
ಹಾಸನ (ಅ.2): ಕನ್ನಡ ಕೃತಿಗೆ ಆಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿರುವುದು ನಮ್ಮ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆಯ ವಿಷಯ. ವೈಯಕ್ತಿಕವಾಗಿ ನನಗೂ ಹೆಮ್ಮೆಯ ವಿಷಯವಾಗಿದೆ ಎಂದು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ, ಕನ್ನಡದ ಹೆಮ್ಮೆಯ ಅನುವಾದಕಿ ದೀಪಾ ಬಸ್ತಿ ಸಂತಸ ವ್ಯಕ್ತಪಡಿಸಿದರು.
ಇಂದು ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೇ ಮೊದಲ ಬಾರಿಗೆ ಮೂಲ ಕನ್ನಡ ಕೃತಿಗೆ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ. ಈ ಪ್ರಶಸ್ತಿಯು ಭಾರತದ ಮೊದಲ ಅನುವಾದಕಿಗೆ ಲಭಿಸಿದ ಗೌರವ ಎಂದೂ ದೀಪಾ ಬಸ್ತಿ ತಿಳಿಸಿದರು.
ಮೈಸೂರು ದಸರಾ ಉದ್ಘಾಟನೆ ದೀಪಾ ಬಸ್ತಿ ಕಡೆಗಣನೆ ಮಾಡಿದ್ದಾರೆ ಎಂಬ ಬಿಜೆಪಿ-ಶಾಸಕರ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಸಿದ ಅವರು, ರಾಜಕೀಯ ಹೇಳಿಕೆಗಳಿಗೆ ನಾನು ಕಮೆಂಟ್ ಮಾಡಲ್ಲ. ಇದು ರಾಜ್ಯ ಸರ್ಕಾರ ನಿರ್ಧಾರ ತಗೊಂಡಿದ್ದಾರೆ ಅದರ ಬಗ್ಗೆ ನೋ ಕಮೆಂಟ್ಸ್ ಎಂದರು. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತವಾದ ಬಗ್ಗೆಯೂ ಕೇಳಿದ ಪ್ರಶ್ನೆಗೆ, 'ಬೇರೊಂದು ವೈಯಕ್ತಿಕ ದೃಷ್ಟಿಯಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಯಾವತ್ತೂ ಇಲ್ಲ, ಅಂಥ ವಿಷಯಕ್ಕೆ ನಾನು ಬರೋಲ್ಲ. ನಾನು ಸಾಹಿತ್ಯದಲ್ಲಿ ಮಾಡಿರುವಂತಹ ಕೆಲಸಗಳು, ಸಾಹಿತ್ಯದಲ್ಲಿ ಮಾಡಬೇಕಿರುವ ಕೆಲಸಗಳು ಕೆಲಸ ನನಗೆ ಮುಖ್ಯ ಎನ್ನುವ ಮೂಲಕ ವಿವಾದಾತ್ಮಕ ವಿಷಯಗಳಿಗೆ ನೋ ಕಾಮೆಂಟ್ಸ್ ಎಂದರು.
ನಮ್ಮಿಂದ ಕನ್ನಡ ಅಲ್ಲ, ಕನ್ನಡಕ್ಕೋಸ್ಕರ ನಾವು:
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ. ನಮ್ಮ ನಂತರವೂ ಕನ್ನಡ ಇರುತ್ತೆ. ಹೀಗಾಗಿ ನಮ್ಮಿಂದ ಕನ್ನಡ ಅಲ್ಲ, ನಾವಿರುವುದು ಕನ್ನಡಕ್ಕೋಸ್ಕರ. ನಾನು ಕೆಲಸ ಮಾಡುವುದು ಕನ್ನಡಕ್ಕೋಸ್ಕರ. ನನಗೆ ಅದರ ಮೇಲೆ ಜಾಸ್ತಿ ಗಮನ ಸೆಳೆಯಲು ನನ್ನ ಶ್ರಮ, ಶಕ್ತಿ ಅದಕ್ಕೆ ಮೀಸಲಿಡುತ್ತೇನೆ. ಇದರ ಹೊರತಾಗಿ ವೈಯುಕ್ತಿಕ ಟೀಕೆಗಳ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ ಎಂದರು.
ಸಾಹಿತ್ಯ ದೃಷ್ಟಿಯಲ್ಲಿ ಮೊದಲಬಾರಿಗೆ ಕನ್ನಡ ಭಾಷೆಗೆ ಬೂಕರ್ ಪ್ರಶಸ್ತಿ ಬಂದಿದೆ. ಮೊದಲು ಹಿಂದಿಯ ಗೀತಾಂಜಲಿ ಶ್ರೀ ಅವರಿಗೆ ಬಂದಿತ್ತು, ಅದನ್ನು ಅನುವಾದ ಮಾಡಿದವರು ಅಮೆರಿಕಾದ ಡೇಸಿ ರಾಕ್ ಎನ್ನುವವರು. ಇದು ಎರಡನೇ ಸಲ ಇಂಡಿಯಾ ಸಾಹಿತ್ಯ ಕೃತಿಗೆ ಬೂಕರ್ ಪ್ರಶಸ್ತಿ ಬರುತ್ತಿದೆ. ನಮ್ಮಲ್ಲಿ ಕನ್ನಡ ಮಾತ್ರವಲ್ಲ ಭಾರತದ ಭಾಷೆಗಳ ಒಳ್ಳೆಯ ಕೃತಿಗಳು ಸಾವಿರಾರು ಇವೆ. ಅದರ ಮಧ್ಯೆ ಸುಮ್ಮನೆ ಬೇರೆ ಚರ್ಚೆಗೆ ಹೋಗದೆ ಸಾಹಿತ್ಯವನ್ನು ಮುಂದಿಟ್ಟುಕೊಂಡು ಅದರಲ್ಲಿ ಏನು ಮಾಡಬಹುದು ಎನ್ನುವುದು ನನಗೆ ಮುಖ್ಯ. ಇವತ್ತು ಮೊದಲ ಬಾರಿಗೆ ಅರಕಲಗೂಡು ದಸರಾಗೆ ಬಂದಿದ್ದೀನಿ. ನನಗೆ ವೈಯುಕ್ತಿಕವಾಗಿ ತುಂಬಾ ದೊಡ್ಡ ಹೆಮ್ಮೆ, ತುಂಬಾ ಖುಷಿ ಆಗಿದೆ ಎಂದರು.
