ಹಾಸಿಗೆ, ದಿಂಬು ಕೊಡ್ತಿಲ್ಲ, ಜಡ್ಜೇ ಜೈಲಿಗೆ ಬಂದು ನೋಡ್ಲಿ: ಪರಪ್ಪನ ಜೈಲಿನ ಅಧಿಕಾರಿಗಳ ವಿರುದ್ಧ ದರ್ಶನ್‌ ಸಮರ

Published : Oct 10, 2025, 12:51 AM IST
Darshan

ಸಾರಾಂಶ

ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಗೊಳ್ಳಲು ಶಿಫಾರಸು ಮಾಡುವಂತೆ ಕೋರಿದ್ದ ನಟ ದರ್ಶನ್‌, ಇದೀಗ ಕೋರ್ಟ್‌ ಆದೇಶ ಪಾಲಿಸದ ಬಗ್ಗೆ ನ್ಯಾಯಾಧೀಶರೇ ಜೈಲಿಗೆ ಬಂದು ಪರಿಶೀಲನೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು (ಅ.10): ನ್ಯಾಯಾಲಯದ ಆದೇಶಂತೆ ತನಗೆ ಜೈಲಿನಲ್ಲಿ ಹಾಸಿಗೆ, ಹೊದಿಕೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಗೊಳ್ಳಲು ಶಿಫಾರಸು ಮಾಡುವಂತೆ ಕೋರಿದ್ದ ನಟ ದರ್ಶನ್‌, ಇದೀಗ ಕೋರ್ಟ್‌ ಆದೇಶ ಪಾಲಿಸದ ಬಗ್ಗೆ ನ್ಯಾಯಾಧೀಶರೇ ಜೈಲಿಗೆ ಬಂದು ಪರಿಶೀಲನೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ತನಗೆ ಹಾಸಿಗೆ, ಹೊದಿಕೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಸಾರಿದ್ದ ಸಮರವನ್ನು ದರ್ಶನ್‌ ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದಾರೆ. ದರ್ಶನ್‌ ಸಲ್ಲಿಸಿದ್ದ ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿರುವ ನಗರದ ಹೆಚ್ಚುವರಿ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ವೇಳೆ ದರ್ಶನ್‌ ಪರ ವಕೀಲ ಸುನೀಲ್‌ ಕುಮಾರ್‌ ಹಾಜರಾಗಿ, ಅಪರಾಧ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಸೆಕ್ಷನ್‌ 310 ಅಡಿಯಲ್ಲಿ ಅರ್ಜಿ ಸಲ್ಲಿಸಿದರು. ನಂತರ ದರ್ಶನ್‌ ಪರ ವಾದ ಮಂಡಿಸಿದ ಅವರು ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಜೈಲು ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯಗಳನ್ನು ದರ್ಶನ್‌ಗೆ ಜೈಲು ಅಧಿಕಾರಿಗಳು ಕಲ್ಪಿಸುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ದರ್ಶನ್‌ಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ, ನ್ಯಾಯಾಧೀಶರೇ ಜೈಲಿಗೆ ಹೋಗಿ ತಮ್ಮ ಆದೇಶ ಪಾಲನೆಯಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಕೋರಿದರು.

ಈ ಅರ್ಜಿಗೆ ಆಕ್ಷೇಪಿಸಿದ ಜೈಲು ಅಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪಿ. ಪ್ರಸನ್ನ ಕುಮಾರ್‌, ದರ್ಶನ್‌ ಮನವಿಯಂತೆ ನ್ಯಾಯಾಧೀಶರೇ ಜೈಲಿಗೆ ಹೋಗಿ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 310 ಹೇಳುವುದೇ ಬೇರೆ. ದರ್ಶನ್‌ ವಿನಾ ಕಾರಣ ಪದೇ ಪದೇ ಇಂತಹ ನಿಷ್ಪ್ರಯೋಜಕ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಅರ್ಜಿ ವಜಾ ಮಾಡಬೇಕು ಎಂದು ಕೋರಿದರು.

