Karnataka Budget 2026: ಪೊಲೀಸ್ ಇಲಖೆಗೆ ಸೇರಲು ಸಿದ್ಧತೆ ನಡೆಸ್ತಿರೋರಿಗೆ ಗುಡ್‌ನ್ಯೂಸ್ ಕೊಟ್ಟ ಸಿಎಂ!

Kannadaprabha News   | Kannada Prabha
Published : Mar 07, 2026, 07:49 AM IST
kerala police jobsKarnataka Budget 2026 more police stations police recruitment details

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ 'ಡ್ರಗ್ಸ್ ಮುಕ್ತ ಕರ್ನಾಟಕ' ಗುರಿಯೊಂದಿಗೆ ಪೊಲೀಸ್ ಇಲಾಖೆಗೆ ವಿಶೇಷ ಅನುದಾನ ಘೋಷಿಸಿದ್ದಾರೆ.  12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, 8 ಸಾವಿರ ಸಿಬ್ಬಂದಿ ನೇಮಕಾತಿ ಹಾಗೂ ಇಲಾಖೆಯ ಆಧುನೀಕರಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.

ಕರ್ನಾಟಕ ಬಜೆಟ್: ಕರುನಾಡನ್ನು ‘ಡ್ರಗ್ಸ್ ಮುಕ್ತ’ವಾಗಿಸುವ ತಮ್ಮ ಘೋಷಣೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ಪೊಲೀಸರಿಗೆ ಆರ್ಥಿಕ ಶಕ್ತಿ ತುಂಬಿದ್ದಾರೆ. ಹೊಸದಾಗಿ ರಚನೆಯಾದ ಮಾದಕ ವಸ್ತು ವಿರೋಧಿ ಕಾರ್ಯಪಡೆಗೆ ₹10 ಕೋಟಿ ಅನುದಾನ ನೀಡಿದ್ದಾರೆ. ಅಲ್ಲದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರ ಸ್ಥಾಪಿಸು’ದಾಗಿ ಅವರು ಘೋಷಿಸಿದ್ದಾರೆ. ಇನ್ನು ಪೊಲೀಸ್ ನೇಮಕಾತಿಗೆ ಆಡಳಿತಾತ್ಮಕವಾಗಿ ಎದುರಾಗುತ್ತಿದ್ದ ತಾಂತ್ರಿಕ ಆಡಚಣೆಗೆ ಪರಿಹರಿಸಿರುವ ಮುಖ್ಯಮಂತ್ರಿ ಅವರು, ಪೊಲೀಸ್ ನೇಮಕಾತಿ ಮಂಡಳಿ ರಚಿಸುವುದಾಗಿ ಪ್ರಕಟಿಸಿದ್ದಾರೆ.

ಹೊಸದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಸಜಿಪನಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಸಂಚಾರ, ಬೆಳಗಾವಿ ಜಿಲ್ಲೆಯ ಯಲಗಟ್ಟಿ, ಯಾದಗಿರಿ ಕಕ್ಕೇರಾ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಂಚಾರ, ದಾವಣೆಗೆರೆ ಜಿಲ್ಲೆಯ ಆನಗೋಡು, ಹಾವೇರಿ ಜಿಲ್ಲೆಯ ತಿಳುವಳ್ಳಿ, ಮೈಸೂರು ನಗರದ ಉದಯಗಿರಿ ದಕ್ಷಿಣ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಗ್ರಾಮಾಂತರ, ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ವಲಯ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲೇಪೇಟೆ ಸಂಚಾರ ಸೇರಿ 12 ಪೊಲೀಸ್ ಠಾಣೆಗಳ ಸ್ಥಾಪನೆಗೆ ಅಸ್ತು ಎಂದಿರುವ ಮುಖ್ಯಮಂತ್ರಿ ಅ‍ವರು, ಈ ವರ್ಷ 8 ಸಾವಿರ ಪೊಲೀಸರ ನೇಮಕಾತಿಗೆ ಹಸಿರು ನಿಶಾನೆ ತೋರಿದ್ದಾರೆ.

