ಜೈಲಿನಿಂದಲೇ ಸರ್ಕಾರ, ಕಾನೂನು, ಸಂವಿಧಾನದ ಅಣಕ ಮಾಡಿದ ದರ್ಶನ್‌, 'ಸಾಮಾಜಿಕ ನ್ಯಾಯ' ರೇಣುಕಾಸ್ವಾಮಿಗೆ ಸಿಗಲ್ವಾ?

By Santosh Naik  |  First Published Aug 26, 2024, 11:55 AM IST

ಮಾತೆತ್ತಿದರೆ ತಮ್ಮದು ಸಾಮಾಜಿಕ ನ್ಯಾಯದ ಸರ್ಕಾರ ಎಂದು ಹೇಳುವ ಸಿಎಂ ಸಿದ್ಧರಾಮಯ್ಯ ಅವರಿಗೆ ಅಣಕ ಮಾಡುವಂತೆ ಜೈಲಿನಲ್ಲಿ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ಅವರ ಶೋಕಿ ಜೀವನದ ಝಲಕ್‌ಗಳು ಮಾಧ್ಯಮಗಳ ಎದುರು ಬಂದಿವೆ.


ಬೆಂಗಳೂರು (ಆ.26): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ತೂಗುದೀಪಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೋ ಪ್ರಕಟವಾದ ಬೆನ್ನಲ್ಲಿಯೇ ಸರ್ಕಾರಕ್ಕೆ ಭಾರೀ ಮುಜುಗರವಾಗಿದೆ ಅನ್ನೋದು ಜನರಿಗೆ ಗೊತ್ತಾಗಿದೆ. ಆದ್ರೆ ಸರ್ಕಾರ ಕೊಚ್ಚೆ ಬಿದ್ರೂ ಅದನ್ನ ಸಾವರಿಸಿಕೊಳ್ಳುವ ಕೆಲಸ ಮಾಡ್ತಿದೆ. ರಾಜ್ಯ ಸರ್ಕಾರ ಜೈಲಿನ 7 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಕೈತೊಳೆದುಕೊಂಡಿದೆ. ಆದರೆ, ದರ್ಶನ್‌ ರಾಜಾತಿಥ್ಯದ ಫೋಟೋ ಪ್ರಕಟವಾಗುವುದರೊಂದಿಗೆ ಅವರು ರಾಜ್ಯ ಸರ್ಕಾರ, ಕಾನೂನು ಸುವ್ಯವಸ್ಥೆ, ಪೊಲೀಸ್‌ ಅಧಿಕಾರಿಗಳು, ಕೊನೆಗೆ ದೇಶದ ಸಂವಿಧಾನವನ್ನೂ ಕೂಡ ಅಣಕ ಮಾಡಿದ್ದಾರೆ ಅನ್ನೋದು ಮಾತ್ರ ಯಾರಿಗೂ ಅರ್ಥವಾಗಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಂತೂ ಮಾತೆತ್ತಿದರೆ ಸಾಮಾಜಿಕ ನ್ಯಾಯ ಎಂದು ಹೇಳುತ್ತಲೇ ಇರುತ್ತಾರೆ. ಆದರೆ, ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ವ್ಯಕ್ತಿಗೆ ನೀಡುತ್ತಿರುವ ಅತಿಥಿ ಸತ್ಕಾರವನ್ನು ನೋಡಿದ್ರೆ ರೇಣುಕಾಸ್ವಾಮಿಗೆ ಈ ಸಾಮಾಜಿಕ ನ್ಯಾಯ ಸಿಗೋದಿಲ್ಲ ಎನ್ನುವ ಸೂಚನೆಗಳಂತೂ ಸಿಕ್ಕಿವೆ. ಜೈಲಿನಲ್ಲಿ ದರ್ಶನ್‌ಗೆ ಜೊತೆಯಾಗಿ ಮಲಗಿಕೊಳ್ಳೋಕೆ ಸಂಗಾತಿ ಒಂದಿಲ್ಲ ಅನ್ನೋದು ಬಿಟ್ಟರೆ, ಮತ್ತೆಲ್ಲ ಸಕಲ ಸೌಲಭ್ಯಗಳು ಸಿಗ್ತಿವೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ.

