ಚಿಕ್ಕಮಗಳೂರು: ಬಾಬಾ ಬುಡಾನ್ ದರ್ಗಾದ ಶಾಖಾದ್ರಿ ನಿವಾಸದಲ್ಲಿ ಜಿಂಕೆ, ಚಿರತೆ ಚರ್ಮ ಪತ್ತೆ!

By Govindaraj S  |  First Published Oct 28, 2023, 12:30 AM IST

ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ಕಳಸದ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಬಂಧನ ಜೊತೆಗೆ ಶಾಖಾದ್ರಿ ಮನೆಯಲ್ಲಿ ಪತ್ತೆಯಾದ ಚಿರತೆ, ಜಿಂಕೆ ಚರ್ಮ ಜಿಲ್ಲೆಯ ಪ್ರಮುಖ ಬೆಳವಣಿಗೆಯಾಗಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.28): ಹುಲಿ ಉಗುರು ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ವಿವಿಧ ಪ್ರಕರಣ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಂಚಲನ ಮೂಡಿಸಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ಕಳಸದ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಬಂಧನ ಜೊತೆಗೆ ಶಾಖಾದ್ರಿ ಮನೆಯಲ್ಲಿ ಪತ್ತೆಯಾದ ಚಿರತೆ, ಜಿಂಕೆ ಚರ್ಮ ಜಿಲ್ಲೆಯ ಪ್ರಮುಖ ಬೆಳವಣಿಗೆಯಾಗಿದೆ.ಇದರ ನಡುವೆ ಖಾಂಡ್ಯದ ಇತಿಹಾಸಪ್ರಸಿದ್ಧ ಮಾರ್ಕಾಂಡೇಶ್ವ ದೇವಾಲಯದ ಇಬ್ಬರು ಅರ್ಚಕರ ಬಂಧನದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಅರ್ಚಕರ ಪರಿಷತ್ತು ಕೊಪ್ಪಕ್ಕೆ ಭೇಟಿ ನೀಡಿ ಅರ್ಚಕರ ಬಿಡುಗಡೆಗೆ ಒತ್ತಾಯಿಸಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿವೆ.

Tap to resize

Latest Videos

ಶಾಖಾದ್ರಿಗೆ ಕಂಟಕ, ಬಂಧನದ ಭೀತಿ: ಹುಲಿ ಚರ್ಮದ ಮೇಲೆ ಕುಳಿತ ಆರೋಪ ಹೊತ್ತಿರುವ ಗೌಸ್ ಮೋಹಿದೀನ್ ಶಾಖಾದ್ರಿ ಮನೆ ತಪಾಸಣೆ ನಡೆಸಿದ ವೇಳೆ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಆಗಿದೆ.ಎರಡೂ ಪ್ರಾಣಿಯ ಚರ್ಮವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಎಸ್ ಎಫ್ ಎಲ್ ವರದಿಗೆ ಕಳಿಸಲಿದ್ದಾರೆ. ಶಾಖಾದ್ರಿ ಹುಲಿ ಚರ್ಮದ ಮೇಲೆ ಕುಳಿತಿರುವ ಭಾವಚಿತ್ರ ದೊಂದಿಗೆ ನೀಡಿದ ದೂರು ಆಧರಿಸಿ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಮಾರ್ಕೆಟ್ ರಸ್ತೆಗೆ ಹೊಂದಿಕೊಂಡಿರುವ ರಸ್ತೆಯ ಮನೆಯನ್ನು ಶೋಧಿಸಲು10 ಗಂಟೆ ಕಾಲ ಅರಣ್ಯ ಅಧಿಕಾರಿಗಳು ಕಾದು ಕುಳಿತುಕೊಳ್ಳಬೇಕಾಯಿತು. 

