ಕೋವಿಡ್‌ ಸೋಂಕಿತರಿಗೆ ಇಟ್ಟಿದ್ದ 79% ಬೆಡ್‌ ಖಾಲಿ!

By Kannadaprabha NewsFirst Published Jun 29, 2021, 8:49 AM IST
Highlights

* ಕೊರೋನಾ ತಗ್ಗಿದ್ದರಿಂದ ಸದ್ಯ ಶೇ.20ರಷ್ಟು ಬೆಡ್‌ ಮಾತ್ರ ಭರ್ತಿ

* ಕೋವಿಡ್‌ ಸೋಂಕಿತರಿಗೆ ಇಟ್ಟಿದ್ದ 79% ಬೆಡ್‌ ಖಾಲಿ!

* ಸಕ್ರಿಯ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಇಳಿಕೆ

* ಆಸ್ಪತ್ರೆಗೆ ಶಿಫಾರಸು ಆಗುವವರ ಪ್ರಮಾಣವೂ ಇಳಿಕೆ

* ಬಾಕಿ ಬೆಡ್‌ ತೆರವಿಗೆ ಖಾಸಗಿ ಆಸ್ಪತ್ರೆಗಳ ಮನವಿ

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಜೂ.29): ರಾಜ್ಯದಲ್ಲಿ ಸೋಂಕಿನ ಪ್ರಮಾಣ ತೀವ್ರ ಇಳಿಕೆಯಾಗಿದ್ದು ಸಕ್ರಿಯ ಸೋಂಕಿತರ ಸಂಖ್ಯೆ 1.01 ಲಕ್ಷಕ್ಕೆ ಇಳಿದಿದೆ. ಪರಿಣಾಮ ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಕೊರೋನಾ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಶೇ.79.34 ರಷ್ಟುಬೆಡ್‌ಗಳು ಖಾಲಿ ಉಳಿದಿವೆ.

- ಆಸ್ಪತ್ರೆಗಳ ಶೇ.20 ರಷ್ಟುಕೊರೋನಾ ಬೆಡ್‌ ಮಾತ್ರ ಭರ್ತಿಯಾಗಿವೆæ. ಹೀಗಾಗಿ ಕೊರೋನೇತರ ರೋಗಿಗಳ ಅನುಕೂಲಕ್ಕಾಗಿ ಕೊರೋನಾ ಬೆಡ್‌ಗಳಲ್ಲಿನ ಅರ್ಧದಷ್ಟುಬೆಡ್‌ಗಳನ್ನು ಕೊರೋನೇತರ ರೋಗಿಗಳ ಚಿಕಿತ್ಸೆಗೆ ಬಿಡುಗಡೆ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘವು (ಫಾನಾ) ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ರಾಜ್ಯಾದ್ಯಂತ (ಬಿಬಿಎಂಪಿ ಹೊರತುಪಡಿಸಿ) ಕೊರೋನಾ ಚಿಕಿತ್ಸೆ ಮೀಸಲಿಟ್ಟಿರುವ 61,972 ಬೆಡ್‌ ಪೈಕಿ 48,820 (ಶೇ.78.77) ಖಾಲಿ ಇವೆ. ಬಿಬಿಎಂಪಿ ವ್ಯಾಪ್ತಿಯ 6,470 ಕೊರೋನಾ ಬೆಡ್‌ಗಳ ಪೈಕಿ 988 ಬೆಡ್‌ (ಶೇ.15) ರಷ್ಟುಮಾತ್ರ ಭರ್ತಿಯಾಗಿವೆ. ಒಟ್ಟಾರೆ, ರಾಜ್ಯದಲ್ಲಿ 68,442 ಬೆಡ್‌ ಪೈಕಿ 14,140 (ಶೇ.20) ರಷ್ಟುಮಾತ್ರ ಭರ್ತಿಯಾಗಿವೆ. ಹಂತ-ಹಂತವಾಗಿ

ಬಿಡುಗಡೆಗೆ ಚಿಂತನೆ:

ಫಾನಾ ಅಧ್ಯಕ್ಷ ಡಾ.ಪ್ರಸನ್ನ, ಆಸ್ಪತ್ರೆಗಳಲ್ಲಿನ ಒಟ್ಟು ಬೆಡ್‌ನ ಶೇ.50 ರಷ್ಟನ್ನು ಕೊರೋನಾಗೆ ಮೀಸಲಿಡಲಾಗಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿನ ಶೇ.90ಕ್ಕೂ ಹೆಚ್ಚು ಕೊರೋನಾ ಬೆಡ್‌ ಖಾಲಿ ಇದೆ. ಸರ್ಕಾರದ ಕೋಟಾದಡಿಯು ರೋಗಿಗಳನ್ನು ಸರ್ಕಾರ ಶಿಫಾರಸು ಮಾಡುತ್ತಿಲ್ಲ. ಹೀಗಾಗಿ ಕೊರೋನೇತರ ರೋಗಿಗಳಿಗೆ ಬಳಕೆ ಮಾಡಲು ಬೆಡ್‌ ಬಿಡುಗಡೆಗೆ ಆದೇಶ ಮಾಡುವಂತೆ ಚರ್ಚಿಸಿದ್ದೇವೆ.

