
ಬೆಂಗಳೂರು(ಆ.10): ತಮಿಳಿನ ಸಂತ ಕವಿ ತಿರುವಳ್ಳುವರ್ ಹಾಗೂ ಕನ್ನಡದ ಸರ್ವಶ್ರೇಷ್ಠ ವಚನಕಾರ ಸರ್ವಜ್ಞರು ಕನ್ನಡ ಮತ್ತು ತಮಿಳಿಗರನ್ನು ಬೆಸೆದಿದ್ದು ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಅನುಪಮ ಕೊಡುಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಹಲಸೂರಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾಗಿ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ‘ಕನ್ನಡ ಮತ್ತು ತಮಿಳು ಭಾಷಿಗರ ಐಕ್ಯತೆಯ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಅನೇಕ ವರ್ಷಗಳಿಂದ ಜಟಿಲವಾಗಿದ್ದ ಈ ಸಮಸ್ಯೆಯನ್ನು ಹನ್ನೊಂದು ವರ್ಷಗಳ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಪರಿಹರಿಸಲಾಯಿತು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಂಡಿತು. ಅಂದೇ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ ಸ್ಥಾಪನೆಯಾಯಿತು. ಎರಡು ರಾಜ್ಯಗಳ ನಡುವೆ ಇದೊಂದು ಐತಿಹಾಸಿಕ ಘಟನೆಯಾಯಿತು ಎಂದರು.
ಅದಮಾರು ಕಿರಿಯ ಶ್ರೀ ಈಶಪ್ರಿಯರಿಂದ ಸರ್ವಜ್ಞ ಪೀಠಾರೋಹಣ
ತಮ್ಮ ಸಾಹಿತ್ಯ, ಬರವಣಿಗೆ ಹಾಗೂ ತತ್ವಾದರ್ಶಗಳ ಮೂಲಕ ಸಮಾನತೆಯನ್ನು ಸಾರಿದ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿ ಅತ್ಯಂತ ಮಹತ್ವದ್ದಾಗಿದೆ. ಅದರ ಸಾರ ಎಲ್ಲರಿಗೂ ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ. ಅವರು ಬರೆದಿದ್ದೆಲ್ಲವೂ ನಮ್ಮ ಜೀವನಕ್ಕೆ ಹತ್ತಿರವಾಗಿದೆ. ಸರ್ವಜ್ಞರು ಮತ್ತು ತಿರುವಳ್ಳುವರ್ ಭಾಷೆ, ಗಡಿ ಮೀರಿದ ತತ್ವಜ್ಞಾನಿಗಳು. ಜನರ ನಡುವೆಯೇ ಇದ್ದು ಸಮಾಜವನ್ನು ತಿದ್ದಿದರು. ಅವರಿಬ್ಬರು ಬಿಟ್ಚುಹೋದ ಜ್ಞಾನದ ಬೆಳಕು ಎಲ್ಲೆಡೆ ಅನನ್ಯವಾಗಿ ಪಸರಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಮಿಳು ಸಂಘದ ಪದಾಧಿಕಾರಿಗಳು, ಐಕ್ಯತಾ ಸಮಿತಿ ಸದಸ್ಯರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