
ಬೆಂಗಳೂರು, (ಜೂನ್.21): ಕರ್ನಾಟಕ ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬಿಎಸ್ಸಿ ಅಗ್ರಿ ಮತ್ತು ಇತರ ಸಮಾನ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ಇದ್ದ ಮೀಸಲಾತಿ ಪ್ರಮಾಣವನ್ನು ಶೇ 40ರಿಂದ ಶೇ 50ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಇಂದು (ಸೋಮವಾರ) ನಡೆದ ಸಚಿವ ಸಂಪುಟ ಸಭೆಯ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳಿಗೆ ಸಂಪುಟ ಸಭೆಯ ತೀರ್ಮಾನಗಳನ್ನು ತಿಳಿಸಿದರು. ಅದು ಈ ಕೆಳಗಿನಂತಿವೆ.
ಸಂಪುಟ ಸಭೆಯ ತೀರ್ಮಾನಗಳು
* ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಸೌಧ ಮತ್ತು ಇತರ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸಲು ಸಭೆಯು ಆಡಳಿತಾತ್ಮಕ ಅನುಮೋದನೆ.
* ರಾಜ್ಯದ ಸಾದಿಲ್ವಾರು ನಿಧಿಯನ್ನು 2500 ಕೋಟಿಗೆ ಹೆಚ್ಚಿಸಲು, ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಕಾಮಗಾರಿ ನಿರ್ವಹಣೆಗೆ 154 ಕೋಟಿ, 200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ನಿರ್ವಹಿಸಲು ಅನುದಾನ ಒದಗಿಸಲು ಸಂಪುಟ ಸಭೆ ಸಮ್ಮತಿ.
* ರಾಜ್ಯದ ವಿವಿಧ ಪುರಸಭೆಗಳ ವ್ಯಾಪ್ತಿಯಲ್ಲಿ ಲೋಡರ್ಗಳು ಮತ್ತು ಡ್ರೈವರ್ಗಳನ್ನು ವಿಶೇಷ ನಿಯಮಗಳ ಅಡಿ ನೇಮಿಸಿಕೊಳ್ಳಲು ಗ್ರೀನ್ ಸಿಗ್ನಲ್.
* ಕರ್ನಾಟಕ ಟೌನ್ ಪ್ಲಾನಿಂಗ್ ಆಕ್ಟ್ 1961ಗೆ ತಿದ್ದುಪಡಿ ಮಾಡಲು ಸಭೆಯು ಸಮ್ಮತಿಸಿತು. ಟಿಡಿಆರ್ ಕೊಡುವ ವ್ಯವಸ್ಥೆಯನ್ನು ಯಾರು ಸಮೀಕ್ಷೆ ಮಾಡಿ ಕೊಡುತ್ತಾರೆ ಅದೇ ಅಂತಿಮ ಎಂಬ ನಿಯಮವನ್ನು ಸಡಿಸಲಾಗುವುದು. ಬಿಡಿಎ ಸಮೀಕ್ಷೆಗೆ ಬಿಡಿಎ ಒಪ್ಪಿಗೆ ನೀಡಬೇಕು. ಸಕಾಲದಲ್ಲಿ ಪ್ರತಿಕ್ರಿಯಿಸಿದ್ದರೆ ಡೀಮ್ಡ್ ಒಪ್ಪಿಗೆ ಅಂತ ತೀರ್ಮಾನ ಮಾಡಲು ಸಂಪುಟ ಸಭೆಯು ನಿರ್ಧಾರ.
* ರಾಜ್ಯದ 52 ಡ್ಯಾಂಗಳ ನವೀಕರಣ, ಹೂಳೆತ್ತುವುದು, ಎಲ್ಲವೂ ಸೇರಿ ವಿಶ್ವಬ್ಯಾಂಕ್ ನೆರವಿನಡಿ 1500 ಕೋಟಿ ಅನುದಾನ ಬಳಸಿಕೊಳ್ಳಲು ಸಂಪುಟ ಸಭೆ ತೀರ್ಮಾನ.
* ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 193.65 ಕೋಟಿ, ಅಂಕೋಲಾ ತಾಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ 25 ಕೋಟಿ, ಭಟ್ಕಳ, ಚಳ್ಳಕೆರೆ ಮಿನಿ ವಿಧಾನಸೌಧ ಕಟ್ಟಡಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ, ಅಥಣಿಯಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಇದೇ ವೇಳೆ ಶಾಲಾ ವಿದ್ಯಾರ್ಥಿಗಳ ಮಕ್ಕಳ ಸಮವಸ್ತ್ರ ಖರೀದಿಗೆ 83 ಕೋಟಿ ಒದಗಿಸಲು ಸಂಪುಟ ಸಭೆಯು ಸಮ್ಮತಿಸಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.
ರೇಣುಕಾಚಾರ್ಯಗೆ ಬಂಪರ್ ಗಿಫ್ಟ್
ಹೊನ್ನಾಳಿ ತಾಲೂಕಿನ ಗೋವಿನಕೋಯಿ, ಹನುಮಸಾಗರ ಏತನೀರಾವರಿಗೆ 415 ಕೋಟಿ 94 ಕೆರೆ ತುಂಬಿಸುವ ಯೋಜನೆ ಹಾಗೂ ಹೊನ್ನಾಳಿಯ ಸಾಸಿವೆಹಳ್ಳಿ ಏತನೀರಾವರಿಗೆ ಹೆಚ್ಚುವರಿ 167 ಕೋಟಿ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ನಾಯಕತ್ವ ಬದಲಾವಣೆ ಸಮಯದಲ್ಲಿ ಸಿಎಂ ಪರವಾಗಿ ನಿಂತ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್ ನೀಡಿದ್ದಾರೆ.
ಹೊನ್ನಾಳಿ ಕ್ಷೇತ್ರ ಸಾವಿರಾರು ಏಕರೆ ಭೂ ಪ್ರದೇಶಗಳಿಗೆ ಕೃಷಿ ಮತ್ತು ಕುಡಿಯುವ ನೀರು ಪೂರೈಕೆಯಾಗಲಿದೆ. ಅಲ್ಲದೆ, ಈ ಯೋಜನೆಗಳು ಹೊನ್ನಾಳಿಯ ಜನರ ದಶಕದ ಕನಸಾಗಿದೆ. ಇದಲ್ಲದೆ, ಇನ್ನೂ ಅನೇಕ ಯೋಜನೆಗಳಿಗೆ ಸಿಎಂ ಒಪ್ಪಿಗೆ ನೀಡಿದ್ದಾರೆ.
ಮಾಜಿ ಸಚಿವ ರೇಣುಕಾಚಾರ್ಯ ಹಲವು ಶಾಸಕರನ್ನ ಒಟ್ಟುಗೂಡಿಸಿ ಸಿಎಂ ಮುಂದುವರಿಕೆಗೆ ಅರುಣ್ ಸಿಂಗ್ ಬಳಿ ಒತ್ತಾಯ ಮಾಡಿದ್ದರು. ಅಲ್ಲದೆ, ರಾಜ್ಯ ಬಿಜೆಪಿ ಯಡಿಯೂರಪ್ಪ ನಾಯಕತ್ವವನ್ನು ಬಲವಾಗಿ ನಂಬಿಕೊಂಡಿದೆ ಎಂದು ಮನದಟ್ಟು ಮಾಡಿದ್ದರು. ಇದೇ ಕಾರಣಕ್ಕೆ ಅರುಣ್ ಸಿಂಗ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲು ಒಲವು ತೋರಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ ರೇಣುಕಾಚಾರ್ಯ ಅವರ ಕ್ಷೇತ್ರದ ಹಲವು ವರ್ಷಗಳ ಬೇಡಿಕೆಗಳಿಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