ಸರ್ಕಾರವೂ ಐಸಿಯು ಬೆಡ್‌ ಹೊರತುಪಡಿಸಿ ಉಳಿದ ಬೆಡ್‌ಗಳನ್ನು ಹಂತ-ಹಂತವಾಗಿ ಕೊರೋನೇತರ ಬಳಕೆಗೆ ಬಿಡುಗಡೆ ಮಾಡಲು ಸಿದ್ಧವಿದೆ. ಆದರೆ,ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಹೀಗಾಗಿ ಫಾನಾದಿಂದ ಇಂದು (ಸೋಮವಾರ) ಅಧಿಕೃತ ಮನವಿ ಪತ್ರ ನೀಡಿದ್ದೇವೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸದ್ಯಕ್ಕೆ ಕೊರೋನೇತರ ಬೆಡ್‌ಗಳಿಗೆ ಒತ್ತಡವಿಲ್ಲ. ಆದರೆ, ಅನ್‌ಲಾಕ್‌ನಿಂದ ಬಾಕಿ ಉಳಿಸಿಕೊಂಡಿದ್ದ ಶಸ್ತ್ರಚಿಕಿತ್ಸೆಗಳು, ಅಪಘಾತ ಪ್ರಕರಣಗಳು ಸೇರಿದಂತೆ ಮತ್ತಿತರ ಪ್ರಕರಣಗಳು ಹೆಚ್ಚಾಗಲಿವೆ. ಹೀಗಾಗಿ ಮನವಿ ಮಾಡಿದ್ದೇವೆ. ಮತ್ತೆ ಕೊರೋನಾ ಸೋಂಕು ಹೆಚ್ಚಾದರೆ ಕೊರೋನಾ ಬೆಡ್‌ ಮೀಸಲಿಡಲು ಸಿದ್ಧರಿದ್ದೇವೆ ಎಂದರು.

ಬಿಬಿಎಂಪಿ ಬೆಡ್‌ ಸ್ಥಿತಿಗತಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರ್ಕಾರಿ ಕೋಟಾದ 6,470 ಬೆಡ್‌ ಪೈಕಿ 971 ಬೆಡ್‌ ಮಾತ್ರ ಭರ್ತಿಯಾಗಿವೆ. 7 ಬೆಡ್‌ ಬ್ಲಾಕ್‌ ಆಗಿದ್ದು 5,492 ಖಾಲಿ ಇವೆ. ಈ ಪೈಕಿ 2,514 ಜನರಲ್‌ ಬೆಡ್‌ ಪೈಕಿ 278 ಮಾತ್ರ ಭರ್ತಿಯಾಗಿದ್ದು, 2,233 ಖಾಲಿ ಇವೆ. 569 ಐಸಿಯು ಬೆಡ್‌ ಪೈಕಿ 157 ಭರ್ತಿಯಾಗಿದ್ದು 412 ಖಾಲಿ ಇವೆ.

2,744 ಎಚ್‌ಡಿಯು ಬೆಡ್‌ ಪೈಕಿ 326 ಭರ್ತಿಯಾಗಿದ್ದು 2,416 ಬೆಡ್‌ ಖಾಲಿ ಇವೆ. 643 ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳ ಪೈಕಿ 210 ಭರ್ತಿಯಾಗಿದ್ದು, 429 ಖಾಲಿ ಇವೆ.

ಎಷ್ಟೆಷ್ಟು ಬೆಡ್‌ ಖಾಲಿ?

ಬಿಬಿಎಂಪಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 31,110 ಸಾಮಾನ್ಯ ಬೆಡ್‌ ಪೈಕಿ 4,825 ಬೆಡ್‌ ಮಾತ್ರ ಭರ್ತಿಯಾಗಿವೆ, 3,348 ಐಸಿಯು ಬೆಡ್‌ ಪೈಕಿ 1,264, 2,983 ಐಸಿಯು ವಿತ್‌ ವೆಂಟಿಲೇಟರ್‌ ಬೆಡ್‌ ಪೈಕಿ 1,524, 24,531 ಎಚ್‌ಡಿಯು ಬೆಡ್‌ ಪೈಕಿ 5,561 ಬೆಡ್‌ ಸೇರಿ 13,152 ಬೆಡ್‌ ಮಾತ್ರ ಭರ್ತಿಯಾಗಿವೆ. ಒಟ್ಟಾರೆ 61,972 ಬೆಡ್‌ ಪೈಕಿ 13,152 ಬೆಡ್‌ ಮಾತ್ರ ಭರ್ತಿಯಾಗಿವೆ. ಉಳಿದಂತೆ 676 ಕೊರೋನಾ ಆರೈಕೆ ಕೇಂದ್ರಗಳಲ್ಲಿನ 56,006 ಬೆಡ್‌ಗಳ ಪೈಕಿ 5,979 ಬೆಡ್‌ ಮಾತ್ರ ಭರ್ತಿಯಾಗಿದ್ದು, 50,027 ಬೆಡ್‌ ಖಾಲಿ ಇವೆ.

click me!