ಈ ಕೇಸ್‌ನ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಅವರಂತೂ ಇದರಿಂದ ಸರ್ಕಾರಕ್ಕೆ ಮುಜುಗರವಾಗೋದೇನಿದೆ. ಮುಲಾಜಿಲ್ಲದೆ ಎಲ್ಲರ ಮೇಲೆ ಕ್ರಮ ತೆಗೆದುಕೊಳ್ತೀವಿ ಎಂದು ಹಳಸಲು ಸ್ಟೇಟ್‌ಮೆಂಟ್‌ಗಳನ್ನೇ ಹೇಳುತ್ತಿದ್ದಾರೆ. ಹಿಂದಿನ ಗೃಹ ಸಚಿವರು 'ಕಠಿಣ ಕ್ರಮ' ತೆಗೆದುಕೊಳ್ಳಲು ನಿಸ್ಸೀಮರಾಗಿದ್ರೆ, ಈಗಿನ ಗೃಹ ಸಚಿವರು 'ಮುಲಾಜಿಲ್ಲದೆ ಕ್ರಮ' ತೆಗೆದುಕೊಳ್ಳಲು ಎತ್ತಿದ ಕೈ.

Tap to resize

Latest Videos

ದುಡ್ಡು ಕೊಟ್ರೆ ಎಂಥಾ ಕಾನೂನು, ಸರ್ಕಾರ ಕೂಡ ನಿನ್ನ ಅಡಿಯಾಳು ಅನ್ನೋದಕ್ಕೆ ದರ್ಶನ್‌ ಕೇಸ್‌ ಸಾಕ್ಷಿ. ಕೊಲೆ ಮಾಡಿದ ಆರೋಪ ಹೊತ್ತಿರುವ ಸ್ಟಾರ್‌ ನಟನ ಪತ್ನಿ, ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನ ಬರೀ ಮಗನ ಸೀಟು ಕೇಳೋ ವಿಚಾರಕ್ಕೆ ಭೇಟಿ ಮಾಡ್ತಾರೆ ಅಂದ್ರೆ ಇವರು ಜನರನ್ನು ಎಷ್ಟು ಮೂರ್ಖರನ್ನಾಗಿ ಮಾಡ್ತಿದ್ದಾರೆ ಅನ್ನೋದಕ್ಕೆ ಇನ್ನೊಂದು ನಿದರ್ಶನ.
ನಮ್ಮ ದೇಶದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡುತ್ತೆ. ಸಂವಿಧಾನದ ಅಡಿಯಲ್ಲಿ ತಮ್ಮ ಸರ್ಕಾರ ಕೆಲಸ ಮಾಡುತ್ತೆ. ಪ್ರತಿ ಕಚೇರಿಯಲ್ಲೂ ಸಂವಿಧಾನದ ಮುನ್ನುಡಿಯನ್ನು ಇಡ್ಬೇಕು ಅಂತಾ ಆರ್ಡರ್‌ ಮಾಡೋ ಸರ್ಕಾರ ಇದೇ ಸಂವಿಧಾನದ ಆಶಯವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಾಲನೆ ಮಾಡ್ತಿಲ್ಲ ಅನ್ನೋದೇ ದುರ್ವಿಧಿ. ಇನ್ನು ನಮ್ಮ ಕಾನೂನು ವ್ಯವಸ್ಥೆಯನ್ನ ಹೇಳೋದೇ ಬೇಡ. ಜೈಲಿನಲ್ಲಿದ್ದುಕೊಂಡೇ ದರ್ಶನ್‌ ಮಾಡಿರುವ ಇಷ್ಟು ತಪ್ಪುಗಳ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ಹೇಳಲು ಕೂಡ ಗೃಹ ಸಚಿವರಿಗೆ ಆಗ್ತಿಲ್ಲ. 'ದರ್ಶನ್‌ ಮಾಡಿರುವುದು ತಪ್ಪು. ಅವರ ಮೇಲೆ ಈ ಸೆಕ್ಷನ್‌ಗಳ ಅಡಿ ಮತ್ತೊಂದು ಕೇಸ್‌ ಹಾಕುತ್ತೇವೆ..' ಎನ್ನುವ ಧೈರ್ಯ ಕೂಡ ಸರ್ಕಾರಕ್ಕೆ ಬರೋದಿಲ್ಲ.

