ಆತಂಕದ ನಡುವೆ ರಾಜ್ಯಕ್ಕೆ ಒಳ್ಳೆ ಸುದ್ದಿ : ಕಡಿಮೆ ಕೇಸ್ - ಗುಣಮುಖರ ಸಂಖ್ಯೆಯೂ ಏರಿಕೆ

By Kannadaprabha News  |  First Published Apr 27, 2021, 9:19 AM IST

ಮಹಾಮಾರಿಗೆ 201 ಮಂದಿ ಬಲಿಯಾಗಿದ್ದಾರೆ. ಒಂದೇ ಒಂದು ‘ಪಾಸಿಟಿವ್‌’ ಬೆಳವಣಿಗೆಯೆಂದರೆ, ಎರಡನೇ ಅಲೆ ಪ್ರಾರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಗುಣಮುಖರ ಸಂಖ್ಯೆ 10 ಸಾವಿರ  ದಾಟಿದೆ.
 


ಬೆಂಗಳೂರು (ಏ.27):  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ಮತ್ತೆ ಮೂವತ್ತು ಸಾವಿರ ಸಂಖ್ಯೆ (29,744 ಪ್ರಕರಣ) ಸಮೀಪಿಸಿದ್ದು, ಈ ಮಹಾಮಾರಿಗೆ 201 ಮಂದಿ ಬಲಿಯಾಗಿದ್ದಾರೆ. ಒಂದೇ ಒಂದು ‘ಪಾಸಿಟಿವ್‌’ ಬೆಳವಣಿಗೆಯೆಂದರೆ, ಎರಡನೇ ಅಲೆ ಪ್ರಾರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಗುಣಮುಖರ ಸಂಖ್ಯೆ 10 ಸಾವಿರ (10,663) ದಾಟಿದೆ.

ರಾಜ್ಯದಲ್ಲಿ ಏಪ್ರಿಲ್‌ 24 ರಂದು ದಾಖಲೆಯ 208 ಮಂದಿ ಕೋವಿಡ್‌ ಕಾರಣದಿಂದ ಮೃತರಾಗಿದ್ದರು. ಆ ಬಳಿಕದ ಸಾವಿನ ಗರಿಷ್ಠ ಸಂಖ್ಯೆ ಸೋಮವಾರ ದಾಖಲಾಗಿದೆ. ಮೃತರಲ್ಲಿ 42 ಮಂದಿ 50 ವರ್ಷದೊಳಗಿನವರಾಗಿದ್ದಾರೆ.

Tap to resize

Latest Videos

ಇದೇ ವೇಳೆ ಭಾನುವಾರ 34,804 ರಷ್ಟಿದ್ದ ಕೋವಿಡ್‌ನ ಹೊಸ ಪ್ರಕರಣದಲ್ಲಿ ತುಸು ಇಳಿಕೆ ದಾಖಲಾಗಿದೆ. ಸೋಮವಾರ ಕೊರೋನಾ ಪರೀಕ್ಷೆಗಳ ಸಂಖ್ಯೆ 1.66 ಲಕ್ಷಕ್ಕೆ ಕುಸಿದಿರುವುದು ಈ ಇಳಿಕೆ ಕಾರಣವಾಗಿದೆ. ಪಾಸಿಟಿವಿಟಿ ದರ ಶೇ. 17.87 ದಾಖಲಾಗಿದೆ.

ಲಸಿಕೆ ದರ ಇಳಿಕೆ ಮಾಡಿ: ಭಾರತ್‌ ಬಯೋಟೆಕ್‌, ಸೀರಂಗೆ ಕೇಂದ್ರ ಸೂಚನೆ!

ತುಸು ಸಮಾಧಾನದ ಸಂಗತಿಯೆಂದರೆ ಸೋಮವಾರ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಕೋವಿಡ್‌ ನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಈವರೆಗಿನ ಒಟ್ಟು 13.68 ಲಕ್ಷ ಸೋಂಕಿತರಲ್ಲಿ ಗುಣಮುಖರಾದವರ ಸಂಖ್ಯೆ 10.73 ಲಕ್ಷಕ್ಕೆ ಏರಿದೆ. ರಾಜ್ಯದಲ್ಲಿ ಸದ್ಯ 1,815 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2.8 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಲ್ಲೇ ಅಧಿಕ:  ಬೆಂಗಳೂರು ನಗರದಲ್ಲಿ ಒಟ್ಟು 105 ಮಂದಿ, ಬಳ್ಳಾರಿ 18 ಮತ್ತು ಹಾಸನದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.

 

ಮಂಡ್ಯದಲ್ಲಿ 9, ಕಲಬುರಗಿ 7, ರಾಮನಗರ, ಕೋಲಾರ, ಧಾರವಾಡದಲ್ಲಿ ತಲಾ 5, ಯಾದಗಿರಿ, ತುಮಕೂರು, ಹಾವೇರಿ ಮತ್ತು ಬೀದರ್‌ 4, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಉತ್ತರ ಕನ್ನಡ ತಲಾ 3, ಚಿಕ್ಕಮಗಳೂರು 2, ಬಾಗಲಕೋಟೆ, ರಾಯಚೂರು, ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ.

ಬೆಂಗಳೂರು, ಮೈಸೂರು, ತುಮಕೂರು ಸಹಸ್ರ:

ಬೆಂಗಳೂರು ನಗರದಲ್ಲಿ 16,545, ಮೈಸೂರು 1,563, ತುಮಕೂರು 1,197, ಮಂಡ್ಯ 929, ಕಲಬುರಗಿ 872, ಬಳ್ಳಾರಿ 786, ಹಾಸನ 747, ರಾಯಚೂರು 609, ಬೆಂಗಳೂರು ಗ್ರಾಮಾಂತರ 505 ಹೊಸ ಪ್ರಕರಣ ಪತ್ತೆಯಾಗಿದೆ.

ಒಂದೇ ದಿನ 1.37 ಲಕ್ಷ ಮಂದಿಗೆ ಲಸಿಕೆ

ಬೆಂಗಳೂರು: ಸೋಮವಾರ 344 ಲಸಿಕಾ ಕೇಂದ್ರದಲ್ಲಿ ಒಟ್ಟು 1.37 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಈ ಪೈಕಿ ಯಾರಿಗೂ ಗಂಭೀರ ಅಡ್ಡ ಪರಿಣಾಮವಾಗಿಲ್ಲ. ಈವರೆಗೆ ಒಟ್ಟು 88.27 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ.

44 ರಿಂದ 59 ವರ್ಷದೊಳಗಿನ 64 ಸಾವಿರ, ಹಿರಿಯ ನಾಗರಿಕರು 63,588, ಆರೋಗ್ಯ ಕಾರ್ಯಕರ್ತರು 3,400 ಮತ್ತು ಮುಂಚೂಣಿ ಕಾರ್ಯಕರ್ತರು 6,311 ಮಂದಿ ಕೋವಿಡ್‌ ಲಸಿಕೆ ಸ್ವೀಕರಿಸಿದ್ದಾರೆ.

click me!