
ಬೆಂಗಳೂರು (ಆ.20): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮಗಳು 'ಅನನ್ಯಾ ಭಟ್' ಎಂದು ಸುಜಾತಾ ಭಟ್ ಅವರು ಬಿಡುಗಡೆ ಮಾಡಿದ ಫೋಟೋ, ವಿರಾಜಪೇಟೆಯ ವಾಸಂತಿ ಎಂಬ ಮೃತ ಮಹಿಳೆಯದ್ದು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ತನಿಖೆಯಿಂದ ಬಯಲಾಗಿದೆ. ಸುಜಾತಾ ಭಟ್ ಅವರ ಈ ಕೃತ್ಯದಿಂದ ವಾಸಂತಿ ಅವರ ಕುಟುಂಬಸ್ಥರು ತೀವ್ರ ನೋವು ಮತ್ತು ಆಘಾತಕ್ಕೊಳಗಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಸುಜಾತಾ ಭಟ್‌ನ ಕಥೆ ಕಳಚಿದ ಸುವರ್ಣ ನ್ಯೂಸ್
ಸುಜಾತಾ ಭಟ್ ಅವರು 'ಜಸ್ಟೀಸ್ ಫಾರ್ ಅನನ್ಯಾ ಭಟ್' ಹೆಸರಿನಲ್ಲಿ ಬಿಡುಗಡೆ ಮಾಡಿದ ಫೋಟೋ, ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರದ್ದು ಎಂದು ಸುವರ್ಣ ನ್ಯೂಸ್ ಸಾಕ್ಷಿ ಸಮೇತ ಬಹಿರಂಗಪಡಿಸಿದೆ. ರಂಗಪ್ರಸಾದ್ ಅವರ ಜೊತೆಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಸುಜಾತಾ ಭಟ್, ಅವರ ಮನೆಯಲ್ಲಿ ವಾಸಂತಿಯ ಆಲ್ಬಂನಲ್ಲಿದ್ದ ಫೋಟೋವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಾಸಂತಿ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ವಾಸಂತಿ ಸಾವಿನ ದುರಂತ ಕಥೆ:
ವಾಸಂತಿ ಅವರ ಸಹೋದರ ನೀಡಿದ ಮಾಹಿತಿ ಪ್ರಕಾರ, ವಾಸಂತಿ ರಂಗಪ್ರಸಾದ್ ಅವರ ಮಗ ಶ್ರೀವತ್ಸನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಒಂದೇ ತಿಂಗಳಿಗೆ ವಾಸಂತಿ ನಾಪತ್ತೆಯಾಗಿದ್ದಳು. ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ ವಿರಾಜಪೇಟೆಯ ಕೆದಮಳ್ಳೂರು ನದಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು ಎಂದು ಕರುಣಾಜನಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ, ನಿಗೂಢವಾಗಿ ನಾಪತ್ತೆಯಾಗಿ ಶವವಾಗಿ ಸಿಕ್ಕ ವಾಸಂತಿ ಫೋಟೋ ಸುಜಾತಾ ಭಟ್‌ಗೆ ಸಿಕ್ಕಿದ್ಹೇಗೆ ಎಂಬ ಅನುಮಾನ ಕಂಡುಬಂದಿದೆ.
'ನಾವು ಸುಜಾತಾ ಭಟ್ ಅವರನ್ನು ಈ ಹಿಂದೆ ಎಂದಿಗೂ ನೋಡಿಲ್ಲ' ಎಂದು ವಾಸಂತಿ ಸಹೋದರ ಹೇಳಿದ್ದಾರೆ. 'ನನ್ನ ತಂಗಿಯ ಫೋಟೋ ಬಹಿರಂಗಗೊಂಡಾಗಲೇ ನಾವು ಅವರನ್ನು ನೋಡಿದ್ದು. ಸುಜಾತಾ ನನ್ನ ತಂಗಿಯ ಫೋಟೋವನ್ನು ದುರುದ್ದೇಶದಿಂದ ಕದ್ದು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ತಂಗಿ ಹಣೆಗೆ ಬೊಟ್ಟು ಇಡುತ್ತಿರಲಿಲ್ಲ, ಆದರೆ ಫೋಟೋವನ್ನು ಎಡಿಟ್ ಮಾಡಿ ಬೊಟ್ಟು ಇಟ್ಟಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು ಕಥೆ ಸೃಷ್ಟಿಸಿ ಧಾರ್ಮಿಕ ಕೇಂದ್ರದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಸುಜಾತಾ ಭಟ್ ಮತ್ತು ಅವರ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಾಸಂತಿ ಕುಟುಂಬದ ಸದಸ್ಯರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುವರ್ಣ ನ್ಯೂಸ್ನ ಈ ಸ್ಫೋಟಕ ವರದಿಯು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದಿರುವ ಸತ್ಯವನ್ನು ಮತ್ತಷ್ಟು ಬಯಲು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