Karnataka: ಗ್ರಾಮ ಒನ್‌ನಿಂದ ಅಟಲ್‌ ಕೇಂದ್ರಗಳ ಭಾರ ಇಳಿಕೆ: ಸಿಎಂ ಬೊಮ್ಮಾಯಿ

Kannadaprabha News   | Asianet News
Published : Feb 12, 2022, 04:43 AM IST
Karnataka: ಗ್ರಾಮ ಒನ್‌ನಿಂದ ಅಟಲ್‌ ಕೇಂದ್ರಗಳ ಭಾರ ಇಳಿಕೆ: ಸಿಎಂ ಬೊಮ್ಮಾಯಿ

ಸಾರಾಂಶ

*  ಗ್ರಾಮ ಒನ್‌ನಲ್ಲೇ ಜನರಿಗೆ 100ಕ್ಕೂ ಹೆಚ್ಚು ಸೇವೆ ಲಭ್ಯ *  ಅರ್ಜಿ ಪರಿಶೀಲನೆ, ವಿಲೇವಾರಿ ಮಾತ್ರ ಅಟಲ್‌ ಕೇಂದ್ರಗಳ ಹೊಣೆ *  ಅರ್ಜಿ ತಿರಸ್ಕರಿಸಿದರೆ ಹುಷಾರ್‌: ಸಿಎಂ   

ಲಿಂಗರಾಜು ಕೋರಾ

ಬೆಂಗಳೂರು(ಫೆ.12): ಹತ್ತಾರು ಇಲಾಖೆಗಳ 100ಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮೀಣ ಭಾಗಗಳಲ್ಲಿ ಆರಂಭಿಸಿರುವ ‘ಗ್ರಾಮ ಒನ್‌’ (Grama One) ಕೇಂದ್ರಗಳು ‘ಅಟಲ್‌ ಜನ ಸ್ನೇಹಿ ಕೇಂದ್ರ’ಗಳ ಮೇಲಿನ ಬಹಳಷ್ಟು ಕಾರ್ಯಭಾರವನ್ನು ಇಳಿಸಲಿವೆ.

ಪಡಿತರ, ಆಧಾರ್‌, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ಇಲಾಖೆಗಳಿಂದ ನೀಡುವ ಹಲವು ಸಾರ್ವಜನಿಕ ಸೇವೆಗಳಿಗೆ ಇನ್ಮುಂದೆ ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ(Atalji Janasnehi Kendra) ಅರ್ಜಿ ಸ್ವೀಕಾರ ಮತ್ತು ಸೇವೆ ವಿತರಣೆ ನಡೆಯುವುದಿಲ್ಲ. ಅವುಗಳ ಈ ಕಾರ್ಯಗಳನ್ನು ಗ್ರಾಮ ಒನ್‌ ಕೇಂದ್ರಗಳೇ ಸಂಪೂರ್ಣ ನಿರ್ವಹಿಸಲಿವೆ. ಆದರೆ, ಈ ಗ್ರಾಮ ಒನ್‌ ಕೇಂದ್ರಗಳಲ್ಲಿ ಸ್ವೀಕರಿಸಿದ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ಕಾರ್ಯ ಮಾತ್ರ ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನಿರ್ದೇಶನ ನೀಡಿದ್ದಾರೆ.

Grama One Project: ಗ್ರಾಮ ಒನ್‌ನಲ್ಲೇ ಪಡಿತರ ಕಾರ್ಡ್‌ ವಿತರಣೆ: ಸಿಎಂ ಬೊಮ್ಮಾಯಿ

ಈಗಾಗಲೇ ರಾಜ್ಯದ(Karnataka) 12 ಜಿಲ್ಲೆಗಳಲ್ಲಿ 3026 ಗ್ರಾಮ ಒನ್‌ ಕೇಂದ್ರಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ ಫೆಬ್ರವರಿ ಅಂತ್ಯದೊಳಗೆ ಉಳಿದ ಎಲ್ಲಾ ಜಿಲ್ಲೆಗಳಿಗೂ ಗ್ರಾಮ ಒನ್‌ ಸೇವಾ ಕೇಂದ್ರಗಳನ್ನು ವಿಸ್ತರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂದಾಯ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗಷ್ಟೆನಿರ್ದೇಶನ ನೀಡಿದ್ದಾರೆ. ಅದರಂತೆ ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾತ್ರ ಸಾರ್ವಜನಿಕ ಸೇವೆಗಳಿಗೆ ಅರ್ಜಿ ಸ್ವೀಕಾರ ಮತ್ತು ಸೇವೆ ವಿತರಣೆ ಕಾರ್ಯ ನಡೆಯಬೇಕು. ಇವುಗಳು ಸ್ವೀಕರಿಸಿದ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ಕಾರ್ಯವನ್ನು ಮಾತ್ರ ಅಟಲ್‌ ಜನಸ್ನೇಹಿ ಕೇಂದ್ರಗಳು ಮಾಡಬೇಕು ಎಂದು ಸೂಚಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಅರ್ಜಿ ತಿರಸ್ಕರಿಸಿದರೆ ಶಿಸ್ತು ಕ್ರಮ:

