ದರ್ಶನ್‌ ಗ್ಯಾಂಗ್‌ ಬೇಲ್‌ ರದ್ದು ಮಾಡಿ: ಪೊಲೀಸರಿಂದ ಸುಪ್ರೀಂಕೋರ್ಟ್‌ಗೆ ಅಫಿಡವಿಟ್

Published : Aug 07, 2025, 06:02 AM ISTUpdated : Aug 08, 2025, 05:30 AM IST
Darshan Thoogudeepa Pavithra Gowda

ಸಾರಾಂಶ

ದರ್ಶನ್​ಗೆ ಈ ಹಿಂದೆ ಕೂಡ ಅಪರಾಧದ ಹಿನ್ನೆಲೆ ಇದೆ. ಬೆನ್ನು ನೋವಿನ ಕಾರಣ ನೀಡಿ, ಜಾಮೀನು ಪಡೆದಿರುವ ದರ್ಶನ್‌, ಬಳಿಕ, ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ವಾದದಲ್ಲಿ ತಿಳಿಸಿದ್ದಾರೆ.

ನವದೆಹಲಿ (ಆ.07): ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಮತ್ತು ಅವರ ಸಹಚರರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್‌ಗೆ ಬುಧವಾರ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳ ಸರಮಾಲೆಯನ್ನೇ ಮುಂದಿಟ್ಟಿದ್ದಾರೆ. ಇದೇ ವೇಳೆ, ದರ್ಶನ್‌ ಪರ ವಕೀಲರಿಂದಲೂ ಅಫಿಡವಿಟ್‌ ಸಲ್ಲಿಕೆಯಾಗಿದೆ.

ಸರ್ಕಾರದ ವಾದವೇನು?: ಹೈಕೋರ್ಟ್‌ನ ತೀರ್ಪು ತಾವು ಸಲ್ಲಿಸಿದ ದಾಖಲೆಗಳಿಗೆ ವಿರುದ್ಧವಾಗಿದೆ. ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಅಂದಿರೋದು ತಪ್ಪು. ಮೃತ ರೇಣುಕಾಸ್ವಾಮಿಯ ಮೈಮೇಲೆ ಗಂಭೀರ ಗಾಯಗಳಾಗಿವೆ. ಇನ್ನು, ಸಾಕ್ಷಿ ಹೇಳಿಕೆ ತಡವಾಗಿ ದಾಖಲಿಸಲಾಗಿದೆ ಅಂತ ಅನುಮಾನಿಸಿದ್ದು ಸರಿಯಲ್ಲ. ವಿಳಂಬಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿದೆ. ಸೂಕ್ತ ಎಫ್‌ಎಸ್‌ಎಲ್‌, ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ ಪುರಾವೆಗಳಿದ್ದರೂ ಅವನ್ನು ಪರಿಗಣಿಸಿಲ್ಲ. ದರ್ಶನ್​ಗೆ ಈ ಹಿಂದೆ ಕೂಡ ಅಪರಾಧದ ಹಿನ್ನೆಲೆ ಇದೆ. ಬೆನ್ನು ನೋವಿನ ಕಾರಣ ನೀಡಿ, ಜಾಮೀನು ಪಡೆದಿರುವ ದರ್ಶನ್‌, ಬಳಿಕ, ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ವಾದದಲ್ಲಿ ತಿಳಿಸಿದ್ದಾರೆ.

