ಕಮಲ್ ಪಂತ್ ಮೇಲೆ ಸಚಿವರ ಪ್ರಭಾವ ಸಾಧ್ಯತೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್| ಸರ್ಕಾರ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಆದರೆ, ಅಧಿಕಾರಿಗಳು ಶಾಶ್ವತ| ಅಧಿಕಾರಿಗಳು ಸರ್ಕಾರದ ಹರಕೆಯ ಕುರಿಯಾಗಬಾರದು. ಸರ್ಕಾರ ಹೇಳಿದವರಿಗೆ ನೋಟಿಸ್ ಕೊಟ್ಟು ಬೆದರಿಸುವ ಕೆಲಸ ಮಾಡಬಾರದು|
ಬೆಂಗಳೂರು(ಆ.22): ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ತನಿಖೆಯ ಮೇಲೆ ಸಚಿವರು ಪ್ರಭಾವ ಬೀರುತ್ತಿದ್ದಾರೆ. ಇಂತಹವರಿಗೆ ನೋಟಿಸ್ ಕೊಡಿ ಎಂದು ಪೊಲೀಸರಿಗೆ ಹೇಳಲು ಸಚಿವರಿಗೆ ಸಂವಿಧಾನದಲ್ಲಿ ಅಧಿಕಾರ ಇದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ನನಗೆ ಅರಿವಿದೆ. ಬೆಂಗಳೂರಿನ ಪೊಲೀಸ್ ಆಯುಕ್ತರು ಕ್ಲೀನ್ ರೆಕಾರ್ಡ್ ಹೊಂದಿದ್ದಾರೆ. ಅವರ ಪ್ರಾಮಾಣಿಕತೆ ನನಗೆ ಗೊತ್ತಿದೆ. ಆದರೆ ತನಿಖೆಯ ದಿಕ್ಕು ತಪ್ಪಿಸಲು ಸಚಿವರು ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದೇವೆಯೇ ಹೊರತು ಯಾರಿಗೂ ಬೆದರಿಕೆ ಹಾಕಿಲ್ಲ. ಸರ್ಕಾರವೇ ಅವರಿಗೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.
ಡಿಕೆಶಿ ಹೇಳಿಕೆ ಗಲಭೆಕೋರರ ರಕ್ಷಿಸುವ ತಂತ್ರ: ಗೃಹ ಸಚಿವ ಬೊಮ್ಮಾಯಿ
ಸರ್ಕಾರ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಆದರೆ, ಅಧಿಕಾರಿಗಳು ಶಾಶ್ವತ. ಅಧಿಕಾರಿಗಳು ಸರ್ಕಾರದ ಹರಕೆಯ ಕುರಿಯಾಗಬಾರದು. ಸರ್ಕಾರ ಹೇಳಿದವರಿಗೆ ನೋಟಿಸ್ ಕೊಟ್ಟು ಬೆದರಿಸುವ ಕೆಲಸ ಮಾಡಬಾರದು ಎಂದರು.
ಕೊರೋನಾ ಸಮಯದಲ್ಲಿ ಮಂತ್ರಿಗಳು, ಬಿಜೆಪಿ ಶಾಸಕರು, ಸಂಸದರು ಕೋಮು ಗಲಭೆಗೆ ಪ್ರೇರಣೆ ನೀಡುವ ಹೇಳಿಕೆ ನೀಡಿದ್ದರು. ಅದನ್ನು ತಡೆಯಲು ಮುಖ್ಯಮಂತ್ರಿಗಳು ಯಾವುದಾದರೂ ಕ್ರಮ ಕೈಗೊಂಡರಾ? ಈ ಗಲಭೆ ಬಗ್ಗೆ ಹೊರಗಿನ ಜನ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ನೀಡುತ್ತಿದ್ದೀರಿ. ಇದಕ್ಕೆ ಈ ಬೆಳವಣಿಗೆಗಳು ಅಡ್ಡಿಯಾಗುತ್ತವೆ. ಸಚಿವರು ಲಂಗು ಲಗಾಮು ಇಲ್ಲದೇ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ನಿಯಂತ್ರಿಸಬೇಕಲ್ಲವೇ ಎಂದು ಪ್ರಶ್ನಿಸಿದರು.