ರಾಮನಗರದ ಕುರಿತು ಎಚ್‌ಡಿಕೆಗೆ ಪರಿಜ್ಞಾನ ಇಲ್ಲ: ಡಿ.ಕೆ.ಶಿವಕುಮಾರ್‌

ಬೆಂಗಳೂರಿನಿಂದ ಬಸ್ಸಿನಲ್ಲಿ ಬೀಗದ ಕೀಯನ್ನು ತರಿಸಿದ್ದು ಬಳಿಕ ಶಾಖಾದ್ರಿ ಅನುಪಸ್ಥಿತಿಯಲ್ಲಿ ಅವರ ಮನೆ ತಪಾಸಣೆಗೆ ಮಾಡಲಾಯಿತು. ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಮೋಹನ್, ಶಾಖಾದ್ರಿ ಮನೆಯಲ್ಲಿ ವನ್ಯಜೀವಿಗಳ ಚರ್ಮ ಇದೆ ಎಂದು ಖಚಿತ ಮಾಹಿತಿ ಇದ್ದ ಮೇರೆಗೆ ತಪಾಸಣೆಗೆ ಬಂದ ಸಂದರ್ಭದಲ್ಲಿ ಶಾಖಾದ್ರಿ ಪರಸ್ಥಳದಲ್ಲಿದ್ದ ಕಾರಣ ದೂರವಾಣಿ ಮೂಲಕ ಸಂಪರ್ಕಿಸಿ ಸಂಬಂಧಿಕರಿಂದ ಮನೆ ಕೀ ತರಿಸಿಕೊಂಡು ಅವರ ಸಮ್ಮುಖದಲ್ಲೇ ತಪಾಸಣೆ ನಡೆಸಿದಾಗ ಒಂದು ಚಿರತೆ ಚರ್ಮ ಮತ್ತೊಂದು ಜಿಂಕೆ ಚರ್ಮ ಸಿಕ್ಕಿದೆ. ಅದನ್ನು ಇಲಾಖೆ ವಶಕ್ಕೆ ಪಡೆದು ವನ್ಯಜೀವಿ ಕಾಯ್ದೆ ಉಲ್ಲಂಘನೆ ಪ್ರಕರಣವನ್ನು ದಾಖಲಿಸಲಾಗುವುದು. ತನಿಖೆ ಮುಂದುವರಿಸಲಾಗುವುದು ಎಂದರು.

