* ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಮಾಡುವುದು ಹೈಕಮಾಂಡ್: ಸಿದ್ದು
* ನಾನೆಲ್ಲೂ ಸಿಎಂ ಆಗುವೆ ಎಂದು ಹೇಳಿಲ್ಲ
* ಶಾಸಕರ ವೈಯಕ್ತಿಕ ಹೇಳಿಕೆ ಪಕ್ಷದ ಹೇಳಿಕೆಯಲ್ಲ
ಕೊಪ್ಪಳ(ಜೂ.22): ‘ನಾನು ಸಿಎಂ ಆಗುವೆ ಎಂದು ಎಲ್ಲೂ ಹೇಳಿಲ್ಲ. ನಾನು ಮುಖ್ಯಮಂತ್ರಿ ಆಗಬೇಕು ಎಂದು ಕೆಲವು ಶಾಸಕರು ಹೇಳುತ್ತಿದ್ದು ಅದು ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಕಾಂಗ್ರೆಸ್‌ನಲ್ಲಿ ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಹೈಕಮಾಂಡ್’
-ಇದು ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಶಾಸಕರಾದ ಜಮೀರ್ ಅಹ್ಮದ್, ರಾಘವೇಂದ್ರ ಹಿಟ್ನಾಳ ಅವರು ನೀಡಿರುವ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಶಾಸಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಚನಾವಣೆ ಬಳಿಕವೇ ನಡೆಯುತ್ತದೆ. ಗೆದ್ದಿರುವ ಶಾಸಕರ ಅಭಿಪ್ರಾಯ ಪಡೆದು, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೀಗಾಗಿ, ಶಾಸಕರ ಅಭಿಪ್ರಾಯ ಪಕ್ಷದ ಅಭಿಪ್ರಾಯ ಆಗುವುದಿಲ್ಲ ಎಂದರು. ಈ ವೇಳೆ ಶಾಸಕರಾದ ಜಮೀರ್ ಅಹ್ಮದ್, ರಾಘವೇಂದ್ರ ಹಿಟ್ನಾಳ್ ಅವರು ಸಿದ್ದರಾಮಯ್ಯ ಪಕ್ಕದಲ್ಲೇ ನಿಂತಿದ್ದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ದೆಹಲಿಗೆ ಹೋಗಿರುವುದು ಈ ಕಾರಣಕ್ಕಾಗಿ ಅಲ್ಲ. ಅವರು ನನಗೆ ಹೇಳಿಯೇ ದೆಹಲಿಗೆ ಹೋಗಿದ್ದಾರೆ. ಏನೇನೋ ಅರ್ಥ ಕಲ್ಪಿಸಬೇಡಿ. ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳು ಇಲ್ಲ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ಒಂದೇ ಇರುವುದು ಎಂದರು.
ಮುಂದೆ ಯಾವ ಕ್ಷೇತ್ರದಲ್ಲಿ ಚುನಾವಣೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ, ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವ ಕುರಿತು ಈಗಲೇ ಯಾಕೆ ಚರ್ಚೆ ಮಾಡುತ್ತಿದ್ದೀರಿ? ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ಇನ್ನು ಎರಡು ವರ್ಷ ಅವಧಿ ಇದೆ. ಚುನಾವಣೆ ಬಂದಾಗ ನೋಡೋಣ ಎಂದರು.