
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.4) : ಇವರೆಲ್ಲಾ ದೇಶದ ಮುಂದಿನ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರು. ಪುಟಾಣಿ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಜೊತೆಗೆ ವಿದ್ಯೆಯನ್ನು ಕಲಿಸುವ ಕೆಲಸವನ್ನೂ ಒಟ್ಟೊಟ್ಟಿಗೆ ಮಾಡುವ ಇವರ ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಅದಕ್ಕೆ ಕಾರಣ ಅಂಗನಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಪ್ರತೀ ತಿಂಗಳು ದೊರೆಯುವ ಗೌರವಧನ ಕಳೆದ ನಾಲ್ಕು ತಿಂಗಳಿನಿಂದ ದೊರೆತ್ತಿಲ್ಲ ಎನ್ನುವುದು. ಇದನ್ನೇ ನಂಬಿಕೊಂಡು ಸ್ವಂತ ಮನೆಯೂ ಇಲ್ಲದೆ ಬಾಡಿಗೆ ಮನೆಗಳಲ್ಲಿ ಬದುಕುವ ಕೊಡಗಿನ ಎಷ್ಟೋ ಅಂಗನವಾಡಿ ನೌಕರರು ಈಗ ಅನಿವಾರ್ಯವಾಗಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಹೌದು ನಾಲ್ಕು ತಿಂಗಳಿನಿಂದ ಗೌರವಧನ ಸಿಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ರಜಾ ದಿನಗಳಲ್ಲಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗಿ ಬರುವ ಕೂಲಿ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ.
ಎಷ್ಟೋ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದು, ತಿಂಗಳಿಗೆ ಐದರಿಂದ ಆರು ಸಾವಿರ ರೂಪಾಯಿಯನ್ನು ಮನೆ ಬಾಡಿಗೆಯನ್ನೇ ಭರಿಸಬೇಕು. ಜೊತೆಗೆ ವಿವಿಧ ಕಾರಣಗಳಿಗೆ ಬ್ಯಾಂಕುಗಳಿಂದ ಸಾಲ ಮಾಡಿಕೊಂಡಿದ್ದು, ಇಎಂಐ ಕಟ್ಟಬೇಕು. ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು. ತಿಂಗಳಿಗೆ ಸಿಗುವ ಕೇವಲ 11250 ರೂಪಾಯಿ ಗೌರವಧನ ಪ್ರತೀ ತಿಂಗಳು ಬರುತ್ತಿದ್ದರಿಂದ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದೆವು. ಆದರೆ ನಾಲ್ಕು ತಿಂಗಳಿನಿಂದ ಅದೂ ಬಾರದೆ ಇರುವುದರಿಂದ ಅನಿವಾರ್ಯವಾಗಿ ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭಾನುವಾರ ಅಥವಾ ಇತರೆ ರಜೆ ದಿನಗಳಂದು ಕಾಫಿ ತೋಟಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ಬದುಕು ದೂಡುತ್ತಿದ್ದೇವೆ ಎನ್ನುತ್ತಾರೆ ಮಡಿಕೇರಿಯ ಅಂಗನವಾಡಿಯೊಂದರ ಶಿಕ್ಷಕಿ ಸುಮಿತ್ರಾ.
ಚಾಮುಂಡಿ ಬೆಟ್ಟದ ಪ್ರಾಧಿಕಾರದ ಸಭೆ ಅಕ್ರಮ, ನಾನು ಹೋಗಲ್ಲ: ಸಂಸದ ಯದುವೀರ್
ಇಂತಹ ದುಃಸ್ಥಿತಿ ನಮಗೆ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಂದೆಂದೂ ನಾವು ಇಷ್ಟು ತಿಂಗಳ ಕಾಲ ಗೌರವಧನವೇ ಇಲ್ಲದ ಪರಿಸ್ಥಿತಿ ಬಂದಿರಲಿಲ್ಲ. ಒಂದು ತಿಂಗಳೇನಾದರೂ ಗೌರವ ಸಿಗದಿದ್ದರೆ ಎರಡನೇ ತಿಂಗಳಲ್ಲಿ ಒಟ್ಟಿಗೆ ಗೌರವಧನ ದೊರೆಯುತಿತ್ತು. ಆದರೆ ಈ ಭಾರಿ ನಾಲ್ಕು ತಿಂಗಳು ಕಳೆದು ಐದನೇ ತಿಂಗಳಿನಲ್ಲಿ ಇದ್ದರೂ ಗೌರವಧನವಿಲ್ಲ ಎಂದು ಮಡಿಕೇರಿಯ ಮತ್ತೊಂದು ಅಂಗನವಾಡಿಯ ಶಿಕ್ಷಕಿ ಗೀತಾ ಅಳಲು ತೋಡಿಕೊಂಡಿದ್ದಾರೆ.
ಕೊಡಗು ಜಿಲ್ಲೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಇಂತಹ ದುಃಸ್ಥಿತಿ ಎದುರಾಗುವುದನ್ನು ನೋಡಿದರೆ ಅಂಗನವಾಡಿ ನೌಕರರಿಗೆ ಗೌರವಧನವನ್ನು ನೀಡುವುದಕ್ಕೂ ಸಾಧ್ಯವಿಲ್ಲದಂತಹ ದುಃಸ್ಥಿತಿ ಸರ್ಕಾರಕ್ಕೆ ಬಂದೊದಗಿದೆಯೇ ಎನ್ನುವ ದೊಡ್ಡ ಸಂಶಯ ಎದುರಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಅಂಗನವಾಡಿ ನೌಕರರಿಗೆ ಗೌರವಧನ ಸಿಗದಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅವರನ್ನು ಕೇಳಿದರೆ ಎರಡು ತಿಂಗಳ ಗೌರವಧನ ಮಾತ್ರವೇ ಬಾಕಿ ಇದೆ. ಬಜೆಟ್ ಇಲ್ಲದ ಕಾರಣ ಗೌರವಧನ ಬಿಡುಗಡೆ ಮಾಡಲಾಗಿಲ್ಲ. ಕೇಂದ್ರದಿಂದಲೂ ಬಜೆಟ್ ಬರಬೇಕಾಗಿದ್ದು, ಅದು ಬರುತ್ತಿದ್ದಂತೆ ಬಿಡುಗಡೆ ಮಾಡಲಾಗುವುದು ಎನ್ನುತ್ತಿದ್ದಾರೆ.
ಏನೇ ಆಗಲಿ ಪುಟ್ಟ ಪುಟ್ಟ ಮಕ್ಕಳನ್ನು ಪಾಲನೆ ಮಾಡುತ್ತಾ ಅವರಿಗೆ ವಿದ್ಯೆಯನ್ನು ಕಲಿಸುವ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಕೂಲಿ ಕೆಲಸ ಮಾಡಿಕೊಂಡು ಬದುಕು ದೂಡುವಂತೆ ಆಗಿರುವುದು ಮಾತ್ರ ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