ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ; ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಘೋಷಣೆ

Published : Mar 07, 2026, 09:08 AM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯನ್ನು ಗುರಿಯಾಗಿಸಿಕೊಂಡು ₹100 ಕೋಟಿ ಅನುದಾನ ಘೋಷಿಸಲಾಗಿದೆ. ಜಿಲ್ಲೆಯ ಬಹುಕಾಲದ ಬೇಡಿಕೆಗಳನ್ನು ಕಡೆಗಣಿಸಿರುವುದು ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ನಾಗರಾಜ ಎಸ್.ಬಡದಾಳ್

ದಾವಣಗೆರೆ: ಉಪ ಚುನಾವಣೆ ಹೊಸ್ತಿಲಲ್ಲಿರುವ ದಾವಣಗೆರೆ ದಕ್ಷಿಣಕ್ಕೆ ₹100 ಕೋಟಿ ಅನುದಾನ, ಚನ್ನಗಿರಿ ತಾಲೂಕಿನ 41 ಕೆರೆ ತುಂಬಿಸುವ ಯೋಜನೆ, ನೇರ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಮತ್ತು ನಿರ್ಮಾಣಕ್ಕೆ ಅನುದಾನ ಸೇರಿದಂತೆ ಕೆಲವೊಂದಿಷ್ಟು ಯೋಜನೆ, ಕಾರ್ಯಕ್ರಮ ಘೋಷಿಸುವ ಮೂಲಕ ಹಸಿದವರ ಬಾಯಿಗೆ ಒಂದಿಷ್ಟು ನೀರುಣಿಸುವ ಪ್ರಯತ್ನವನ್ನು ರಾಜ್ಯ ಬಜೆಟ್‌ ಮೂಲಕ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿ, ಕೈ ತೊಳೆದುಕೊಂಡಿದ್ದಾರೆ.

ತಮ್ಮ 17ನೇ ದಾಖಲೆಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ತಮಗೆ ರಾಜಕೀಯ ಪುನರ್ಜನ್ಮ ನೀಡಿದ್ದ, ಸಿದ್ಧರಾಮೋತ್ಸವ ಮೂಲಕ ಮತ್ತಷ್ಟು ಶಕ್ತಿ ತುಂಬಿದ್ದಂತಹ ದಾವಣಗೆರೆ ಜಿಲ್ಲೆಗೆ ವಿಶೇಷವಾಗಿ ಏನಾದರೂ ಕೊಡುತ್ತಾರೇನೋ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ ಮತ್ತೊಮ್ಮೆ ಕಟ್ಟಿಬುತ್ತಿ ಎಂಬುದು ಸಾಬೀತಾಗಿದೆ.

ಉಪ ಚುನಾವಣೆ ಹೊಸ್ತಿಲಲ್ಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸೋಲಿಲ್ಲದ್ದ ಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಇದ್ದಾಗಲಾದರೂ ₹100 ಕೋಟಿ ಅನುದಾನ ನೀಡಿದ್ದರೆ ಸಿಎಂ ಸಿದ್ದರಾಮಯ್ಯ ಕಳಕಳಿಗೆ ಜನರು ಮೆಚ್ಚುತ್ತಿದ್ದರು. ದಾವಣಗೆರೆ ಹಳೇ ಊರು- ಹೊಸ ಊರು ಎಂಬುದಾಗಿ ಅಭಿವೃದ್ಧಿ ವಿಚಾರದಲ್ಲಿ ಉತ್ತರ-ದಕ್ಷಿಣ ಕ್ಷೇತ್ರಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಶಾಮನೂರು ಶಿವಶಂಕರಪ್ಪನವರು ಇದ್ದಾಗಲೇ ₹100 ಕೋಟಿ ಅನುದಾನ ಬಿಡುಗಡೆ ಮಾಡಿ, ಪರಿಶಿಷ್ಟರು, ಅಲ್ಪ ಸಂಖ್ಯಾತರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದ್ದರೆ ಸ್ವತಃ ಶಾಮನೂರು ಅವರೇ ಸಿಎಂಗೆ ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿ, ಅದ್ಧೂರಿ ಕಾರ್ಯಕ್ರಮ ಮಾಡುತ್ತಿದ್ದರು. ಈಗ ಯಜಮಾನ ಇಲ್ಲದ ಮನೆಯಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಕ್ಷೇತ್ರವಿದೆ. ಉಪ ಚುನಾವಣೆ ಎದುರು ನೋಡುತ್ತಿದೆ. ಉಪ ಸಮರ ಗಮನದಲ್ಲಿಟ್ಟುಕೊಂಡೇ, ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಉಳಿಸಿಕೊಳ್ಳಲು ₹100 ಕೋಟಿ ಅನುದಾನದ ದಾಳವನ್ನು ಸಿದ್ದರಾಮಯ್ಯ ಉರುಳಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಉಪ ಚುನಾವಣೆ ಹೊಸ್ತಿಲಲ್ಲಿ ನಿಂತ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಪರಿಶಿಷ್ಟರು, ಅಲ್ಪ ಸಂಖ್ಯಾತರು ಹೆಚ್ಚಾಗಿ ವಾಸಿಸುವ ವಿವಿಧ ಭಾಗಗಳಿಗೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ₹100 ಕೋಟಿ ಘೋಷಣೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಇಷ್ಟು ಸಲ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ದಕ್ಷಿಣ ಕ್ಷೇತ್ರದ ಅದೇ ಪರಿಶಿಷ್ಟ ಜಾತಿ- ಪಂಗಡಗಳು, ಅಲ್ಪಸಂಖ್ಯಾತರು ನೆನಪಾಗದೇ, ಉಪ ಚುನಾವಣೆ ಘೋಷಣೆಯಾಗುವ ಮುನ್ನಾ ದಿನಗಳಲ್ಲಿ ನೆನಪಾಗಿರುವಂತಿದೆ ಎಂಬ ಮಾತು ಸ್ವತಃ ಜನರಿಂದ ಕೇಳಿಬರುತ್ತಿವೆ.

