ವಿವಾಹದ ಬಳಿಕ ದೈಹಿಕ ಸಂಪರ್ಕ ನಿರಾಕರಣೆ ಕ್ರೌರ್ಯವಲ್ಲ: ಹೈಕೋರ್ಟ್‌

Published : Jun 21, 2023, 01:30 AM IST
ವಿವಾಹದ ಬಳಿಕ ದೈಹಿಕ ಸಂಪರ್ಕ ನಿರಾಕರಣೆ ಕ್ರೌರ್ಯವಲ್ಲ: ಹೈಕೋರ್ಟ್‌

ಸಾರಾಂಶ

ಮದುವೆ ನಂತರ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪತ್ನಿಯು ಐಪಿಸಿ ಸೆಕ್ಷನ್‌ 498-ಎ ಅಡಿಯಲ್ಲಿ ಕ್ರೌರ್ಯ ಎಸಗಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು(ಜೂ.21):  ಮದುವೆಯ ಬಳಿಕ ದೈಹಿಕ ಸಂಪರ್ಕಕ್ಕೆ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ನಿಸ್ಸಂದೇಹವಾಗಿ ಕ್ರೌರ್ಯವಾದರೂ, ಭಾರತೀಯ ದಂಡ ಸಂಹಿತೆ ಸೆಕ್ಷನ್‌ (ಐಪಿಸಿ) 498-ಎ ಅಡಿಯಲ್ಲಿ ಹೇಳಿರುವಂತಹ ಕ್ರೌರ್ಯ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಮಾಡಿದೆ.

ಮದುವೆ ನಂತರ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪತ್ನಿಯು ಐಪಿಸಿ ಸೆಕ್ಷನ್‌ 498-ಎ ಅಡಿಯಲ್ಲಿ ಕ್ರೌರ್ಯ ಎಸಗಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

​ಎ​ಚ್‌​ಡಿಕೆಯಿಂದ ಜಮೀನು ವಾಪಸ್‌ ಪಡೆ​ದಿ​ದ್ದೀ​ರಾ?: ಹೈಕೋರ್ಟ್‌

ಪ್ರಕರಣದ ವಿವರ:

ಬೆಂಗಳೂರಿನ ನಿತ್ಯಾ ಮತ್ತು ನಿಶಾಂತ್‌ (ಇಬ್ಬರ ಹೆಸರು ಬದಲಿಸಲಾಗಿದೆ) 2019ರ ಡಿ.18ರಂದು ಮದುವೆಯಾಗಿದ್ದರು. ಆದರೆ, ಮದುವೆಯಾದ ನಂತರ 28 ದಿನ ಮಾತ್ರ ಪತಿಯ ಮನೆಯಲ್ಲಿ ಪತ್ನಿ ನೆಲೆಸಿದ್ದರು. ಆ ಬಳಿಕ ಮನೆ ತೊರೆದಿದ್ದರು. 2020ರ ಫೆ.5ರಂದು ಜೆ.ಪಿ. ನಗರ ಠಾಣೆಗೆ ತೆರಳಿ, ಪತಿ ಮತ್ತು ಆತನ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್‌ 498-ಎ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಸೆಕ್ಷನ್‌ 4 ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ಮತ್ತೊಂದೆಡೆ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್‌ 12(1)(ಎ) ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಕ್ರೌರ್ಯದ ಆಧಾರದ ಮೇಲೆ ಮದುವೆ ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿದ್ದರು.
ಕ್ರಿಮಿನಲ್‌ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ನಿಶಾಂತ್‌ ಮತ್ತವರ ತಂದೆ-ತಾಯಿ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ದೋಷಾರೋಪ ಪಟ್ಟಿರದ್ದು ಕೋರಿ ನಿಶಾಂತ್‌ 2021ರ ಸೆ.6ರಂದು ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. 2021ರ ಸೆ.14ರಂದು, ನಿಶಾಂತ್‌ ಹಾಗೂ ಅವರ ತಂದೆ-ತಾಯಿ ವಿರುದ್ಧದ ದೋಷಾರೋಪ ಪಟ್ಟಿಮತ್ತು ಮ್ಯಾಜಿಸ್ಪ್ರೇಟ್‌ ಕೋರ್ಚ್‌ನ ಮುಂದಿನ ಪ್ರಕ್ರಿಯೆಗೆ ತಡೆ ನೀಡಿತ್ತು. ಈ ಮಧ್ಯ 2022ರ ನ.16ರಂದು ದಂಪತಿಯ ಮದುವೆಯನ್ನು ಅನೂರ್ಜಿತಗೊಳಿಸಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಇದಾದ ನಂತರ ವರದಕ್ಷಿಣೆ ಕಿರುಕುಳ ಆರೋಪದಡಿ ನಿಶಾಂತ್‌ ವಿರುದ್ಧ ಪ್ರಕರಣವನ್ನು ನಿತ್ಯಾ ಮುಂದುವರಿಸಿದ್ದರು.

ನಿತ್ಯಾ ಆರೋಪವೇನು?

