ಮೃತದೇಹ ನೀಡಲು 1.80 ಲಕ್ಷ ಬಿಲ್ ಕಟ್ಟುವಂತೆ ಆಸ್ಪತ್ರೆ ಒತ್ತಡ| ಕೊರೋನಾದಿಂದ ಮೃತಪಟ್ಟಿದ್ದ ಬಿಎಂಟಿಸಿ ಡ್ರೈವರ್ ಕಂ ಕಂಡಕ್ಟರ್| ಪತ್ನಿ, ಮಕ್ಕಳ ಕಣ್ಣೀರು|
ಬೆಂಗಳೂರು(ಆ.08): ಕೊರೋನಾ ಸೋಂಕಿನಿಂದ ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಸಾವನ್ನಪ್ಪಿದ್ದು, ಆಸ್ಪತ್ರೆ ಬಿಲ್ ಪಾವತಿಸಲಾಗದೆ ಆತನ ಪತ್ನಿ ಹಾಗೂ ಮಕ್ಕಳು ಆಸ್ಪತ್ರೆ ಎದುರು ಕಣ್ಣೀರಿಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ನಿವಾಸಿಯಾಗಿರುವ ಮೃತ ವ್ಯಕ್ತಿ, ಪೀಣ್ಯ ಡಿಪೋ ನಂ.22ರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ 10 ದಿನಗಳ ಹಿಂದೆ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅವರನ್ನು ಚಿಕ್ಕಬಾಣಾವರದ ಎನ್‌ಆರ್‌ಆರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಕೊರೋನಾ ನೆಗೆಟಿವ್ ವರದಿ ಇದ್ದರೂ ಆಸ್ಪತ್ರೆಯಲ್ಲಿ ಪಾಸಿಟಿವ್ ಟ್ರೀಟ್ಮೆಂಟ್!
ಈ ವೇಳೆ ಆಸ್ಪತ್ರೆ ಸಿಬ್ಬಂದಿ 1.80 ಲಕ್ಷ ಕಟ್ಟಿದ್ದಲ್ಲಿ ಮಾತ್ರ ಮೃತದೇಹ ಕೊಡುವುದಾಗಿ ಹೇಳಿದ್ದಾರೆ. ಆದರೆ, ಮೃತ ಚಾಲಕನ ಹೆಂಡತಿ ಮತ್ತು ಮಕ್ಕಳು ಆಸ್ಪತ್ರೆಯ ಬಿಲ್ ಪಾವತಿಸಲಾಗದೆ ಪರದಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಎಂ.ಎಸ್.ಪಾಳ್ಯ ಚಿತಾಗಾರದಲ್ಲಿ ಶವಸಂಸ್ಕಾರ ನೆರವೇರಿಸಿರುವುದಾಗಿ ತಿಳಿದುಬಂದಿದೆ.