
ಬೆಂಗಳೂರು : ಹೈಕೋರ್ಟ್ ನಿರ್ದೇಶನ ಧಿಕ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸುಮಾರು 30 ಸಾವಿರ ಸಾರಿಗೆ ನೌಕರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಮಂಗಳವಾರ ಕೆಲಸಕ್ಕೆ ಗೈರಾಗಿದ್ದ ಸಾರಿಗೆ ನೌಕರರ ಒಂದು ದಿನದ ವೇತನ ಕಡಿತದ ಜತೆಗೆ, ಗೈರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ವೇತನ ಹೆಚ್ಚಳ ಹಿಂಬಾಕಿ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಸೋಮವಾರ ಹೈಕೋರ್ಟ್ ನೌಕರರಿಗೆ ಸೂಚಿಸಿತ್ತು. ಅದನ್ನು ನಿರ್ಲಕ್ಷಿಸಿದ್ದ ಜಂಟಿ ಕ್ರಿಯಾ ಸಮಿತಿ ನೀಡಿದ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ 1.14 ಲಕ್ಷ ನೌಕರರ ಪೈಕಿ 30 ಸಾವಿರಕ್ಕೂ ಹೆಚ್ಚಿನ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಆ ಹಿನ್ನೆಲೆಯಲ್ಲಿ ಗೈರಾಗಿದ್ದ ಎಲ್ಲ ನೌಕರರಿಗೂ ನೋಟಿಸ್ ನೀಡಿ, ಕರ್ತವ್ಯಕ್ಕೆ ಹಾಜರಾಗದಿರಲು ಕಾರಣ ತಿಳಿಸುವಂತೆ ಸೂಚಿಸಲಾಗಿದೆ.
ಮಾಹಿತಿ ನೀಡಲಾಗಿತ್ತು:
ಮುಷ್ಕರದ ಕುರಿತು ಜಂಟಿ ಕ್ರಿಯಾ ಸಮಿತಿ ನಿಗಮಗಳಿಗೆ ನೋಟಿಸ್ ನೀಡುವುದಕ್ಕೆ ಮೊದಲೇ ಎಸ್ಮಾ ಜಾರಿ ಮಾಡಿ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿತ್ತು. ಜತೆಗೆ ಮುಷ್ಕರ ಸಂಬಂಧ ಸೋಮವಾರ ಹೈಕೋರ್ಟ್ ನೀಡಿದ್ದ ಸೂಚನೆ ಬಗ್ಗೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ನೌಕರರಿಗೆ ಸಂದೇಶವನ್ನೂ ರವಾನಿಸಿದ್ದರು. ಇದರೊಂದಿಗೆ ಎಲ್ಲ ನೌಕರರ ರಜೆಯನ್ನೂ ರದ್ದು ಮಾಡಲಾಗಿತ್ತು. ಇಷ್ಟಾದರೂ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿ ಗೈರಾಗಿದ್ದರು.
ಪ್ರಯಾಣಿಕರ ಸಂಖ್ಯೆ ಇಳಿಕೆ, ಆದಾಯ 12 ಕೋಟಿ ರು. ಕುಸಿತ
ಮಂಗಳವಾರ ಮುಷ್ಕರದ ಹಿನ್ನೆಲೆಯಲ್ಲಿ ನಾಲ್ಕೂ ನಿಗಮಗಳ ದೈನಂದಿನ ಪ್ರಯಾಣಿಕರು ಮತ್ತು ಆದಾಯದಲ್ಲಿ 12 ಕೋಟಿ ರು.ನಷ್ಟು ಕುಸಿತವಾಗಿದೆ. ನಾಲ್ಕೂ ನಿಗಮಗಳ ಬಸ್‌ಗಳಿಂದ ಪ್ರತಿದಿನ ಸರಾಸರಿ 1.10 ಕೋಟಿ ಜನ ಪ್ರಯಾಣಿಸುತ್ತಿದ್ದು, 34 ಕೋಟಿ ರು. ಆದಾಯ ಬರುತ್ತಿದೆ. ಆದರೆ, ಮಂಗಳವಾರ ಮುಷ್ಕರದಿಂದಾಗಿ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳ ಬಸ್ ಸೇವೆಯಲ್ಲಿ ಭಾರೀ ವ್ಯತ್ಯಯವಾಗಿತ್ತು. ಅದರಿಂದಾಗಿ ಪ್ರಯಾಣಿಕರ ಸಂಖ್ಯೆ 70 ಲಕ್ಷಕ್ಕೆ ಇಳಿದಿದ್ದರೆ, ಆದಾಯ 20ರಿಂದ 22 ಕೋಟಿ ರು.ಗೆ ಕುಸಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