
ಬೆಂಗಳೂರು (ಸೆ.13) : ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಬೆನ್ನಿಗೆ ನಿಂತ ರಾಜ್ಯ ಸರ್ಕಾರದ ಹಲವು ಸಚಿವರು, ಸುಧಾಕರ್ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಪಾಲುದಾರರಾದ ಸಚಿವ ಡಿ.ಸುಧಾಕರ್, ಶ್ರೀನಿವಾಸ್, ಭಾಗ್ಯಮ್ಮ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮುಗಿಬಿದ್ದಿದ್ದು, ಸುಧಾಕರ್ ರಾಜೀನಾಮೆಗೆ ಪಟ್ಟು ಹಿಡಿದಿವೆ. ಆದರೆ, ಸುಧಾಕರ್ ಅವರನ್ನು ಸಮರ್ಥಿಸಿಕೊಂಡಿರುವ ಸಚಿವರು, ಅವರ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ದಲಿತರ ಭೂಮಿ ಕಬಳಿಕೆ ವಿವಾದ; ಡಿ.ಸುಧಾಕರ್ ಸಮರ್ಥಿಸಿಕೊಂಡ ಡಿಕೆಶಿ!
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಸಚಿವ ಡಿ. ಸುಧಾಕರ್ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದ್ದು, ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸುಧಾಕರ್ ವಿರುದ್ಧ ಸಿವಿಲ್ ಪ್ರಕರಣ ದಾಖಲಾಗಿದೆ. ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅದೊಂದು ಸುಳ್ಳು ಪ್ರಕರಣ ಎಂದು ತಿಳಿದು ಬಂದಿದೆ. ಸುಧಾಕರ್ ಅವರು ಖರೀದಿ ಮಾಡಿದ್ದ ಜಮೀನನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ತೆರವು ಮಾಡಿ, ಜಾಗ ಭದ್ರ ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ ಅಷ್ಟೇ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಮಾತನಾಡಿ, ದುರುದ್ದೇಶದಿಂದ ಮಾಡಿರಬಹುದು. ಪೊಲೀಸರು ಎಫ್‌ಐಆರ್ ಹಾಕಿದ ಕೂಡಲೆ ಯಾರೂ ಅಪರಾಧಿಯಾಗಲ್ಲ. ದೂರಿನಲ್ಲಿ ಹುರುಳಿದ್ದರೆ ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸುತ್ತಾರೆ. ತಪ್ಪಿದ್ದರೆ ಶಿಕ್ಷೆಯಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಹಲ್ಲೆ, ಜಾತಿ ನಿಂದನೆ: ಸಚಿವ ಡಿ.ಸುಧಾಕರ್ ಸೇರಿ ಮೂವರ ವಿರುದ್ಧ ಕೇಸ್
ಸಚಿವ ಡಿ. ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತಂತೆ ಅವರನ್ನು ಕರೆದು ಮಾತನಾಡುತ್ತೇವೆ. ಅವರ ವಿರುದ್ಧ ಬಂದಿರುವ ಆರೋಪದ ಕುರಿತಂತೆ ಮಾಹಿತಿ ಪಡೆಯುತ್ತೇನೆ.
ಸಿದ್ದರಾಮಯ್ಯ ಮುಖ್ಯಮಂತ್ರಿ
ಸುಧಾಕರ್ ವಿರುದ್ಧ ಬ್ರಾಹ್ಮಣ ಮಹಾಸಭಾ ಆಕ್ರೋಶ
ಸಚಿವ ಡಿ. ಸುಧಾಕರ್ ಅವರು ಬ್ರಾಹ್ಮಣ ಸಮುದಾಯದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಡಿ. ಸುಧಾಕರ್ ಅವರು ಕೂಡಲೆ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