ಮದುವೆ ನಂತರ ಪತಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿರಲಿಲ್ಲ. ಈ ಕುರಿತು ಮಾತನಾಡಿದಾಗೆಲ್ಲಾ ಆಧ್ಯಾತ್ಮಿಕತೆ ಸಂಬಂಧಿಸಿದ ವಿಡಿಯೋ ನೋಡುತ್ತಾ, ನನಗೂ ಅದನ್ನು ನೋಡುವಂತೆ ಪತಿ ಒತ್ತಾಯಿಸುತ್ತಿದ್ದರು. ಜೊತೆಗೆ, ದೈಹಿಕ ಸಂಪರ್ಕದಲ್ಲಿ ನನಗೆ ಆಸಕ್ತಿ ಇಲ್ಲ. ದೈಹಿಕ ಸಂಪರ್ಕ ಬೆಳೆಸುವುದಷ್ಟೇ ಪ್ರೀತಿಯಲ್ಲ. ಆತ್ಮ-ಆತ್ಮಗಳನ್ನು ಬೆಸೆದು ಪ್ರೀತಿಸಬೇಕು ಎಂಬುದಾಗಿ ಹೇಳುತ್ತಿದ್ದರು. ಹಗಲು ರಾತ್ರಿ ಆಧ್ಯಾತ್ಮಿಕ ಚಿಂತಕರೊಬ್ಬರ ಪ್ರವಚನ ಕೇಳುತ್ತಿದ್ದರು. ಮದುವೆಯಾದ ಹಲವು ದಿನ ಕಳೆದರೂ ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ. ಇದು ಕ್ರೌರ್ಯಕ್ಕೆ ಸಮಾನವಾಗಲಿದೆ. ಮತ್ತೊಂದೆಡೆ ಪತಿ ಮತ್ತವರ ತಂದೆ-ತಾಯಿ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು.

ಭಾರತದಲ್ಲಿ ಫೇಸ್‌​ಬುಕ್‌ ಬಂದ್‌ ಮಾಡಿ​ಬಿ​ಡ್ತೇ​ವೆ: ಹೈಕೋರ್ಟ್‌ ಎಚ್ಚ​ರಿ​ಕೆ

ಪತ್ನಿಯ ಆರೋಪಗಳನ್ನು ಅಲ್ಲಗೆಳೆದಿದ್ದ ಪತಿ, ದೈಹಿಕ ಸಂಪರ್ಕ ಬೆಳೆಸದ ಕಾರಣಕ್ಕೆ ಪತ್ನಿ ವಿಚ್ಛೇದನಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಮದುವೆಯಾದ ನಂತರ ನನ್ನ ತಂದೆ-ತಾಯಿ ನಮ್ಮ ಜೊತೆಗೆ ನೆಲೆಸಿರಲಿಲ್ಲ. ಆದರೂ ಅವರನ್ನೂ ಸಹ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. ಐಪಿಸಿ 498ಎ ಅಡಿ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಯಾವೊಂದು ಅಂಶವೂ ಇಲ್ಲವಾಗಿದೆ. ಆದ್ದರಿಂದ ತಮ್ಮ ವಿರುದ್ದದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪತಿ ಆಧ್ಯಾತ್ಮಕ ಚಿಂತಕರೊಬ್ಬರ ಅನುಯಾಯಿಯಾಗಿದ್ದು, ಸದಾ ಅವರ ಪ್ರವಚನಗಳ ವಿಡಿಯೋ ನೋಡುತ್ತಾ ಆಧ್ಯಾತ್ಮಿಕತೆಯ ಕಡೆಗೆ ಪ್ರೇರಿತರಾಗಿದ್ದರು. ಯಾವತ್ತೂ ಸಹ ದೈಹಿಕ ಸಂಪರ್ಕ ಬೆಳೆಸುವ ಆಸಕ್ತಿ ತೋರಲೇ ಇಲ್ಲ ಎಂಬುದು ಪತ್ನಿಯ ಏಕೈಕ ಆರೋಪವಾಗಿದೆ. ಇದು ಹಿಂದೂ ವಿವಾಹ ಕಾಯ್ದೆಯಡಿ ನಿಸ್ಸಂದೇಹವಾಗಿ ಕ್ರೌರ್ಯ ಎನಿಸಲಿದೆ. ಆದರೆ, ಐಪಿಸಿ ಸೆಕ್ಷನ್‌ 498ಎ ಅಡಿಯಲ್ಲಿ ಹೇಳಿರುವಂತೆ ಕ್ರೌರ್ಯ ಅಪರಾಧ ಕೃತ್ಯವಾಗುವುದಿಲ್ಲ. ಕ್ರೌರ್ಯದ ಆಧಾರದ ಮೇಲೆ ಕೌಟುಂಬಿಕ ನ್ಯಾಯಾಲಯ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ನೀಡಿದೆ. ಅದೇ ಆಧಾರದ ಮೇಲೆ ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಲು ಅವಕಾಶ ಮಾಡಿಕೊಡಲಾಗದು ಎಂದು ಅಭಿಪ್ರಾಯಪಟ್ಟು, ಅರ್ಜಿದಾರ ಮತ್ತವರ ಪೋಷಕರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