ಇಲ್ಲಿಯವರೆಗೂ ಜೈಲಿನಲ್ಲಿ ದರ್ಶನ್‌ ಕಂಬಿಗಳ ಹಿಂದೆ ಇದ್ದಾರೆ, ನೋವಿನಲ್ಲಿದ್ದಾರೆ. ತಾನು ಮಾಡಿರುವ ಕೃತ್ಯದ ಬಗ್ಗೆ ಅವರಿಗೆ ಪಶ್ಚಾತ್ತಾಪವಾಗುತ್ತಿದೆ ಎಂದೇ ಹೊರಗಿನವರು ಅಂದುಕೊಳ್ಳುತ್ತಿದ್ದರು. ಆದರೆ, ಕಿಲ್ಲಿಂಗ್‌ ಸ್ಟಾರ್‌ ಮುಖದಲ್ಲಿ ತಾನು ಮಾಡಿರುವ ಯಾವ ಕೃತ್ಯಕ್ಕೂ ಪಶ್ಚಾತ್ತಾಪವೇ ಇದ್ದಂತೆ ಕಾಣುತ್ತಿಲ್ಲ. ಜೈಲಿನಲ್ಲಿರುವ ಇನ್ನೊಂದಿಷ್ಟು ರೌಡಿಗಳ ಪಟಾಲಂ ಕಟ್ಟಿಕೊಂಡು ಮತ್ತಷ್ಟು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ಲ್ಯಾನ್‌ ಮಾಡುತ್ತಿರುವಂತೆ ಕಾಣುತ್ತಿದೆ. ಕೈಯಲ್ಲಿ ಸಿಗರೇಟು, ಬೇಕೆಂದಾಗ ಕಾಫಿ, ಸುಖದ ಸಪ್ಪತ್ತಿಗೆಯ ರೀತಿ ಬೆಡ್‌, ಬೇಕೆಂದಾಗ ಮೊಬೈಲ್‌ ಫೋನ್‌, ಅಭಿಮಾನಿಗಳ ಜೊತೆ ಹರಟೆ, ಜೈಲು ಅಧಿಕಾರಿಗಳ ಸಹಾಯದಿಂದಲೇ ಜೋಮೋಟೋ, ಸ್ವಿಗ್ಗಿಯಲ್ಲಿ ಬಗೆಬಗೆಯ ಬಿರಿಯಾನಿ, ವಿದೇಶಿ ಮದ್ಯ, ಎಣ್ಣೆ ಮಸಾಜ್‌ ಎಲ್ಲವೂ ಸಿಗುತ್ತಿದೆ. ಆದರೆ, ಸರ್ಕಾರ ಮಾತ್ರ ಸಾಮಾಜಿಕ ನ್ಯಾಯ ಕೊಡ್ತೇವೆ ಅನ್ನೋ ಹೆಸರಲ್ಲಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದೆ. 

ಜೈಲಲ್ಲಿ ದರ್ಶನ್‌ಗೆ ವಿಐಪಿ ಟ್ರೀಟ್‌ಮೆಂಟ್: ಮತ್ತೊಂದು ಫೋಟೋ ವೀಡಿಯೋ ವೈರಲ್

ದರ್ಶನ್‌ ಒಬ್ಬನ 'ಪೌರುಷ' ತೋರುವ ಏಕೈಕ ಕಾರಣಕ್ಕೆ ಶಿಕ್ಷೆ ಅನುಭವಿಸಿದ ಅಮಾಯಕರನ್ನು ಲೆಕ್ಕ ಹಾಕಿ ನೋಡಿ, ಈಗಾಗಲೇ ಕೇಸ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಪ್ರಮುಖ ಆರೋಪಿಗಳು. ಉಳಿದವರೆಲ್ಲಾ ದರ್ಶನ್‌ರನ್ನ ಬಚಾವ್‌ ಮಾಡೋಕೆ ಹೋಗಿ ಸಿಕ್ಕಿಹಾಕಿಕೊಂಡ ಅಮಾಯಕರೇ. ಈಗ 7 ಜನ ಜೈಲು ಸಿಬ್ಬಂದಿ ದರ್ಶನ್‌ಗೆ 'ಸುಖ' ನೀಡುವ ಕಾರಣಕ್ಕಾಗಿಯೇ ಅಮಾನತುಗೊಂಡಿದ್ದಾರೆ. ಇಷ್ಟು ಅಮಾಯಕರು ತನ್ನಿಂದ ಶಿಕ್ಷೆಗೆ ಒಳಗಾಗುವಂಥ ಪರಿಸ್ಥಿತಿ ಬಂತಲ್ಲ ಎನ್ನುವ ಕಿಂಚಿತ್‌ ಪಶ್ಚಾತ್ತಾಪ ಆತನಿಗೂ ಇದ್ದಂತಿಲ್ಲ, ಸರ್ಕಾರಕ್ಕೂ ಇದ್ದಂತಿಲ್ಲ. ಇದ್ದಿದ್ದರೆ, ಸುಖದ ವೈರಲ್‌ ಚಿತ್ರಗಳು ಬರ್ತಾ ಇರಲಿಲ್ಲ.

ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: 7 ಜನ ಸಿಬ್ಬಂದಿ ಅಮಾನತು

ಕೊನೆಗೆ ಒಂದು ಮಾತು.. ದರ್ಶನ್‌ಗೆ ಇಷ್ಟೆಲ್ಲ ಸುಖದ ಸೌಲಭ್ಯಗಳನ್ನು ಕೊಟ್ಟ ಸರ್ಕಾರಕ್ಕೆ, ಒಂದು ಮಂಚ ಕಳಿಸಿಕೊಡೋದು ಕಷ್ಟವಾಗ್ತಾ ಇರಲಿಲ್ಲ..

click me!