ಧರ್ಮಸ್ಥಳ ಅಸ್ಥಿಪಂಜರ ಪ್ರಕರಣ: ಅನನ್ಯಾ ಭಟ್ ತಾಯಿ ಸುಜಾತಾ ಭಟ್ ನಾಪತ್ತೆ, ಆರೋಪಗಳಿಗೆ ಸಾಕ್ಷ್ಯಗಳೇ ಇಲ್ಲ!

Published : Aug 13, 2025, 10:26 AM IST
Dharmasthala Sujatha Bhat Case

ಸಾರಾಂಶ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಆರೋಪದ ಹಿನ್ನೆಲೆಯಲ್ಲಿ ದೂರು ನೀಡಿದ್ದ ಸುಜಾತಾ ಭಟ್ ನಾಪತ್ತೆಯಾಗಿದ್ದಾರೆ. ಅವರ ಮಗಳು ಅನನ್ಯಾ ಭಟ್ ನಾಪತ್ತೆ ಬಗ್ಗೆ ಸಾಕ್ಷ್ಯಗಳಿಲ್ಲದೆ ಪೊಲೀಸರು ಗೊಂದಲಕ್ಕೀಡಾಗಿದ್ದಾರೆ. ಮಣಿಪಾಲ ಕಾಲೇಜು ದಾಖಲೆಗಳಲ್ಲೂ ಅನನ್ಯಾ ಭಟ್ ಹೆಸರಿಲ್ಲ. ಸುಜಾತಾ ಭಟ್ ಉದ್ದೇಶ ನಿಗೂಢವಾಗಿದೆ.

ದಕ್ಷಿಣ ಕನ್ನಡ (ಆ.13): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳ ಅಸ್ಥಿಪಂಜರ ಹುಡುಕಾಟ ಪ್ರಕರಣ ಇದೀಗ ಮತ್ತೊಂದು ರೋಚಕ ತಿರುವು ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸುಜಾತಾ ಭಟ್ ಇದೀಗ ತನಿಖಾಧಿಕಾರಿಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳು ಸಿಗದಿರುವುದು ಪೊಲೀಸರನ್ನು ಗೊಂದಲಕ್ಕೀಡು ಮಾಡಿದೆ.

ಸುಜಾತಾ ಭಟ್ ದೂರಿನಲ್ಲಿದ್ದ ಅಂಶಗಳೇನು?

2003ರಲ್ಲಿ ತನ್ನ ಮಗಳು ಅನನ್ಯಾ ಭಟ್, ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾಗ ಧರ್ಮಸ್ಥಳ ಪ್ರವಾಸಕ್ಕೆ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ಸುಜಾತಾ ಭಟ್ ದೂರು ನೀಡಿದ್ದರು. ದೇವಸ್ಥಾನದ ಸಿಬ್ಬಂದಿ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದನ್ನು ಕೆಲವರು ನೋಡಿದ್ದಾರೆಂದು, ಬೆಳ್ತಂಗಡಿ ಠಾಣೆಗೆ ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳದೆ ಬೈದು ಕಳುಹಿಸಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ವೀರೇಂದ್ರ ಹೆಗ್ಗಡೆ ಮತ್ತು ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಅವರಿಂದಲೂ ತನಗೆ ನಿಂದನೆ ಆಗಿದೆಯೆಂದು ಹೇಳಿದ್ದರು.

ಅಂದು ರಾತ್ರಿ ದೇವಸ್ಥಾನದ ಸಿಬ್ಬಂದಿ ತನ್ನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ತಲೆಗೆ ಹೊಡೆದಿದ್ದರಿಂದ ಮೂರು ತಿಂಗಳು ಕೋಮಾದಲ್ಲಿದ್ದೆ ಎಂದು ವಿವರಿಸಿದ್ದರು. ಅನಾಮಿಕ ದೂರುದಾರನ ವಿಷಯ ಗೊತ್ತಾದ ನಂತರ ತನ್ನ ಮಗಳ ಅಸ್ಥಿಪಂಜರ ಸಿಕ್ಕರೆ ಅದನ್ನು ತನಗೆ ನೀಡುವಂತೆ ಮನವಿ ಮಾಡಿದ್ದರು.

ಪೊಲೀಸರ ತನಿಖೆಗೆ ಅಸಹಕಾರ:

ದೂರು ದಾಖಲಿಸಿದ ನಂತರ ಸುಜಾತಾ ಭಟ್ ಪೊಲೀಸರ ಸಂಪರ್ಕಕ್ಕೆ ಸಿಗಲಿಲ್ಲ. ಅವರ ಪರ ವಕೀಲರೂ ತನಿಖೆಗೆ ಸಹಕರಿಸಲಿಲ್ಲ. ಪೊಲೀಸರು ಅನನ್ಯಾ ಭಟ್ ಅವರ ಫೋಟೋ ಅಥವಾ ಯಾವುದೇ ದಾಖಲೆಗಳನ್ನು ಕೇಳಿದಾಗ, 'ಮನೆಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಹೋಗಿವೆ' ಎಂದು ಸುಜಾತಾ ಭಟ್ ಹೇಳಿದ್ದಾರೆ. ಮಗಳ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಕಾಲೇಜು ದಾಖಲೆಗಳು ಯಾವುವೂ ಅವರ ಬಳಿ ಇರಲಿಲ್ಲ.

ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ '#ಜಸ್ಟಿಸ್‌ ಫಾರ್‌ ಅನನ್ಯಾ ಭಟ್' ಅಭಿಯಾನ ಆರಂಭವಾಗಿದ್ದು, ಸೌಜನ್ಯಾ ಪ್ರಕರಣದಂತೆಯೇ ಈ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. ಆದರೆ ದಾಖಲೆಗಳಿಲ್ಲದೆ ತನಿಖೆ ಮುಂದುವರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಮಣಿಪಾಲ ಕಾಲೇಜು ದಾಖಲೆಗಳಲ್ಲೂ ಅನನ್ಯಾ ಭಟ್ ಇಲ್ಲ:

ಈ ಸವಾಲನ್ನು ಎದುರಿಸಿದ ಪೊಲೀಸರು, ಸುಜಾತಾ ಭಟ್ ದೂರಿನಲ್ಲಿದ್ದ ಪ್ರಮುಖ ಅಂಶವನ್ನೇ ಪರಿಶೀಲಿಸಲು ಮುಂದಾದರು. ಅನನ್ಯಾ ಭಟ್ ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ 2003ರಲ್ಲಿ ಎಂಬಿಬಿಎಸ್ ಓದುತ್ತಿದ್ದಳು ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಣಿಪಾಲ್ ಗ್ರೂಪ್‌ನ ಎರಡೂ ಮೆಡಿಕಲ್ ಕಾಲೇಜುಗಳಿಗೆ ಭೇಟಿ ನೀಡಿದರು.

1998ರಿಂದ 2005ರವರೆಗಿನ ದಾಖಲೆಗಳನ್ನು ಪರಿಶೀಲಿಸಿದಾಗ, ಅನನ್ಯಾ ಭಟ್ ಡಿ/ಓ ಅನಿಲ್ ಭಟ್ ಎಂಬ ಹೆಸರಿನ ಯಾವುದೇ ವಿದ್ಯಾರ್ಥಿನಿ ಅಲ್ಲಿ ವ್ಯಾಸಂಗ ಮಾಡಿರಲಿಲ್ಲ ಎಂಬುದು ದೃಢಪಟ್ಟಿದೆ. ಇದರಿಂದಾಗಿ ಸುಜಾತಾ ಭಟ್ ನೀಡಿದ ದೂರಿನ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಸುಜಾತಾ ಭಟ್ ಯಾರು? ಅವರ ಉದ್ದೇಶವೇನು? ಎಂಬುದು ಪೊಲೀಸರಿಗೂ ನಿಗೂಢವಾಗಿದ್ದು, ಪ್ರಕರಣ ಇನ್ನಷ್ಟು ಗೋಜಲಾಗಿದೆ.

ಧರ್ಮಸ್ಥಳದಲ್ಲಿ 15 ಪಾಯಿಂಟ್‌ಗಳ ಸಮಾಧಿ ಅಗೆದ ಎಸ್‌ಐಟಿ:

ಇನ್ನು ಅನಾಮಿಕ ದೂರುದಾರ ಹೇಳಿದಂತೆ ಧರ್ಮಸ್ಥಳದಲ್ಲಿ ವಿಶೇಷ ತನಿಖಾ ತಂಡವು ಒಟ್ಟು ಧರ್ಮಸ್ಥಳದ ಸುತ್ತಲಿನ ಕಾಡು ಹಾಗೂ ನದಿ ತೀರದ ಪ್ರದೇಶಗಳಲ್ಲಿ ಅಸ್ತಿಪಂಜರವನ್ನು ಹುಡುಕುವುದಕ್ಕೆ 15 ಗುಂಡಿಗಳನ್ನು ಅಗೆದಿದ್ದಾರೆ.  ಅದರಲ್ಲಿ ಒಂದರಲ್ಲಿ ಗಂಡಸಿನ ಶವ ಬಿಟ್ಟರೆ ಬೇರಾವ ಅಸ್ತಿಪಂಜರ ಸಿಕ್ಕಿಲ್ಲ. ಮುಂದಿನ ಹಂತದ ಕಾರ್ಯಾಚರಣೆ ಮಾಡಬೇಕಾ ಅಥವಾ ಬೇಡವಾ ಎಂಬುದನ್ನು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!