ಖಾಸಗಿ ಸಾರಿಗೆ ಬೇಡಿಕೆ ಈಡೇರಿಸಲು ಬೇಕು ₹10000 ಕೋಟಿ !

Published : Sep 13, 2023, 06:40 AM IST
ಖಾಸಗಿ ಸಾರಿಗೆ ಬೇಡಿಕೆ ಈಡೇರಿಸಲು ಬೇಕು ₹10000 ಕೋಟಿ !

ಸಾರಾಂಶ

ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಬೆಂಗಳೂರು ಸಾರಿಗೆ ಬಂದ್‌ ನಡೆಸಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದರೆ 10 ಸಾವಿರ ಕೋಟಿ ರು.ಗೂ ಹೆಚ್ಚಿನ ಹೊರೆ ಬೀಳಲಿದೆ.

ಗಿರೀಶ್‌ ಗರಗ

ಬೆಂಗಳೂರು (ಸೆ.13) :  ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಬೆಂಗಳೂರು ಸಾರಿಗೆ ಬಂದ್‌ ನಡೆಸಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದರೆ 10 ಸಾವಿರ ಕೋಟಿ ರು.ಗೂ ಹೆಚ್ಚಿನ ಹೊರೆ ಬೀಳಲಿದೆ.

ರಾಜ್ಯ ಸರ್ಕಾರದ "ಶಕ್ತಿ" ಯೋಜನೆ ಜಾರಿ ನಂತರದಿಂದ ಖಾಸಗಿ ಬಸ್‌, ಆಟೋ ಮತ್ತು ಕ್ಯಾಬ್‌ಗಳಿಗೆ ಭಾರೀ ನಷ್ಟವುಂಟಾಗಿದೆ. ಅದರ ಜತೆಗೆ ಆ್ಯಪ್‌ ಆಧಾರಿತ ಟ್ಯಾಕ್ಸಿ, ಬೈಕ್‌ ಟ್ಯಾಕ್ಸಿಗಳಿಂದಾಗಿಯೂ ಸಮಸ್ಯೆಯುಂಟಾಗುತ್ತಿದೆ. ಅದನ್ನು ನಿವಾರಿಸಲು, ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಬೆಂಗಳೂರು ಸಾರಿಗೆ ಬಂದ್‌ ಮಾಡಲಾಗಿತ್ತು. ಆದರೆ, ಖಾಸಗಿ ಸಾರಿಗೆ ಉದ್ಯಮದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 10 ಸಾವಿರ ಕೋಟಿ ರು.ಗೂ ಹೆಚ್ಚಿನ ಹೊರೆ ಬೀಳಲಿದೆ ಎಂದು ಸಾರಿಗೆ ಇಲಾಖೆ ಅಂದಾಜಿದೆ.

ಮಾಸಿಕ ಸಹಾಯಧನಕ್ಕೆ 4,370 ಕೋಟಿ ರು

ಸಾರಿಗೆ ಇಲಾಖೆಯ ಸಾರಥಿ ದತ್ತಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ರು. ಸಹಾಯಧನ ನೀಡಬೇಕು ಎಂಬುದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪ್ರಮುಖ ಬೇಡಿಕೆಯಲ್ಲೊಂದಾಗಿದೆ. ಆದರೆ, ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಮಾಸಿಕ 364 ಕೋಟಿ ರು.ಗಳ ಅವಶ್ಯಕತೆ ಬೀಳಲಿದ್ದು, ವರ್ಷಕ್ಕೆ 4,370 ಕೋಟಿ ರು. ವ್ಯಯಿಸಬೇಕಿದೆ.

Bengaluru ಖಾಸಗಿ ವಾಹನಗಳ ಸಂಚಾರ ಬಂದ್‌ ಮಾಡಿದ್ದಕ್ಕೆ, ಬಿಎಂಟಿಸಿಗೆ 6 ಕೋಟಿ ರೂ. ಆದಾಯ ಬಂತು

ಶಕ್ತಿ ಯೋಜನೆಗೆ 2 ಸಾವಿರ ಕೋಟಿ ರು.ಗೂ ಹೆಚ್ಚು:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಾರಿಗೆ ತರಲಾಗಿರುವ "ಶಕ್ತಿ" ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಅನ್ವಯಿಸಬೇಕು ಹಾಗೂ ಸರ್ಕಾರಿ ಸಾರಿಗೆ ನಿಗಮಗಳಿಗೆ ನೀಡುತ್ತಿರುವಂತೆ ಮಹಿಳಾ ಪ್ರಯಾಣಿಕರ ಪ್ರಯಾಣ ಹಣವನ್ನು ಖಾಸಗಿ ಬಸ್‌ ಮಾಲೀಕರಿಗೂ ನೀಡಬೇಕು ಎಂದು ಆಗ್ರಹಿಸಲಾಗಿದೆ. ಸದ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ "ಶಕ್ತಿ" ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ 4,300 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದೇ ಖಾಸಗಿ ಬಸ್‌ಗಳಿಗೆ ಅನ್ವಯ ಮಾಡಬೇಕೆಂದರೆ ಅಂದಾಜು 2 ಸಾವಿರ ಕೋಟಿ ರು.ಗೂ ಹೆಚ್ಚಿನ ಹಣ ಬೇಕಾಗಲಿದೆ. ರಾಜ್ಯದಲ್ಲಿ 55 ಸಾವಿರಕ್ಕೂ ಹೆಚ್ಚಿನ ಖಾಸಗಿ ಬಸ್‌ಗಳಿವೆ. ಅವುಗಳಲ್ಲಿ ಪ್ರತಿನಿತ್ಯ 50 ಲಕ್ಷಕ್ಕೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದು, ಅದರಲ್ಲಿ ಶೇ. 50ರಷ್ಟು ಮಹಿಳಾ ಪ್ರಯಾಣಿಕರಾಗಿದ್ದಾರೆ. ಹೀಗೆ ನಿತ್ಯ 25 ಲಕ್ಷ ಮಹಿಳಾ ಪ್ರಯಾಣಿಕರ ಪ್ರಯಾಣದ ದರವನ್ನು ಪಾವತಿಸಲು ಸರ್ಕಾರ ವಾರ್ಷಿಕ ಅಂದಾಜು 2 ಸಾವಿರ ರು. ಹೆಚ್ಚುವರಿ ಖರ್ಚು ಮಾಡಬೇಕಿದೆ.

