
ದಕ್ಷಿಣ ಕನ್ನಡ (ಆ.11): ಧರ್ಮಸ್ಥಳದ ಪದ್ಮಲತಾ ಅವರ ಅಸಹಜ ಸಾವಿನ ಪ್ರಕರಣದ ಕುರಿತು ವಿಶೇಷ ತನಿಖಾ ದಳ (SIT)ಗೆ ಮತ್ತೊಬ್ಬ ದೂರುದಾರ ಜಯಂತ್ ಮನವಿ ಸಲ್ಲಿಸಿದ್ದಾರೆ. ಸಿಐಡಿ ತನಿಖೆಯಲ್ಲಿ ನ್ಯಾಯ ಸಿಕ್ಕಿಲ್ಲ, ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಹೇಳಿರುವ ಅವರು, ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸುವಂತೆ SITಯನ್ನು ಆಗ್ರಹಿಸಿದ್ದಾರೆ. ಇನ್ನು ಅಗತ್ಯವಿದ್ದಲ್ಲಿ ನನ್ನ ಬಳಿ ಇರುವ ಸಾಕ್ಷಿಗಳನ್ನು ಎಸ್‌ಐಟಿಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ನನಗೆ ಜೀವಭಯವಿದೆ, ಆದರೆ ಹೋರಾಟ ನಿಲ್ಲಿಸುವುದಿಲ್ಲ:
SIT ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಂತ್, 'ಪದ್ಮಲತಾ ಅಪಹರಣ ಆಗಿರುವುದು ಸತ್ಯ. ಈ ಬಗ್ಗೆ ಯಾರು ತನಿಖೆ ನಡೆಸಿದ್ದರು, ಯಾರು ಅಪಹರಣ ಮತ್ತು ಕೊಲೆ ಮಾಡಿದ್ದರು ಎಂಬುದನ್ನು SIT ತನಿಖೆ ನಡೆಸಬೇಕು. ನಾನು ಈ ಪ್ರಕರಣದ ಎರಡನೇ ದೂರುದಾರನಾಗಿದ್ದೇನೆ. ದೂರು ನೀಡಿದಾಗಿನಿಂದಲೂ ನನ್ನನ್ನು ಹಲವರು ಹಿಂಬಾಲಿಸುತ್ತಿದ್ದು, ನನಗೆ ಜೀವಭಯವಿದೆ. ಆದರೆ ನಾನು ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ" ಎಂದು ಹೇಳಿದರು.
ಸಿಐಡಿ ತನಿಖೆ ಸರಿಯಾಗಿ ನಡೆದಿಲ್ಲ: 'ಪದ್ಮಲತಾ ಅವರ ಪ್ರಕರಣ ಆಗ ಸರಿಯಾಗಿ ತನಿಖೆಯಾಗಿಲ್ಲ. ಸಿಐಡಿ ಸರಿಯಾಗಿ ತನಿಖೆ ನಡೆಸಿಲ್ಲ. ಪದ್ಮಲತಾ ನಮ್ಮ ಸಂಬಂಧಿಯೇ. ಈಗಾಗಲೇ ಪದ್ಮಾವತಿ ಅವರ ಅಕ್ಕ ಕೂಡ SITಗೆ ದೂರು ನೀಡಲಿದ್ದಾರೆ. SIT ಮೇಲೆ ನಮಗೆ ನಂಬಿಕೆ ಇದೆ ಮತ್ತು ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವೂ ಇದೆ' ಎಂದು ಜಯಂತ್ ತಿಳಿಸಿದರು.
ಸಾಕ್ಷ್ಯಗಳನ್ನು ನೀಡಲು ಸಿದ್ಧ:
ತಮ್ಮ ದೂರಿಗೆ ಸಂಬಂಧಿಸಿದಂತೆ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದ ಜಯಂತ್, 'ನನ್ನ ಬಳಿ ದೂರಿನ ಸಾಕ್ಷ್ಯ ಇವತ್ತಿಗೂ ಇದೆ. ಅದನ್ನು ನಾನು SITಗೆ ನೀಡುತ್ತೇನೆ. ಅವರು ಅದನ್ನು ಮಾಧ್ಯಮದವರಿಗೆ ಕೊಡಲಿ ಎಂದು ಅವರು ಹೇಳಿದರೆ ನಾನು ಕೊಡುತ್ತೇನೆ. ನನ್ನ ಆರೋಪ ಸುಳ್ಳು ಎಂದು ಯಾರಾದರೂ ಹೇಳಿದರೆ ನನ್ನ ಮೇಲೆ ಕೇಸ್ ಹಾಕಲಿ. ನಾನು ಯಾವುದೇ ಮುಖವಾಡ ಹಾಕುವುದಿಲ್ಲ, ಯಾವುದಕ್ಕೂ ಭಯಪಡುವುದಿಲ್ಲ' ಎಂದು ಸವಾಲು ಹಾಕಿದರು.
SIT ದೂರು ಸ್ವೀಕರಿಸದಿದ್ದರೆ ಉಪವಾಸ ಸತ್ಯಾಗ್ರಹ:
ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರರ ಮೇಲಿನ ಹಲ್ಲೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಜಯಂತ್ ಸ್ಪಷ್ಟಪಡಿಸಿದರು. ನಾನು ಏನಾಗಿದೆ ಎಂದು ಕೇಳಲು ಆಸ್ಪತ್ರೆಯ ಬಳಿ ಮಾತ್ರ ಹೋಗಿದ್ದೆ. ಮಾಧ್ಯಮದವರ ಮೇಲೆ ಹಲ್ಲೆ ನಡೆಸುವ ನಾಯಕರ ಹೇಳಿಕೆಗಳು ತಪ್ಪಾಗಿದ್ದು, ನಾನು ಅದನ್ನು ಒಪ್ಪುವುದಿಲ್ಲ. ನಾನು ಹೋರಾಟಗಾರ, ಸತ್ಯ ಹೊರಬರಬೇಕು. ಒಂದು ವೇಳೆ SIT ಅಧಿಕಾರಿಗಳು ದೂರು ಸ್ವೀಕರಿಸದೆ ಇದ್ದಲ್ಲಿ, ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣವು ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