ದಾವಣಗೆರೆಯಲ್ಲಿ ಮತ್ಸ್ಯದರ್ಶಿನಿ ಮೀನು ಮಾರಾಟ ಕೇಂದ್ರ ಸ್ಥಾಪಿಸುವುದಾಗಿ, ಹಿಂದುಳಿದ ವರ್ಗಗಳ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯ ನಿರ್ಮಾಣ, ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗಗಳಿಗೆ ಭೂ ಸ್ವಾಧೀನ ಹಾಗೂ ನಿರ್ಮಾಣಕ್ಕೆ ಅನುದಾನವನ್ನೂ ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್‌ನಲ್ಲಿ ಮೀಸಲಿಟ್ಚಿದ್ದಾರೆ. ದಾವಣಗೆರೆ ತಾ. ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ, ಆನಗೋಡು ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪಿಸುವ ಘೋಷಣೆ ಸಹ ಮಾಡಿದ್ದಾರೆ.

ಅಲ್ಲದೇ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಮಾಯಕೊಂಡ ಕ್ಷೇತ್ರದಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಿಸುವ, 2ನೇ ಹಂತದಲ್ಲಿ ಚನ್ನಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರಮಿಕ ವಸತಿ ಶಾಲೆಗಳ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಚನ್ನಗಿರಿ ತಾಲೂಕಿನ 41 ಕೆರೆಗಳನ್ನು ತುಂಬಿಸುವ ಯೋಜನೆ, ಹೊನ್ನನಾಯಕನಹಳ್ಳಿ ಕೆರೆ ಹಾಗೂ ಕಗ್ಗತ್ತೂರು ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿ, ಅಭವೃದ್ಧಿಪಡಿಸುವ ಘೋಷಣೆ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನಲ್ಲಿ ಒಟ್ಟು 12 ಸಾವಿರ ಮೆಟ್ರಿಕ್ ಸಾಮರ್ಥ್ಯದ ಶೀತಲಗೃಹವನ್ನು 32 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುವ ಘೋಷಣೆ ಮಾಡಿದ್ದಾರೆ.

* ದಾವಣಗೆರೆ ಭವಿಷ್ಯದ ಬಜೆಟ್‌ ನಿರೀಕ್ಷೆ ಮತ್ತೆ ಹುಸಿ

1, ಈ ಹಿಂದೆ ಬಿಜೆಪಿ-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ದಶಕಗಳಿಂದ ಹೂಳು ತುಂಬಿದ್ದ, ಹಾಳಾಗಿದ್ದ ಭದ್ರಾ ನಾಲೆಗಳ ಆಧುನೀಕರಣವಾಗಿತ್ತು. ಈಗ ಭದ್ರಾ ನಾಲೆಗಳು ಸಂಪೂರ್ಣ ಹಾಳಾಗಿವೆ. ಅಲ್ಲಲ್ಲಿ ಸೇತುವೆಗಳು ಶಿಥಿಲಗೊಂಡಿವೆ. ಭದ್ರಾ ನಾಲೆ ಆಧುನೀಕರಣಕ್ಕೆ ಅನುದಾನ ನೀಡಿ, ಭದ್ರಾ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ.

2, ಐಟಿ ಬಿಟಿ ಪಾರ್ಕ್‌ ಸ್ಥಾಪನೆ, ಕೈಗಾರಿಕೆಗಳನ್ನು ದಾವಣಗೆರೆಗೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಇತ್ತ ಗಮನವನ್ನೇ ಹರಿಸಿಲ್ಲ. ಸ್ವಯಂ ಉದ್ಯೋಗಕ್ಕೆ, ಮಹಿಳಾ ಸಬಲೀಕರಣಕ್ಕ, ಯುವಜನರಿಗೆ ಇಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆ ಸಿಎಂ ಆಲೋಚನೆ ಮಾಡಿಲ್ಲ.

