
ಬೆಂಗಳೂರು/ಮಂಡ್ಯ (ಏ.14): ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ರಾಂತಿಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ 'ಭಾರತ ರತ್ನ' ಪ್ರಶಸ್ತಿ ಘೋಷಿಸಬೇಕು ಎಂಬ ಕೂಗು ಬಲವಾಗಿದೆ. ನಾಳೆ (ಏ.15ರಂದು) ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈ ಕುರಿತು ಪ್ರಧಾನಿಗಳಿಗೆ ಅಧಿಕೃತವಾಗಿ ಶಿಫಾರಸು ಮಾಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ನಾಳೆ ಆದಿಚುಂಚನಗಿರಿ ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 'ಗುರು ಭೈರವೈಕ್ಯ ಮಂದಿರ'ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡುವಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹಾಗೂ ಎಂಎಲ್ಸಿ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೂ ಈ ಕುರಿತು ಪತ್ರ ಬರೆದು ಬೆಂಬಲ ಕೋರಿದ್ದಾರೆ.
ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೇವಲ ಒಬ್ಬ ಆಧ್ಯಾತ್ಮಿಕ ಗುರುವಾಗಿರಲಿಲ್ಲ, ಬದಲಿಗೆ ಆಧುನಿಕ ಕರ್ನಾಟಕದ ಶಿಲ್ಪಿಯಾಗಿದ್ದರು. ಅವರು ಪೀಠ ಅಲಂಕರಿಸಿದಾಗ ಮಠಕ್ಕೆ ಅಷ್ಟೊಂದು ಪ್ರಸಿದ್ಧಿ ಇರಲಿಲ್ಲ. ಆದರೆ ತಮ್ಮ ದಣಿವರಿಯದ ದುಡಿಮೆ ಮತ್ತು ದೂರದೃಷ್ಟಿಯಿಂದ ಚುಂಚನಗಿರಿಯನ್ನು 'ಚಿನ್ನದ ಗಿರಿ'ಯನ್ನಾಗಿ ಪರಿವರ್ತಿಸಿದರು. ಸಾಮಾನ್ಯ ವ್ಯಕ್ತಿಗಳು 300 ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಶ್ರೀಗಳು ಕೇವಲ 33 ವರ್ಷಗಳ ಅವಧಿಯಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಪತ್ರದಲ್ಲಿ ಬಣ್ಣಿಸಲಾಗಿದೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಲು ಶ್ರೀಗಳು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇಂದು 'ಆದಿಚುಂಚನಗಿರಿ ವಿಶ್ವವಿದ್ಯಾಲಯ'ವಾಗಿ ಹೆಮ್ಮರವಾಗಿ ಬೆಳೆದಿರುವ ಈ ಸಂಸ್ಥೆಗಳಲ್ಲಿ ವಾರ್ಷಿಕ 1.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ, ಗ್ರಾಮೀಣ ಜನತೆಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ.
ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಯ ಉಳಿವಿಗಾಗಿ 60ಕ್ಕೂ ಹೆಚ್ಚು ವೇದ ಪಾಠಶಾಲೆಗಳನ್ನು ತೆರೆದಿದ್ದ ಶ್ರೀಗಳು, ಜಾತಿ-ಮತದ ಭೇದವಿಲ್ಲದೆ ಲಕ್ಷಾಂತರ ಜನರಿಗೆ ಅನ್ನದಾಸೋಹ ಮತ್ತು ವಸತಿ ಸೌಲಭ್ಯ ಒದಗಿಸಿದ್ದರು. ಅವರ ಈ ಅಸಾಧಾರಣ ಮಾನವೀಯ ಕಾರ್ಯಗಳನ್ನು ಗುರುತಿಸಿ 'ಭಾರತ ರತ್ನ' ನೀಡುವುದು ಕೋಟ್ಯಂತರ ಭಕ್ತರ ಹಾಗೂ ಕನ್ನಡಿಗರ ಬಹುದಿನಗಳ ಆಶಯವಾಗಿದೆ. ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಬೇಕೆಂದು ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