
ವಿಧಾನಸಭೆ(ಜು.11): ‘ಚಿಲುಮೆ-ಒಲುಮೆ ನಿಮ್ಮದೇ ಡಾಕ್ಟರೇ’ ಎಂಬ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಹೇಳಿಕೆ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಬೈರತಿ ಸುರೇಶ್ ನಡುವೆ ಸದನದಲ್ಲಿ ಜಟಾಪಟಿಗೆ ಕಾರಣವಾದ ಪ್ರಸಂಗ ನಡೆಯಿತು.
ಸೋಮವಾರ ರಾಜ್ಯಪಾಲರ ಭಾಷಣದ ಮೇಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸುತ್ತಿದ್ದ ವೇಳೆ ಅಕ್ಕಿ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಅಶ್ವತ್ಥನಾರಾಯಣ, 2013ರಲ್ಲಿ ಕಾಂಗ್ರೆಸ್ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿತ್ತು ಎಂದು ಮಾತು ಮುಂದುವರಿಸಲು ಮುಂದಾದಾಗ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 2013ರಲ್ಲಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿಲ್ಲ. ಐದು ಕೆ.ಜಿ. ಹೇಳಿದ್ದು, ನಂತರ 7 ಕೆ.ಜಿ. ನೀಡಲಾಯಿತು ಎಂದರು.
Voter ID Scam: ಚಿಲುಮೆ ಸಂಸ್ಥೆ ಮಾದರಿಯಲ್ಲಿ ಮತ್ತೊಂದು ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು!
ಆಗ ಬೈರತಿ ಸುರೇಶ್, ಚಿಲುಮೆ ಸಂಸ್ಥೆಯ ಹೆಸರು ಪ್ರಸ್ತಾಪಿಸಿ ‘ಚಿಲುಮೆ-ಒಲುಮೆ ನಿಮ್ಮದೇ ಡಾಕ್ಟರೇ’ ಎಂದು ಹೇಳಿದ್ದು ಅಶ್ವತ್ಥನಾರಾಯಣ ಅವರನ್ನು ಕೆರಳಿಸಿತು. ಚಿಲುಮೆ ಸಂಸ್ಥೆ ಬಗ್ಗೆ ಏನು ಗೊತ್ತಿದೆ ನಿಮಗೆ? ನಾನು ನಿಮ್ಮ ರೀತಿ ರಾಜಕೀಯ ಮಾಡುವುದಿಲ್ಲ. ನನಗೆ ರಾಜಕೀಯ ಮೌಲ್ಯ ಇದೆ. ಸ್ವಾರ್ಥಿಯಾಗಿ ರಾಜಕೀಯ ಮಾಡುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಬೈರತಿ ಸುರೇಶ್ ತಿರುಗೇಟು ನೀಡಿ ಎಲ್ಲಾ ಗೊತ್ತಿದೆ. ವೈಯಕ್ತಿಕವಾಗಿ ಆರೋಪ ಮಾಡುತ್ತಿಲ್ಲ. ಚಿಲುಮೆ ಕುರಿತು ನಡೆದ ಘಟನೆ ಬಗ್ಗೆ ತಿಳಿಸಿದೆ ಎಂದರು.
ಇದೇ ವೇಳೆ ಕೃಷ್ಣ ಬೈರೇಗೌಡ ಅವರು, ಮೊದಲು ಐದು ಕೆ.ಜಿ. ಅಕ್ಕಿಯನ್ನು ಒಂದು ರು.ನಂತೆ ನೀಡುವುದಾಗಿ ಹೇಳಲಾಗಿತ್ತು. ಆದರೆ, ನಂತರ ಉಚಿತವಾಗಿ ಅಕ್ಕಿ ನೀಡಲು ಪ್ರಾರಂಭಿಸಿದೆವು. ಮೊದಲು ಐದು ಕೆಜಿ ಇದ್ದು, ನಂತರ ಏಳು ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಯಿತು ಎಂದು ಸಮಜಾಯಿಷಿ ನೀಡಿದರು. ಆದರೂ ವಾಗ್ಯುದ್ಧ ಮುಂದುವರಿದಾಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ತಮ್ಮ ಭಾಷಣ ಮುಂದುವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