3. ದಶಕಗಳಿಂದಲೂ ದಾವಣಗೆರೆಯಲ್ಲೊಂದು ವಿಮಾನ ನಿಲ್ದಾಣ ಆಗಬೇಕೆಂಬುದು ವಿದ್ಯಾನಗರಿ, ವಾಣಿಜ್ಯ ನಗರಿ ಅಂತೆಲ್ಲಾ ಬಿರುದುಗಳನ್ನು ಹೊಂದಿರುವ ಈ ಊರಿನ ಜನರ ಆಶೋತ್ತರಕ್ಕೆ ಈ ಸರ್ಕಾರವೂ ಸೊಪ್ಪು ಹಾಕಿಲ್ಲ.

4. ಏಷ್ಯಾದಲ್ಲೇ ಅತೀ ದೊಡ್ಡ ಎರಡನೇ ಕೆರೆ ಸೂಳೆಕೆರೆ, ಸಂತೇಬೆನ್ನೂರಿನ ಪುಷ್ಕರಣಿ, ಗುಜರಾತ್‌ನ ಗೀರ್ ಮಾದರಿಯ ಮೂರು ರೀತಿಯ ಪುಟ್ಟ ಕಾಡನ್ನು ಹೊಂದಿರುವ ಜಗಳೂರು ತಾ. ರಂಗಯ್ಯನ ದುರ್ಗ, ದಾವಣಗೆರೆ ಗಾಜಿನ ಮನೆ, ಆನೆಕೊಂಡ, ಬೇತೂರು, ಜಗಳೂರಿನ ಕೊಡದಗುಡ್ಡ, ಹರಿಹರದ ಶ್ರೀ ಹರಿಹರೇಶ್ವರ ಹೀಗೆ ಪ್ರವಾಸಿ, ಪಣ್ಯ ಕ್ಷೇತ್ರಗಳನ್ನು ರಾಜ್ಯದ ಪ್ರವಾಸೋದ್ಯಮ ನಕ್ಷೆಗೆ ಸೇರಿಸಿ, ಇ‍ವುಗಳನ್ನೂ ಪ್ರವಾಸಿ ತಾಣವಾಗಿಸುವ ಸಣ್ಣ ಆಲೋಚನೆಯನ್ನೂ ರಾಜ್ಯ ಸರ್ಕಾರ ಮಾಡದಿರುವುದು ಮತ್ತೊಂದು ದುರ್ದೈವ.

5. ಮೆಕ್ಕೆಜೋಳ ಅತಿಯಾಗಿ ಬೆಳೆಯುವ ರಾಜ್ಯದ ಮೆಕ್ಕೆಜೋಳದ ಕಣಜ, ಬತ್ತ, ಅಡಿಕೆ, ಹೀಗೆ ವಿವಿಧ ಬೆಳೆಗಳಿಗೆ ಹೆಸರಾದ ಇಲ್ಲಿ ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸಿಲ್ಲ. ಆನಗೋಡು ಮಿನಿ ಪ್ರಾಣಿ ಸಂಗ್ರಹಾಲಯಕ್ಕೆ ಪ್ರೋತ್ಸಾಹವಿಲ್ಲ.

6. ಕೃಷಿ ಮತ್ತು ತೋಟಗಾರಿಕೆ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು ಎಂಬುದು ಮತ್ತೆ ಅರಣ್ಯ ರೋಧನವಾಗಿ ಉಳಿದಿದೆ ಎಲ್ಲಾ ಇಲ್ಲಗಳ ಮಧ್ಯೆಯೂ ದಾವಣಗೆರೆ ನಗರ, ಜಿಲ್ಲೆಯು ತನ್ನದೇ ಸಾಮರ್ಥ್ಯದ ಮೇಲೆ ಬೆಳೆಯುತ್ತಿದೆ. ದಾವಣಗೆರೆ ಜಿಲ್ಲೆಗೆ ವಿಶೇಷ ಯೋಜನೆ, ಕಾರ್ಯಕ್ರಮ ನೀಡುವ ಕಾಲ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ ಮಧ್ಯ ಕರ್ನಾಟಕದ ಜನತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Budget 2026: ಇದಪ್ಪಾ ಬಜೆಟ್ ಅಂದ್ರೆ, 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ!
Karnataka Budget 2026: ಪೊಲೀಸ್ ಇಲಖೆಗೆ ಸೇರಲು ಸಿದ್ಧತೆ ನಡೆಸ್ತಿರೋರಿಗೆ ಗುಡ್‌ನ್ಯೂಸ್ ಕೊಟ್ಟ ಸಿಎಂ!