ಡಿ ಆರ್ ಎಫ್ ಓ ಬಂಧನ: ಹುಲಿ ಉಗುರಿನ ಉರುಳಿಗೆ ಈಗ ಅರಣ್ಯಾಧಿಕಾರಿಯೇ ಸಿಲುಕಿಕೊಂಡು ಬಂಧನಕ್ಕೀಡಾಗಿದ್ದಾರೆ.ಕಳಸದ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಹುಲಿ ಉಗುರಿನ ಪೆಂಡೆಂಡ್ ಧರಿಸಿದ ಕಾರಣಕ್ಕೆ ಬಂಧಿಸಲ್ಪಟ್ಟ ಆರೋಪಿಯಾಗಿದ್ದಾರೆ. ಅವರನ್ನು ಎನ್ಆರ್ಪುರದಲ್ಲಿ ಶುಕ್ರವಾರ ಸಂಜೆ ಕೊಪ್ಪದ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.ದರ್ಶನ್ ಹುಲಿ ಉಗುರು ಧರಿಸಿರುವ ಬಗ್ಗೆ ಅರೆನೂರಿನ ಸುಪ್ರೀತ್ ಮತ್ತು ಅಬ್ದುಲ್ ಎಂಬುವವರು ಆಲ್ದೂರು ವಲಯಾರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆಲ್ದೂರು ಆರ್ಎಫ್ಓ ವರದಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆಗೆ ಬರುವಂತೆ ನೋಟೀಸು ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಕೊಪ್ಪ ಡಿಎಫ್ಓ ದಿನೇಶ್ ಅವರು ಶುಕ್ರವಾರ ಬೆಳಗ್ಗೆ ಡಿಆರ್ಎಫ್ಓ ದರ್ಶನ್ ಅವರನ್ನು ಅಮಾನತುಪಡಿಸಿ ಆದೇಶಿಸಿದ್ದರು. ಸಂಜೆ ವೇಳೆಗೆ ದರ್ಶನ್ ಎನ್ಆರ್ಪುರದಲ್ಲಿರುವುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಪ್ರತಿಭಟನೆ ಎಚ್ಚರಿಕೆ: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೆಂಬ ಕಾರಣಕ್ಕೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಇಬ್ಬರು ಅರ್ಚಕರನ್ನು ಬಂಧಿಸಿರುವ ಪ್ರಕರಣದ ಬಗ್ಗೆ ವ್ಯಾಪಕ ಆಕ್ರೊಶ ವ್ಯಕ್ತವಾಗುತ್ತಿದ್ದು, ಅವರನ್ನು ಕೂಡಲೇ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.ಈ ಸಂಬಂಧ ಇಂದು ಕೊಪ್ಪದ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿದ ಮಹಾ ಸಭಾದ ಪದಾಧಿಕಾರಿಗಳು ಕೂಡಲೇ ಇಬ್ಬರು ಅರ್ಚಕರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಬಿ.ಎಸ್. ರಾಘವೇಂದ್ರ ಭಟ್ ಹಾಗೂ ಮಹಾಬಲರಾವ್ ಅವರು ಕೊಪ್ಪದಲ್ಲಿ  ಜಿಲ್ಲಾ ಅರಣ್ಯ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಜೆಡಿಎಸ್ ನಾಯಕರ ಬೈದು ಹೈಕಮಾಂಡ್ ಮೆಚ್ಚಿಸುವ ಭ್ರಮೆ ಶಿವಲಿಂಗೇಗೌಡರದ್ದು: ಪ್ರಜ್ವಲ್ ರೇವಣ್ಣ

ಬ್ರಾಹ್ಮಣ ಮಹಾಸಭಾ ಖಂಡನೆ: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಕಾನೂನು ಕ್ರಮ ಕೈಗೊಳ್ಳುವಲ್ಲಿ ತೀವ್ರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಹೇಳಿದ್ದಾರೆ. ಈ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಖಾಂಡ್ಯ ದೇವಸ್ಥಾನದ ಇಬ್ಬರು ಅರ್ಚಕರುಗಳಾದ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸರನ್ನು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೆಂದು ಬಂಧಿಸಿರುವುದು ಅತ್ಯಂತ ಆತುರದ ಕ್ರಮ ಎಂದು ಹೇಳಿದ್ದಾರೆ.ಹುಲಿ ಉಗುರು ಧರಿಸುವುದು ಅಪರಾಧ ಹಾಗೂ ಕಾನೂನಿಗೆ ವಿರೋಧವಾದದ್ದು. ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿರುವುದು ತಪ್ಪೆಂದು ಹೇಳುವುದಿಲ್ಲ. ಆದರೆ ಪ್ರಭಾವಿಗಳು ಧರಿಸಿರುವ ಪ್ರಕರಣಗಳಲ್ಲಿ ಅವರುಗಳನ್ನು ಬಂಧಿಸದೆ ಕೇವಲ ನೋಟಿಸು ನೀಡಿದ್ದೇವೆ, ಅದು ನಿಜವಾದ ಹುಲಿಯ ಉಗುರೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ನೆಪ ಹೇಳುತ್ತಿರುವ ಇಲಾಖೆ ಅತ್ಯಂತ ಸಾಮಾನ್ಯರನ್ನು ಮಾತ್ರ ಜೈಲಿಗೆ ಕಳುಹಿಸುತ್ತಿರುವುದು ಅತ್ಯಂತ ಖಂಡನೀಯ. ಈ ಕ್ಷಣ ಸರ್ಕಾರ ಈ ಪ್ರಕರಣಗಳ ಬಗ್ಗೆ ನ್ಯಾಯ ಸಮ್ಮತ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

click me!