ನೀರಾ ಪಾನೀಯಕ್ಕೆ ಬೇಡಿಕೆ! 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಾರಾಟ ಮಳಿಗೆ ಆರಂಭ

By Kannadaprabha NewsFirst Published Feb 22, 2020, 9:19 AM IST
Highlights

ತೆಂಗು ಬೆಳೆಗಾರರಿಗೆ ಪರ್ಯಾಯ ಲಾಭ ತಂದು ಕೊಡುವ ‘ನೀರಾ’ ಪಾನೀಯಕ್ಕೆ ಉತ್ತಮ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನೀರಾ ಮಾರಾಟ ಮಳಿಗೆ ಆರಂಭಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ.

ಬೆಂಗಳೂರು (ಫೆ. 22):  ತೆಂಗು ಬೆಳೆಗಾರರಿಗೆ ಪರ್ಯಾಯ ಲಾಭ ತಂದು ಕೊಡುವ ‘ನೀರಾ’ ಪಾನೀಯಕ್ಕೆ ಉತ್ತಮ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನೀರಾ ಮಾರಾಟ ಮಳಿಗೆ ಆರಂಭಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ.

ಬೆಂಗಳೂರು ನಗರದಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ನೀರಾ ಮಾರಾಟ ಮಳಿಗೆ ಪ್ರಾರಂಭವಾಗಿದ್ದು, ಈಗ ಹಾಪ್‌ ಕಾಮ್ಸ್‌ಗಳ ಸಹಭಾಗಿತ್ವದಲ್ಲಿ ಬೆಂಗಳೂರು ನಗರದ ಐದು ಭಾಗಗಳಲ್ಲಿ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಳಿಗೆಗಳು ಪ್ರಾರಂಭವಾಗಲಿವೆ.

ಸದ್ಯ ನಗರದ ಲಾಲ್‌ಬಾಗ್‌, ನಗರ ಸಿವಿಲ್‌ ನ್ಯಾಯಾಲಯ ಆವರಣ ಮತ್ತು ಜೆ.ಪಿ.ನಗರದ ಹಾಪ್‌ಕಾಮ್ಸ್‌ನಲ್ಲಿ ಮಾತ್ರ ನೀರಾ ಲಭ್ಯವಾಗುತ್ತಿತ್ತು. ಇನ್ನು ಮುಂದೆ ಪೀಣ್ಯ ಎರಡನೇ ಹಂತ, ಮತ್ತಿಕೆರೆಯ ಜೆ.ಪಿ.ಪಾರ್ಕ್, ಹನುಮಂತನಗರ, ಜಯನಗರ 4ನೇ ಹಂತ, ಕನಕಪುರ ರಸ್ತೆ, ಮಲ್ಲೇಶ್ವರ, ಕೆ.ಆರ್‌.ಪುರದಲ್ಲಿ ಮಳಿಗೆ ಪ್ರಾರಂಭವಾಗುತ್ತಿದ್ದು, ಇದರಿಂದ ರೈತರಿಗೆ ಮತ್ತಷ್ಟುಲಾಭ ತಂದುಕೊಡುವ ನಿರೀಕ್ಷೆಯಿದೆ ಎಂದು ನೀರಾ ಉತ್ಪಾದಿಸುವ ಮಲೆನಾಡು ನಟ್ಸ್‌ ಅಂಡ್‌ ಸ್ಪೈಸ್‌ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

100 ರೈತ ಕುಟುಂಬಗಳಿಗೆ ಲಾಭ

ರಾಜ್ಯದಲ್ಲಿ ಮಲೆನಾಡು ನಟ್ಸ್‌ ಅಂಡ್‌ ಸ್ಪೈಸ್‌ ಉತ್ಪಾದಕ ಸಂಘಕ್ಕೆ ಈವರೆಗೂ ಸುಮಾರು 15ಕ್ಕೂ ಹೆಚ್ಚು ರೈತರನ್ನು ನೋಂದಣಿ ಮಾಡಿಕೊಂಡಿದ್ದು, ಪ್ರತಿ ವರ್ಷ ಮರವೊಂದಕ್ಕೆ ವಾರ್ಷಿಕ .6 ಸಾವಿರ ನೀಡಲಾಗುತ್ತಿದೆ.

ಈ ಸಂಸ್ಥೆ 2020ರ ಅಂತ್ಯದ ವೇಳೆಗೆ 100 ಜನ ರೈತರನ್ನು ನೋಂದಾಯಿಸಿಕೊಳ್ಳುವ ಉದ್ದೇಶವಿದೆ. ನೀರಾ ತೆಗೆಯುವುದರಿಂದ ತೆಂಗಿನ ಬೆಳೆ ಬರುವಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ, ಬದಲಾಗಿ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ ನೀರಾ ಮೂಲಕ ಹೆಚ್ಚುವರಿ ಆದಾಯ ಬರಲಿದೆ ಎಂದು ಅವರು ವಿವರಿಸಿದರು.

ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸ್‌ ಉತ್ಪಾದಕ ಸಂಘದಿಂದ ರೈತರಿಗೆ ನೆರವಾಗುವುದು ಮತ್ತು ಸಾರ್ವಜನಿಕರಿಗೆ ಶುದ್ಧ ಮತ್ತು ಆರೋಗ್ಯಕರ ಪಾನೀಯ ನೀಡುವುದು ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರೈತರೊಂದಿಗೆ ಸಂಘವನ್ನು ಪ್ರಾರಂಭಿಸಿದ್ದು ಒಟ್ಟು 1010 ಸದಸ್ಯರು ಪಾಲುದಾರನ್ನು ಹೊಂದಿದೆ. ಸಂಘದಿಂದ ಅವರಿಗೆ ಲಾಭಾಂಶ ಮಾಡಿಕೊಡುವುದು ಮುಖ್ಯ ಉದ್ದೇಶವಾಗಿದೆ.

click me!