ಬೆಳಗಾವಿ ಅಧಿವೇಶನದ ಸಮಯದಲ್ಲಿ ಭದ್ರತೆಗೆ ಬರುವ ಪೊಲೀಸರು ಎದುರಿಸುತ್ತಿದ್ದ ವಸತಿ ಸಮಸ್ಯೆಗೆ ಪರಿಹರಿಸಲು ಸರ್ಕಾರ ಮುಂದಾಗಿದೆ. ಬೆಳಗಾವಿಯಲ್ಲಿ 1 ಸಾವಿರ ಪೊಲೀಸರಿಗೆ ₹20 ಕೋಟಿ ವೆಚ್ಚದಲ್ಲಿ ಶಾಶ್ವತ ಬ್ಯಾರಕ್‌ ನಿರ್ಮಿಸುವುದಾಗಿ ಆಯವ್ಯಯದಲ್ಲಿ ಸರ್ಕಾರ ಹೇಳಿದೆ. ಪೊಲೀಸ್ ಆಧುನೀಕರಣಕ್ಕೆ ಆದ್ಯತೆ ನೀಡಿರುವ ಮುಖ್ಯಮಂತ್ರಿ ಅವರು, ಬಾಡಿ ವೋರ್ನ್‌ ಕ್ಯಾಮೆರಾ, ಡ್ರೋನ್‌ ಸೇರಿದಂತೆ ಇತರೆ ಅತ್ಯಾಧುನಿಕ ಉಪಕರಣ ಖರೀದಿಗೆ ₹142 ಕೋಟಿ ಅನುದಾನ ನೀಡಲಿದೆ. ಬೆಂಗಳೂರಿನ ಸಂಚಾರ ಸಮಸ್ಯೆಗೆ ₹25 ಕೋಟಿ ವೆಚ್ಚದ ಸಂಯೋಜಿತ ಡಿಜಿಟಲ್ ವೇದಿಕೆ ರೂಪಿಸುವುದಾಗಿ ಹೇಳಿದ್ದಾರೆ. ಹೊಸದಾಗಿ ರಾಯಚೂರಿನಲ್ಲಿ ಸೆಂಟ್ರಲ್ ಜೈಲು ನಿರ್ಮಿಸುವುದಾಗಿ ಪ್ರಕಟಿಸಿದ್ದಾರೆ. ಜೈಲಿನ ಅಕ್ರಮಗಳ ತಡೆಗೆ ಭದ್ರತಾ ತಪಾಸಣಾ ಉಪಕರಣ ಖರೀದಿಗೆ ₹20 ಕೋಟಿ ಅನುದಾನ ಒದಗಿಸಿದ್ದಾರೆ.

ಹಳೆಯ ಕಟ್ಟಡ ದುರಸ್ತಿ ಮಾಡಿ

ಪ್ರತಿ ವರ್ಷ ಬೆಳಗಾವಿ ಅಧಿವೇಶನದಲ್ಲಿ ವಸತಿ ಇಲ್ಲದೆ ಪೊಲೀಸರು ಅನುಭವಿಸುತ್ತಿದ್ದ ಸಂಕಷ್ಟಕ್ಕೆ ಮುಕ್ತಿ ನೀಡಲು ಶಾಶ್ವತ ಬ್ಯಾರಕ್‌ಗಳ ನಿರ್ಮಿಸುವ ಮುಖ್ಯಮಂತ್ರಿ ಅವರ ತೀರ್ಮಾನ ಉತ್ತಮವಾಗಿದೆ. ಹಳೇ ಪೊಲೀಸ್ ಕಟ್ಟಡಗಳ ದುರಸ್ತಿಗೆ ಒತ್ತು ಕೊಡಬೇಕಿದೆ. ಸ್ವಸ್ಥ ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿರುವ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿರುವುದು ಸ್ವಾಗತಾರ್ಹ ನಡೆ. ಆದರೆ ಆ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೂ ಸರ್ಕಾರ ಗಮನಹರಿಸಬೇಕಿದೆ. ಬಾಡಿ ವೋರ್ನ್‌ ಕ್ಯಾಮೆರಾಗಳ ಸೇರಿದಂತೆ ಅತ್ಯಾಧುನಿಕ ವಿತರಣೆಯಿಂದ ಭ್ರಷ್ಟಾಚಾರಕ್ಕೆ ಮಾತ್ರವಲ್ಲದೆ ಸಾಮಾಜಿಕವಾಗಿ ಪೊಲೀಸರ ದುರ್ವತನೆ ಹಾಗೂ ಕೆಟ್ಟ ಭಾಷೆ ಪ್ರಯೋಗಕ್ಕೂ ಕಡಿವಾಣ ಬೀಳಲಿದೆ.

-ಡಾ। ಡಿ.ಸಿ.ರಾಜಪ್ಪ, ನಿವೃತ್ತ ಡಿಐಜಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಬಜೆಟ್: ವಸತಿ ಯೋಜನೆಯಲ್ಲಿ ಮನೆ ಬೇಕಾ? 'ನಮ್ಮ ಮನೆ' ಸ್ಕೀಂ ಬಗ್ಗೆ ತಿಳ್ಕೊಳ್ಳಿ
ಶ್ರೀಲಂಕಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಂದ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ; ನೋಟಿಸ್‌ ಜಾರಿ