
ದಾವಣಗೆರೆ: ರಾಜ್ಯದಾದ್ಯಂತ ಜಾತಿ ಜನಗಣತಿ ಸಮೀಕ್ಷೆ ಕಾರ್ಯ ವೇಗವಾಗಿ ಸಾಗುತ್ತಿರುವ ಈ ವೇಳೆ, ದಾವಣಗೆರೆಯಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ. ಇದಯ ಸಮೀಕ್ಷಾ ಪ್ರಕ್ರಿಯೆಯ ಸತ್ಯತೆಯ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಬಿ ಬ್ಲಾಕ್ ಪ್ರದೇಶದಲ್ಲಿ ನಡೆದ ಈ ಘಟನೆ ಇದೀಗ ಜಿಲ್ಲಾಡಳಿತ ಮಾತ್ರವಲ್ಲ ರಾಜ್ಯದ ಗಮನ ಸೆಳೆದಿದೆ. ಜಾತಿ ಜನಗಣತಿ ಸಮೀಕ್ಷೆ ವೇಳೆ ಮತ್ತೊಂದು ಮಹಾ ಯಡವಟ್ಟು ಬಯಲು ಆಗಿ ಜಾತಿ ಜನಗಣತಿ ವೇಳೆ ಆಧಾರ್ ಕಾರ್ಡ್ ನೀಡಿದ್ದ ವೈದ್ಯನಿಗೆ ಶಾಕ್ ಆಗಿದೆ. ಆ್ಯಪ್‌ನಲ್ಲಿ ಆಧಾರ್ ನಂಬರ್ ನಮೂದಿಸುತ್ತಿದ್ದಂತೆ ಅನ್ಯಕೋಮಿನ ಹೆಸರು ಕುಟುಂಬ ಸದಸ್ಯರ ಕಾಲಂನಲ್ಲಿ ಸೇರ್ಪಡೆ ಯಾಗಿದೆ. ದಾವಣಗೆರೆ MCC ಬಿ ಬ್ಲಾಕ್ ನಲ್ಲಿ ಸಮೀಕ್ಷೆ ಮಾಡುವ ವೇಳೆ ಘಟನೆ ನಡೆದಿದೆ.
ಸ್ಥಳೀಯ ವೈದ್ಯ ಡಾ. ಹರ್ಷ ಅವರ ಮನೆಯಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದ ವೇಳೆ, ಅವರ ಆಧಾರ್ ಸಂಖ್ಯೆ ನಮೂದಿಸಿದ ತಕ್ಷಣ ಆ್ಯಪ್‌ನಲ್ಲಿ ಕುಟುಂಬ ಸದಸ್ಯರ ಪಟ್ಟಿಯಲ್ಲಿ ಅನ್ಯಕೋಮಿನ ವ್ಯಕ್ತಿಗಳ ಹೆಸರುಗಳು ಸ್ವಯಂಚಾಲಿತವಾಗಿ ಸೇರಿಕೊಂಡವು. ಹರ್ಷ ಅವರ ಆಧಾರ್ ನಂಬರ್ ಹಾಕುತ್ತಿದ್ದಂತೆ ಪಟ್ಟಿಯಲ್ಲಿ ‘ಅಪ್ರೋಜಾ’ ಮತ್ತು ‘ಶರೀಫ್ ಬಾನು’ ಎಂಬ ಇಬ್ಬರ ಹೆಸರುಗಳು ಕುಟುಂಬ ಸದಸ್ಯರ ವಿಭಾಗದಲ್ಲಿ ಕಾಣಿಸಿಕೊಂಡವು.
ಈ ಅನಿರೀಕ್ಷಿತ ಬೆಳವಣಿಗೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕರಲ್ಲಿಯೂ ಗೊಂದಲ ಉಂಟುಮಾಡಿತು. ಆ್ಯಪ್‌ನ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ, ಕೊನೆಗೆ ಸಮೀಕ್ಷಕರು ಪ್ರತಿ ಕುಟುಂಬ ಸದಸ್ಯರ ವಿವರವನ್ನು ಕೈಯಲ್ಲಿ ಪ್ರತ್ಯೇಕವಾಗಿ ದಾಖಲಿಸುವ ಮೂಲಕ ಗಣತಿಯನ್ನು ಪೂರ್ಣಗೊಳಿಸಿದರು.
ಘಟನೆಯ ಬಳಿಕ, ವೈದ್ಯ ಹರ್ಷ ಅವರು ಈ ವಿಷಯವನ್ನು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಯಡವಟ್ಟಿನ ಬಗ್ಗೆ ಸ್ಪಷ್ಟನೆ ನೀಡುತ್ತಾ, “ಸಾಫ್ಟ್‌ವೇರ್‌ನ ಬ್ಯಾಕ್‌ಎಂಡ್‌ನಲ್ಲಿ ತಾಂತ್ರಿಕ ಲಿಂಕ್ ಸಮಸ್ಯೆಯಿಂದ ಈ ರೀತಿಯ ಸಮಸ್ಯೆ ಉಂಟಾಗಿದೆ. ಸಂಬಂಧಿತ ಹೆಸರುಗಳನ್ನು ತಕ್ಷಣ ಅಳಿಸಿ, ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಜಾತಿ ಜನಗಣತಿ ಕಾರ್ಯದಲ್ಲಿ ಈ ರೀತಿಯ ತಾಂತ್ರಿಕ ದೋಷಗಳು ವರದಿಯಾಗುತ್ತಿರುವುದು ಸಮೀಕ್ಷೆಯ ನಿಖರತೆ ಮತ್ತು ಡೇಟಾ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಆಧಾರ್ ಸಂಖ್ಯೆಯ ಆಧಾರದ ಮೇಲೆ ಕುಟುಂಬ ಸದಸ್ಯರ ವಿವರಗಳು ತಪ್ಪಾಗಿ ತೋರಿಸುವುದು, ಭವಿಷ್ಯದಲ್ಲಿ ಡೇಟಾ ವಿಶ್ಲೇಷಣೆ ಮತ್ತು ಫಲಿತಾಂಶಗಳ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಗಣತಿ ಕಾರ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ ಅವಧಿ ನೀಡಿದ್ದು, ಈ ನಡುವೆ ಇಂತಹ ತಾಂತ್ರಿಕ ದೋಷಗಳನ್ನು ಶೀಘ್ರ ಸರಿಪಡಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