ರೇಣುಕಾಸ್ವಾಮಿಯನ್ನು ಅಪಹರಿಸಿ, ಶೆಡ್​​​ನಲ್ಲಿ ಕೊಲೆ ಮಾಡಲಾಗಿದೆ. ಆರೋಪಿಗಳು ಕೊಲೆ ನಡೆದ ಸ್ಥಳದಲ್ಲಿ ಇದ್ದಿದ್ದು, ಪವಿತ್ರಾ ಮತ್ತು ದರ್ಶನ್‌ ಕೊಲೆಯಲ್ಲಿ ಸಕ್ರೀಯವಾಗಿ ಭಾಗಿ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ. ಶೆಡ್​ಗೆ ರೇಣುಕಾಸ್ವಾಮಿ, ಆರೋಪಿಗಳು ಪ್ರವೇಶ ಮಾಡಿದ್ದನ್ನು ಐವರು ಸಾಕ್ಷಿಗಳು ನೋಡಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿನ ಮಣ್ಣಿನ ಮಾದರಿ, ದರ್ಶನ್, ರಾಘವೇಂದ್ರ, ನಂದೀಶ್ ಮತ್ತು ನಾಗರಾಜು ಅವರ ಪಾದರಕ್ಷೆಗಳಲ್ಲಿ ಸಿಕ್ಕ ಮಣ್ಣಿನ ಮಾದರಿ ಹೊಂದಾಣಿಕೆ ಆಗಿದೆ. ಡಿಎನ್‌ಎಯಲ್ಲೂ ಮೃತ ವ್ಯಕ್ತಿಯ ರಕ್ತದ ಕಲೆಗಳು ಕೆಲ ಆರೋಪಿಗಳ ಬಟ್ಟೆಗಳ ಮೇಲೆ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ದರ್ಶನ್ ಪರ ವಾದ: ಇದೇ ವೇಳೆ, ದರ್ಶನ್‌ ಪರ ವಕೀಲರು ಸಲ್ಲಿಸಿದ ಲಿಖಿತ ವಾದದಲ್ಲಿ, ದರ್ಶನ್ ಬಂಧನದ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅವರನ್ನು ಮೈಸೂರಿನಲ್ಲಿ ಬಂಧಿಸಿದ್ದು, ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಂಧನಕ್ಕೆ ಕಾರಣಗಳನ್ನು ನೀಡದಿರುವುದು ಕಾನೂನು ಉಲ್ಲಂಘನೆ. ಘಟನೆ ನಡೆದ 7 ದಿನಗಳ ನಂತರ ಸಾಕ್ಷಿ ಹೇಳಿಕೆ ದಾಖಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಾದಿಸಿದ್ದಾರೆ.

ಮಗಳನ್ನು ನೋಡ್ಕೋಬೇಕು, ಬೇಲ್‌ ರದ್ದು ಮಾಡಬೇಡಿ: ಇದೇ ವೇಳೆ, ಪವಿತ್ರಾ ಗೌಡ ಕೂಡ ಅಫಿಡವಿಟ್ ಸಲ್ಲಿಸಿದ್ದು, ‘ರೇಣುಕಾಸ್ವಾಮಿ, ನನಗೆ ಪದೇ, ಪದೇ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದ. ಆದರೆ, ನಾನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ನನಗೂ ಮತ್ತು ಉಳಿದ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ’ ಎಂದು ತಿಳಿಸಿದ್ದಾರೆ. ನಾನು ಸಿಂಗಲ್ ಪೇರೆಂಟ್‌ ಆಗಿದ್ದು, ನನಗೆ 10ನೇ ತರಗತಿಯಲ್ಲಿ ಓದುವ ಮಗಳಿದ್ದಾಳೆ. ಅವಳನ್ನು ನಾನು ನೋಡಿಕೊಳ್ಳಬೇಕು.

ಈ ವರ್ಷ ಆಕೆಗೆ ಬೋರ್ಡ್‌ ಪರೀಕ್ಷೆಗಳು ಇವೆ. ಜೊತೆಗೆ, ವಯಸ್ಸಾದ ತಂದೆ-ತಾಯಿಯನ್ನೂ ನೋಡಿಕೊಳ್ಳಬೇಕಿದೆ. ಹೀಗಾಗಿ ಜಾಮೀನು ರದ್ದು ಮಾಡಬೇಡಿ ಎಂದು ತಿಳಿಸಿದ್ದಾರೆ. ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ನನ್ನ ವಿರುದ್ಧ ಕ್ರಿಮಿನಲ್‌ ಕೇಸ್ ಕೂಡ ಇಲ್ಲ. ನಾನು ಫ್ಯಾಷನ್ ಡಿಸೈನರ್ ಆಗಿದ್ದು, ಜೀವನಕ್ಕಾಗಿ ಸ್ಟುಡಿಯೋ ನಡೆಸುತ್ತಿದ್ದೇನೆ. ನಾನು ಯಾವಾಗಲೂ ಕಾನೂನಿಗೆ ಬದ್ದನಾಗಿ ನಡೆದುಕೊಂಡಿದ್ದೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!