ಪ್ರಶಸ್ತಿಗಳು ಬಂದ್ರೆ ತುಂಬಾ ಸಂತೋಷ:
ಪ್ರಶಸ್ತಿಗಳು ಬರಬೇಕು. ಪ್ರಶಸ್ತಿಗಳು ಬಂದರೆ ತುಂಬಾ ಸಂತೋಷ. ಪ್ರಶಸ್ತಿ ಬರಬಹುದು ಎನ್ನುವ ನಿಟ್ಟಿನಲ್ಲಿ ನಾವು ಯಾವುದೇ ಒಂದು ಕಲೆಯನ್ನು ಸೃಷ್ಟಿ ಮಾಡೋದು ತುಂಬಾ ತಪ್ಪು. ಆಗ ನಿಜವಾದ ಕಲೆ, ಅಂಶಗಳು ಬರುವುದಿಲ್ಲ. ಪ್ರಶಸ್ತಿಗಾಗಿ ಅಲ್ಲದೆ ನಮ್ಮ ಕೆಲಸಗಳನ್ನು ಮಾಡುತ್ತಿರುತ್ತೇವೆ. ಯಾವತ್ತು ಒಂದು ಪ್ರಶಸ್ತಿ ಬರುತ್ತೆ, ಬಂದ್ರೆ ಸ್ವಾಗತಿಸಬೇಕು, ಸ್ವೀಕರಿಸಬೇಕು, ಆದ್ರೆ ಪ್ರಶಸ್ತಿ ಬರಬೇಕು ಎನ್ನುವ ದೃಷ್ಟಿಯಿಂದಲ್ಲ. ಬೂಕರ್ ಪ್ರಶಸ್ತಿ ಅನುವಾದಿತ ಕೃತಿಗೆ ಕೊಡುವ ನಿಯಮವಿದೆ. ಅದರಲ್ಲಿ ಅವರು ಬೇರೆ ಬೇರೆ ಮಾಡಲ್ಲ. ಅನುವಾದಕರು ಇದ್ದ ತಕ್ಷಣ ಲೇಖಕರು ಮುಖ್ಯವಲ್ಲ ಅಥವಾ ಲೇಖಕರು ಇದ್ದ ತಕ್ಷಣ ಅನುವಾದಕರು ಮುಖ್ಯವಲ್ಲ ಅನ್ನೋ ರೀತಿ ಅವರು ನೋಡುವುದಿಲ್ಲ. ಪ್ರಶಸ್ತಿ ಹಣ ಸಮನಾಗಿ ಹಂಚಿಕೆ ಮಾಡ್ತಾರೆ ಎಂದರು.
ಕನ್ನಡ ಕೃತಿಗಳ ಅನುವಾದದ ಕೊರತೆ
ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ತೀರಾ ಕಡಿಮೆ ಎಂದು ದೀಪಾ ಬಸ್ತಿ ಗಮನ ಸೆಳೆದರು. ತಮಿಳು, ತೆಲುಗು, ಹಿಂದಿ, ಬಂಗಾಳಿ, ಮಲೆಯಾಳಂ, ಉರ್ದು ಭಾಷೆಗಳಿಗೆ ಹೋಲಿಸಿದರೆ ಕನ್ನಡದಿಂದ ಅನುವಾದ ಕಡಿಮೆ. ಎಸ್.ಎಲ್.ಭೈರಪ್ಪ, ಕುವೆಂಪು, ಕಾರಂತರಂತಹ ದಿಗ್ಗಜರ ಕೃತಿಗಳು ಈಗಾಗಲೇ ಅನುವಾದವಾಗಿವೆ. ಆದರೆ ಕನ್ನಡದ ಅದ್ಭುತ ಕೃತಿಗಳನ್ನು ಕನ್ನಡೇತರ ಓದುಗರಿಗೆ ತಲುಪಿಸುವ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಒತ್ತಿ ಹೇಳಿದರು.
ಕನ್ನಡಕ್ಕಾಗಿ ಸತತ ಶ್ರಮ
ನಾವಿರುವುದು ಕನ್ನಡಕ್ಕಾಗಿ, ಕನ್ನಡ ನಮ್ಮಿಂದಾಗಿರುವುದಿಲ್ಲ. ನನ್ನ ಶಕ್ತಿ, ಶ್ರಮವೆಲ್ಲವೂ ಕನ್ನಡ ಸಾಹಿತ್ಯಕ್ಕೆ ಮೀಸಲಾಗಿದೆ. ಸಾಹಿತ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಏನು ಮಾಡಬಹುದು ಎಂಬುದೇ ನನಗೆ ಮುಖ್ಯ ಎಂದು ದೀಪಾ ಬಸ್ತಿ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದರು. ಈ ಐತಿಹಾಸಿಕ ಸಾಧನೆಯ ಮೂಲಕ ಕನ್ನಡ ಸಾಹಿತ್ಯವು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