ಅಲ್ಲದೆ, ಜೈಲಿನ ಕ್ವಾರಂಟೈನ್‌ ಸೆಲ್‌ನಲ್ಲಿ ಈವರೆಗೂ ಯಾರನ್ನು, ಎಷ್ಟು ದಿನ ಇಡಲಾಗಿದೆ ಎಂಬ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ದರ್ಶನ್‌ ಸಲ್ಲಿಸಿರುವ ಅರ್ಜಿಗೆ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಿದರು. ನ್ಯಾಯಾಲಯದ ಹೊರಡಿಸಿರುವ ಯಾವುದೇ ಆದೇಶ ಯಾವುದೇ ಉಲ್ಲಂಘನೆಯಾಗಿಲ್ಲ. ಯಾವ ಆದೇಶ ಉಲ್ಲಂಘನೆ ಆಗಿದೆ ಎಂದು ತಿಳಿಸಿದರೆ, ಆ ಕುರಿತ ದಾಖಲೆ ಸಲ್ಲಿಸಲು ಸಾಧ್ಯವಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಈ ವಾದ ಆಕ್ಷೇಪಿಸಿದ ದರ್ಶನ್‌ ಪರ ವಕೀಲರು, ಇತ್ತೀಚಿಗೆ ಗುಬ್ಬಚ್ಚಿ ಸೀನನಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ. ಈ ವಿಚಾರ ಉಲ್ಲೇಖಿಸಿ ದರ್ಶನ್‌ಗೂ ಸೌಲಭ್ಯ ನೀಡುವಂತೆ ಕೇಳುತ್ತಿಲ್ಲ. ಗುಬ್ಬಚ್ಚಿ ಸೀನನ ಸಹ ಆರೋಪಿಗಳು ಎಸ್‌ಪಿಪಿ ಅವರ ಪ್ರಸನ್ನಕುಮಾರ್ ಅವರ ಕಕ್ಷಿದಾರರು ಇದ್ದಾರೆ. ಈ ಬಗ್ಗೆ ನಾನು ಗಂಭೀರವಾಗಿ ಆರೋಪ ಮಾಡುತ್ತಿಲ್ಲ. ಈ ವಿಚಾರವನ್ನು ನ್ಯಾಯಾಲಯಕ್ಕೆ ತರಲಾಗುತ್ತಿದೆ ಅಷ್ಟೇ. ಜೈಲಿನ ಕ್ವಾರೆಂಟೈನ್‌ ಸೆಲ್‌ನಲ್ಲಿ ಯಾವ್ಯಾವ ಆರೋಪಿಯನ್ನು ಎಷ್ಟು ದಿನಗಳ ಕಾಲ ಇರಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ಕೋರಿ ವಕೀಲರೊಬ್ಬರು ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಜೈಲು ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.

ಅ.18ಕ್ಕೆ ವಿಚಾರಣೆ

ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ, ದರ್ಶನ್ ಸೇರಿದಂತೆ 7 ಆರೊಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು. ಆರೋಪಿಗಳಾದ ಎನ್‌.ರಾಘವೇಂದ್ರ, ವಿ.ಕಾರ್ತಿಕ್‌ ಮತ್ತು ಕೇಶವಮೂರ್ತಿ ವಿಚಾರಣೆಗೆ ಗೈರಾಗಿದ್ದರು. ಅವರ ಪರ ವಕೀಲರು ವಿಚಾರಣೆಯಿಂದ ಹಾಜರಾಗಲು ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು. ಜಾಮೀನು ಮೇಲಿರುವ ಉಳಿದ ಏಳು ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿ, ತಮ್ಮ ಹಾಜರಾತಿ ದಾಖಲಿಸಿದರು. ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಪೀಠವು ವಿಚಾರಣೆ ಅ.18ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಜೈಲಿನಲ್ಲಿರುವ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!