ಗ್ರಾಮ ಒನ್‌ ಕೇಂದ್ರಗಳನ್ನು ಎಲ್ಲಾ 30 ಜಿಲ್ಲೆಗಳಿಗೂ ಫೆಬ್ರವರಿ ಅಂತ್ಯದೊಳಗೆ ವಿಸ್ತರಿಸಬೇಕಿರುವುದರಿಂದ ತಹಶೀಲ್ದಾರ್‌ ಕಚೇರಿ ಮತ್ತು ಅಟಲ್‌ ಜನಸ್ನೇಹಿ ಕೇಂದ್ರಗಳಿಗೆ ಅಗತ್ಯವಿರುವ ಕಂಪ್ಯೂಟರ್‌ಗಳು ಹಾಗೂ ಇತರೆ ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲವನ್ನು ಇ-ಆಡಳಿತ(E-Governance) ಇಲಾಖೆಯು ಒದಗಿಸಬೇಕು. ಈ ಸಂಬಂಧ ಇ ಆಡಳಿತ ಇಲಾಖೆಯು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಈ ಕೇಂದ್ರಗಳ ಅಗತ್ಯತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ವರದಿ ಮಾಡುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

Grama One: 1 ತಿಂಗಳಲ್ಲಿ ಗ್ರಾಮ ಒನ್‌ ಯೋಜನೆ ರಾಜ್ಯಾದ್ಯಂತ ವಿಸ್ತರಣೆ: ಸಿಎಂ ಬೊಮ್ಮಾಯಿ

ಸಕಾಲ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರಣಕ್ಕೋಸ್ಕರ ಅಧಿಕಾರಿಗಳು ಅರ್ಜಿಗಳನ್ನು ಪದೇ ಪದೇ ತಿರಸ್ಕರಿಸಬಾರದು. ಅರ್ಜಿ ತಿರಸ್ಕರಣೆಗೆ ಕಾರಣಗಳನ್ನು ಎಲ್ಲ ಇಲಾಖೆಗಳ ಡ್ರಾಪ್‌ಡೌನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ತಿರಸ್ಕರಿಸಿರುವ ಕಾರಣಗಳ ಪಟ್ಟಿಯು ಸಮಂಜಸವಾಗಿದೆಯೇ ಎಂದು ಇ-ಆಡಳಿತ ಇಲಾಖೆಯು ಅನುಮೋದಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸೂಕ್ತ ಕಾರಣವಿಲ್ಲದೆ ಅಥವಾ ಕ್ಷುಲ್ಲಕ ಕಾರಣಕ್ಕೆ ಅರ್ಜಿ ತಿರಸ್ಕರಿಸಿರುವುದು ಕಂಡುಬಂದರೆ ಸಂಬಂಧಿಸಿದ ಸಿಬ್ಬಂದಿ, ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಅರ್ಜಿ ತಿರಸ್ಕರಿಸಿದರೆ ಹುಷಾರ್‌

ಸಕಾಲ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳು ಅರ್ಜಿಗಳನ್ನು ಪದೇ ಪದೇ ತಿರಸ್ಕರಿಸಬಾರದು. ಸೂಕ್ತ ಕಾರಣವಿಲ್ಲದೆ ಅಥವಾ ಕ್ಷುಲ್ಲಕ ಕಾರಣಕ್ಕೆ ಅರ್ಜಿ ತಿರಸ್ಕರಿಸಿರುವುದು ಕಂಡುಬಂದರೆ ಸಂಬಂಧಿಸಿದ ಸಿಬ್ಬಂದಿ, ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್