದಾರ ಎಸ್ಐಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾನೆ. ದೂರುದಾರನ ಮನವಿಯನ್ನು ಪರಿಗಣಿಸಿದ ಎಸ್ಐಟಿ ಅಧಿಕಾರಿಗಳು, ಅವನಿಗೆ ತಕ್ಷಣವೇ ಭದ್ರತೆ ಒದಗಿಸುವ ನಿರ್ಧಾರ ಕೈಗೊಂಡಿದ್ದಾರೆ. ನಿನ್ನೆ, ವಕೀಲರೊಂದಿಗೆ ಖಾಸಗಿ ಕಾರಿನಲ್ಲಿ ಆಗಮಿಸಿದ್ದ ದೂರುದಾರನಿಗೆ ಪೊಲೀಸ್ ಎಸ್ಕಾರ್ಟ್ ಸಿಗುವಂತೆ ವ್ಯವಸ್ಥೆ ಮಾಡಲಾಯಿತು. ಪೊಲೀಸ್ ವಾಹನದಲ್ಲಿ ಚಾಲಕ ಸೇರಿದಂತೆ ಇಬ್ಬರು ಸಿಬ್ಬಂದಿಗಳು ಭದ್ರತೆ ಒದಗಿಸಿದರು. ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಆಗಮಿಸಿದ ದೂರುದಾರ, ತನಿಖಾ ಸಂಬಂಧಿತ ವಿಚಾರಣೆಯಲ್ಲಿ ಪಾಲ್ಗೊಂಡನು. ಧರ್ಮಸ್ಥಳ ಗಲಾಟೆಯ ಬೆನ್ನಲ್ಲೇ ಭದ್ರತೆ ಕಳವಳ ಉಂಟಾಗಿದ್ದ ಕಾರಣ, ಕಾರ್ಯಾಚರಣೆಯನ್ನು ನಿನ್ನೆ ಮುಂದೂಡಿರುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ, ದೂರುದಾರನ ಬೇಡಿಕೆಗೆ ಸ್ಪಂದಿಸಿದ ಎಸ್ಐಟಿ, ತನಿಖೆ ಹಾಗೂ ಭದ್ರತೆ ಎರಡರಲ್ಲೂ ಸಮಾನ ತಾಕೀತು ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