ಇತರ ಬೇಡಿಕೆಗಳಿಂದ ಆದಾಯ ಖೋತಾ:

ಜೀವಿತಾವಧಿ ತೆರಿಗೆಯನ್ನು ಒಮ್ಮೆಲೇ ಪಾವತಿಸುವ ವ್ಯವಸ್ಥೆಯಿಂದ ರಾಜ್ಯ ಸರ್ಕಾರ 3 ಸಾವಿರ ಕೋಟಿ ರು. ಆದಾಯ ಗಳಿಸುವ ನಿರೀಕ್ಷೆ ಹೊಂದಲಾಗಿದೆ. ಅದರ ಜತೆಗೆ 10ರಿಂದ 15 ಲಕ್ಷ ರು. ಬೆಲೆಯ ವಾಹನಗಳ ಬದಲಿಗೆ 15ರಿಂದ 20 ಲಕ್ಷ ರು. ಮೌಲ್ಯದ ವಾಹನಗಳಿಗೆ ಮಾತ್ರ ಶೇ. 9ರಷ್ಟು ಜೀವಿತಾವಧಿ ತೆರಿಗೆ ವಿಧಿಸುವುದು, ಖಾಸಗಿ ವಾಹನಗಳನ್ನು ಕಿಮೀ ಆಧಾರದಲ್ಲಿ ಬಾಡಿಗೆ ನಿಗದಿ ಮಾಡಿ ಸರ್ಕಾರವೇ ಬಾಡಿಗೆಗೆ ಪಡೆಯುವುದು, ಟೂರಿಸ್ಟ್‌ ಮತ್ತು ಕಾಂಟ್ರ್ಯಾಕ್ಟ್‌ ಕ್ಯಾರೇಜ್‌ ಬಸ್ಸುಗಳಿಗೆ ರಸ್ತೆ ತೆರಿಗೆ ಕಡಿತದಂತಹ ಕ್ರಮಗಳಿಂದ ಸರ್ಕಾರಕ್ಕೆ ಅಂದಾಜು 4 ಸಾವಿರ ಕೋಟಿ ರು.ಗೂ ಹೆಚ್ಚಿನ ಆದಾಯ ನಷ್ಟವಾಗುವ ಸಾಧ್ಯತೆಗಳಿವೆ. ಒಟ್ಟಾರೆ ಖಾಸಗಿ ಸಾರಿಗೆ ಉದ್ಯಮದ ಬೇಡಿಕೆಗಳು ರಾಜ್ಯ ಸರ್ಕಾರಕ್ಕೆ 10 ಸಾವಿರ ಕೋಟಿ ರು.ಗೂ ಹೆಚ್ಚಿನ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ 

ಪ್ರಾಂಕ್‌ ಕಾಲ್‌ ಮಾಡಿ ರ್ಯಾಪಿಡೋ ಚಾಲಕನನ್ನು ಕರೆಸಿ, ಥಳಿಸಲು ಮುಂದಾದ ಆಟೋ ಚಾಲಕರು

ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸರ್ಕಾರದ ಮುಂದಿಟ್ಟಿರುವ 30 ಬೇಡಿಕೆಗಳಲ್ಲಿ ಬಹುತೇಕವನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದಂತೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವ, ಈಡೇರಿಸಲು ಸಾಧ್ಯವೇ ಇಲ್ಲದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಈಗಾಗಲೆ ಒಕ್ಕೂಟಕ್ಕೆ ತಿಳಿಸಲಾಗಿದೆ. ಅವರು ಮುಂದಿಟ್ಟಿರುವ ಬೇಡಿಕೆಯಲ್ಲಿ ಮೂರ್ನಾಲ್ಕು ಬೇಡಿಕೆಗಳಿಂದ ಸರ್ಕಾರಕ್ಕೆ ಭಾರೀ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ.

। ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ: ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ
ಶಿಡ್ಲಘಟ್ಟ ಪೌರಾಯುಕ್ತೆಗೆ ರೌಡಿ ದರ್ಪ ತೋರಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದ ಸುವರ್ಣ ನ್ಯೂಸ್!