Covid Crisis: 2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್‌ ತಹಬದಿಗೆ

Kannadaprabha News   | Asianet News
Published : Feb 12, 2022, 02:59 AM IST
Covid Crisis: 2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್‌ ತಹಬದಿಗೆ

ಸಾರಾಂಶ

ರಾಜ್ಯದ ಕೋವಿಡ್‌-19ರ ಪಾಸಿಟಿವಿಟಿ ದರದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.

ಬೆಂಗಳೂರು (ಫೆ.12): ರಾಜ್ಯದ (Karnataka) ಕೋವಿಡ್‌-19ರ (Covid19) ಪಾಸಿಟಿವಿಟಿ ದರದಲ್ಲಿ (Positivity Rate) ಭಾರಿ ಇಳಿಕೆ ದಾಖಲಾಗುತ್ತಿದೆ. ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.

ಒಮಿಕ್ರೋನ್‌ ಪ್ರೇರಿತ ಮೂರನೇ ಅಲೆಯಲ್ಲಿ ಜನವರಿ 8 ರಂದು ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.5 ದಾಟಿತ್ತು. ಅಲ್ಲಿಂದ ಬಳಿಕ ಏರುತ್ತ ಸಾಗಿದ್ದ ಪಾಸಿಟಿವಿಟಿ ದರ ಜನವರಿ 24ಕ್ಕೆ ಮೂರನೇ ಅಲೆಯ ಗರಿಷ್ಠ ಶೇ.32.95 ತಲುಪಿತ್ತು. ತದನಂತರ ಇಳಿಕೆ ಹಾದಿಯಲ್ಲಿ ಸಾಗಿದ ಪಾಸಿಟಿವಿಟಿ ದರ ಫೆ.9ಕ್ಕೆ ಮೊದಲ ಬಾರಿಗೆ ಶೇ.5 ರೊಳಗೆ ಬಂದಿದೆ. ರಾಜ್ಯದಲ್ಲಿ ಸದ್ಯ ಐದಾರು ಜಿಲ್ಲೆಗಳಲ್ಲಿ ಮಾತ್ರ ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿದೆ.

ಫೆ. 10ರ ಮಾಹಿತಿಯಂತೆ ಶಿವಮೊಗ್ಗ (ಶೇ.8.41), ತುಮಕೂರು (ಶೇ. 7.62), ಕೊಡಗು (ಶೇ.7.14), ಬಳ್ಳಾರಿ (ಶೇ. 6.65), ಮೈಸೂರು (ಶೇ.5.95), ಚಾಮರಾಜನಗರ ಜಿಲ್ಲೆ (ಶೇ. 5.6)ಯಲ್ಲಿ ಮಾತ್ರ ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮಂಡ್ಯ (ಶೇ. 1.99), ರಾಯಚೂರು (ಶೇ. 1.86), ದಾವಣಗೆರೆ (ಶೇ. 1.8), ದಕ್ಷಿಣ ಕನ್ನಡ (ಶೇ. 1.75), ಕೊಪ್ಪಳ (ಶೇ. 1.68), ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ (ಶೇ. 1.56), ಪಾಸಿಟಿವಿಟಿ ದರ ಶೇ.2 ಕ್ಕಿಂತ ಕೆಳಕ್ಕಿಳಿದಿದೆ.

Covid Crisis: 71365 ಕೇಸ್‌, 1217 ಸಾವು, ಸಕ್ರಿಯ ಕೇಸಿನ ಸಂಖ್ಯೆ 8.9 ಲಕ್ಷಕ್ಕಿಳಿಕೆ

ಕ್ಷಿಪ್ರ ನಿಯಂತ್ರಣ: ಮೂರನೇ ಅಲೆ ಜನವರಿ ತಿಂಗಳಿಡೀ ಹೆಚ್ಚು ಪ್ರಬಲವಾಗಿದ್ದರೂ ಮೊದಲ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಕ್ಷಿಪ್ರವಾಗಿ ಹರಡಿ ಅಷ್ಟೇ ವೇಗವಾಗಿ ನಿಯಂತ್ರಣಕ್ಕೆ ಬಂದಿದೆ. ಹಾಗೆಯೇ ಈ ಹಿಂದಿನ ಅಲೆಗಳಿಗೆ ಹೋಲಿಸಿದರೆ ಸಾವುನೋವಿನ ಪ್ರಮಾಣವೂ ಕಡಿಮೆ ಇದೆ. ಈ ಹಿಂದಿನ ಅಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5ರೊಳಗೆ ತರಲು ತಿಂಗಳಾನುಗಟ್ಟಲೆ ಲಾಕ್‌ಡೌನ್‌ ನಂತಹ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡಿತ್ತು. ಆದರೆ ಈ ಬಾರಿ ಸರ್ಕಾರ ಲಘು ಕ್ರಮಗಳನ್ನಷ್ಟೇ ಕೈಗೊಂಡಿತ್ತು.

