ಕೊರೋನಾ ಕರ್ತವ್ಯಕ್ಕೆ ಗೈರು, ಸಿಬ್ಬಂದಿಗೆ ನೋಟಿಸ್‌ ಜಾರಿ: ಡಿಸಿಎಂ ಅಶ್ವತ್ಥನಾರಾಯಣ

By Kannadaprabha NewsFirst Published Aug 8, 2020, 9:44 AM IST
Highlights

6500 ಸಿಬ್ಬಂದಿಗೆ ಕರ್ತವ್ಯಕ್ಕೆ ನಿಯೋಜನೆ, 3 ಸಾವಿರ ಗೈರು: ಕಾರಣ ಕೇಳಿ ನೋಟಿಸ್‌ ಜಾರಿ: ಡಿಸಿಎಂ ಆಶ್ವತ್ಥನಾರಾಯಣ| ಸಿಬ್ಬಂದಿ ಕೊರತೆಯಿಂದಾಗಿ ಶಂಕಿತ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಮಾಡಲು ಕಷ್ಟ ಆಗುತ್ತಿದೆ|

ಬೆಂಗಳೂರು(ಆ.08):  ಬಿಬಿಎಂಪಿ ಪಶ್ಚಿಮ ವಲಯದ ಕೊರೋನಾ ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಿದ್ದ 6,500 ಸಿಬ್ಬಂದಿ ಪೈಕಿ 3 ಸಾವಿರ ಮಂದಿ ಗೈರು ಹಾಜರಾಗಿದ್ದಾರೆ. ಹೀಗಾಗಿ ಮೂರು ಸಾವಿರ ಮಂದಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಪಶ್ಚಿಮ ವಲಯದ ಕೊರೋನಾ ನಿಯಂತ್ರಣ ಕಾರ್ಯದ ಕುರಿತು ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಅವರು, ಪಶ್ಚಿಮ ವಲಯಕ್ಕೆ 6,500 ಸಿಬ್ಬಂದಿಯನ್ನು ಕೊರೋನಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಲ್ಲಿ ಮೂರು ಸಾವಿರ ಮಂದಿ ಬಂದಿಲ್ಲ. ಹೀಗಾಗಿ ವಲಯದ ಕೊರೋನಾ ಉಸ್ತುವಾರಿ ಅಧಿಕಾರಿ ಉಜ್ವಲ್‌ ಘೊಷ್‌ ಅವರಿಂದ ಗೈರು ಹಾಜರಾದವರಿಗೆ ನೋಟಿಸ್‌ ಕೊಡಿಸಲಾಗಿದೆ. ಅದರಲ್ಲಿ 700 ಮಂದಿ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ಕೂಡ ಇದರಲ್ಲಿ ಸೇರಿದ್ದಾರೆ ಎಂದು ಹೇಳಿದರು.

ಕೊರೋನಾಗೆ ಬಿಎಂಟಿಸಿ ಚಾಲಕ ಬಲಿ: ಆಸ್ಪತ್ರೆ ಬಿಲ್ ಕಟ್ಟಲು ಪತ್ನಿ ಪರದಾಟ..!

ಸಿಬ್ಬಂದಿ ಕೊರತೆಯಿಂದಾಗಿ ಶಂಕಿತ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಮಾಡಲು ಕಷ್ಟ ಆಗುತ್ತಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಒದಗಿಸುವಂತೆ ಆಯುಕ್ತರಾದ ಪಿ.ಪ್ರದೀಪ್‌ ಅವರಿಗೆ ಸೂಚಿಸಲಾಗಿದೆ. ಲ್ಯಾಬ್‌ ಟೆಕ್ನಿಷಿಯನ್‌ಗಳ ಕೊರತೆ ಕೂಡ ಇದೆ. ಇದನ್ನು ನಿಭಾಯಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಖಾಸಗಿ ಆಸ್ಪತ್ರೆಗೆ ಖುದ್ದು ಹೋಗಿ ಮಾತನಾಡಿ’

ಕೆಲವು ಖಾಸಗಿ ಆಸ್ಪತ್ರೆಗಳು ನಿಗದಿ ಪ್ರಕಾರ ಹಾಸಿಗೆ ನೀಡುತ್ತಿಲ್ಲ ಎನ್ನುವ ಆರೋಪಗಳಿವೆ. ಈ ಬಗ್ಗೆ ಅಧಿಕಾರಿಗಳು ಖುದ್ದು ಹೋಗಿ ಪರಿಶೀಲಿಸಬೇಕು. ತಪ್ಪು ಎಸಗಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಅಶ್ವತ್ಥನಾರಾಯಣ ಸೂಚಿಸಿದರು.

ಇದೇ ವೇಳೆ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಿದ್ದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಲ್ಲೇಶ್ವರದ ಮಣಿಪಾಲ್‌ ಆಸ್ಪತ್ರೆ ಹಾಗೂ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ನಿಗದಿಯಂತೆ ಹಾಸಿಗೆಗಳು ನೀಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಎಂದು ಸೂಚಿಸಿದರು.
 

click me!