ಆದರೆ ಈಗ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದ್ದರೂ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ವರದಿ ಆಗುತ್ತಿದೆ. ಮೈಸೂರು, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಬೀದರ್‌ ಜಿಲ್ಲೆಗಳಲ್ಲಿ ನಗರ ಭಾಗದಲ್ಲಿ ಹೆಚ್ಚು ಸೋಂಕು ಪತ್ತೆ ಆಗುತ್ತಿದ್ದರೆ ಉಳಿದ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಂದಿ ಸೋಂಕಿತರು ಪತ್ತೆ ಆಗುತ್ತಿದ್ದಾರೆ.

ಬಿಎ.2ಗಿಂತ ಬಿಎ.1 ಒಮಿಕ್ರೋನ್‌ ಉಪತಳಿ ಅಬ್ಬರ: ರಾಜ್ಯದಲ್ಲಿ ಮೂರನೇ ಅಲೆಯನ್ನು ಒಮಿಕ್ರೋನ್‌ನ ನ ಬಿಎ1. 1.529 ಉಪ ತಳಿ ಹೆಚ್ಚು ಪ್ರಭಾವಿಸಿದೆ ಎಂಬುದು ತಳಿ ಪತ್ತೆ ಪರೀಕ್ಷೆಯಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1,115 ಒಮಿಕ್ರೋನ್‌ ಪ್ರಕರಣ ಪತ್ತೆ ಆಗಿದ್ದು ಈ ಪೈಕಿ 807 ಪ್ರಕರಣಗಳು ಬಿಎ 1. 1.529 ಉಪತಳಿಗೆ ಸೇರಿದೆ. ಉಳಿದಂತೆ 219 ಪ್ರಕರಣ ಇನ್ನೊಂದು ಉಪತಳಿ ಬಿಎ2 ಗೆ ಸೇರಿದೆ. ಬಿಎ1 ರ 89 ಪ್ರಕರಣ ಪತ್ತೆಯಾಗಿದೆ. 

Covid Crisis: 3ನೇ ಅಲೆಯಲ್ಲಿ ಮೊದಲ ಸಲ 10 ಸಾವಿರಕ್ಕಿಂತ ಕಮ್ಮಿ ಕೇಸ್‌!

ಎರಡನೇ ಅಲೆಯನ್ನು ಪ್ರಭಾವಿಸಿದ ಹೆಚ್ಚು ಮಾರಣಾಂತಿಕವಾದ ಡೆಲ್ಟಾರೂಪಾಂತರಿ 2022ರಲ್ಲಿ 404 ಮಂದಿಯಲ್ಲಿ ಪತ್ತೆಯಾಗಿದ್ದು ಈ ಅಪಾಯಕಾರಿ ತಳಿ ಇನ್ನೂ ಸಕ್ರಿಯವಾಗಿದೆ. ಜ.1 ರಿಂದ ಈವರೆಗೆ 1,555 ತಳಿ ಪತ್ತೆ ಪರೀಕ್ಷೆ ನಡೆದಿದ್ದು ಶೇ. 26 ಡೆಲ್ಟಾ, ಶೇ. 6ರಷ್ಟುಇಟಿಎ, ಕಪ್ಪಾ ಮತ್ತು ಪೋಗೋ ತಳಿಗಳು ಮತ್ತು ಉಳಿದ ಶೇ. 68 ಪ್ರಕರಣಗಳು ಒಮಿಕ್ರೋನ್‌ ಪರಿವಾರಕ್ಕೆ ಸೇರಿದೆ. ಮೊದಲ ಅಲೆಯನ್ನು ಪ್ರಭಾವಿಸಿದ್ದ ಅಲ್ಫಾ, ಬೀಟಾ ತಳಿಗಳು ಈ ವರ್ಷ ಪತ್ತೆ ಆಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು