ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುವುದಕ್ಕೆ ಹೋಗುತ್ತೇನೆ. ನನ್ನ ಬಂಧನ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮ ಆಗಬೇಕು. ಈ ಬಗ್ಗೆ ಡಿಜಿಪಿ ಅವರಿಗೂ ದೂರು ಕೊಡುತ್ತೇನೆ ಎಂದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
ಬೆಂಗಳೂರು(ಡಿ.31): ಅಧಿವೇಶನ ಬಳಿಕ ತಮ್ಮನ್ನು ಇಡೀ ರಾತ್ರಿ ಪೊಲೀಸರು ಅಮಾನವೀಯವಾಗಿ ನಡೆಸಿ ಕೊಂಡಿದ್ದು, ತಮ್ಮ ಹಕ್ಕುಚ್ಯುತಿಯಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಸಚಿವೆ ಲಕ್ಷ್ಮೀ ಹೆಬ್ಬಾಳರ್ ವಿರುದ್ಧ ಆಪೇಕ್ಷಾರ್ಹ ಹೇಳಿಕೆ ಸಂಬಂಧ ನಡೆದ ಬೆಳವಣಿಗೆ ಕುರಿತು ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಪಕ್ಷದ ಮುಖಂಡರ ನಿಯೋಗದೊಂದಿಗೆ ಭೇಟಿ ಮಾಡಿ ಘಟನೆ ಕುರಿತು ವಿವರಣೆ ನೀಡಿದರು.
ಸಿ.ಟಿ. ರವಿ ಕೇಸ್: ಸರ್ಕಾರದ ನಡೆ ನೋಡಿ ಬಿಜೆಪಿ ಮುಂದಿನ ನಿರ್ಧಾರ, ರವಿಕುಮಾರ್
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರ ಜತೆಮಾತನಾಡಿದಸಿ.ಟಿ.ರವಿ,ಡಿ.19ರಂದು ಇಡೀ ರಾತ್ರಿ ನಡೆದ ಪೊಲೀಸರ ಅಮಾನ ವೀಯ ವರ್ತನೆ ತೋರಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಪೊಲೀಸ್ ವರಿಷ್ಠಾಧಿಕಾರಿ ಗುಳೇದ್ ಮತ್ತು ಇತರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು. ತಮಗೆ ಪ್ರಾಣಾಪಾಯ ಇದ್ದು, ಸೂಕ್ತ ಭದ್ರತೆ ಕೊಡಬೇಕು ಎಂಬುದಾಗಿ ಮನವಿ ಮಾಡಿದರು.
ಘಟನೆ ಕುರಿತು ರಾಷ್ಟ್ರಪತಿ, ಕೇಂದ್ರ ಗೃಹ ಇಲಾಖೆ ಗಮನಕ್ಕೂ ತರುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಆರೋಪ ಮಾಡಲಾಗಿದೆ. ನನ್ನ ವಿರುದ್ಧ ದೂರು ದಾಖಲಾದ ತಕ್ಷಣ ಬಂಧಿಸಲಾಯಿತು.
ಇಡೀ ರಾತ್ರಿ ಓಡಾಡಿಸಿ ನಿರ್ಜನ ಪ್ರದೇಶದಲ್ಲಿ ಎನ್‌ಕೌಂಟರ್ ಮಾಡಿ ಮುಗಿಸುವ ದುರುದ್ದೇಶವೂ ಸರ್ಕಾರಕ್ಕಿತ್ತು. ಆದರೆ, ಪೊಲೀಸ್ ವ್ಯಾನ್ ಗಳನ್ನು ಮಾಧ್ಯಮಗಳ ವಾಹನಗಳು ಹಿಂಬಾಲಿಸುತ್ತಿದ್ದ ಕಾರಣ ಅದು ಸಫಲ ವಾಗಲಿಲ್ಲ. ಸದನದ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸುವ ಅಧಿಕಾರ ಸಿಐಡಿಗೆ ಇಲ್ಲ. ಘಟನೆ ನಡೆದ ಸ್ಥಳ ಸಿಐಡಿ ವ್ಯಾಪ್ತಿಗೂ ಬರುವುದಿಲ್ಲ, ನನ್ನ ಬಂಧನ ಅಕ್ರಮ, ಕಾನೂನು ವಿರೋಧಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕಾಣದ ಕೈ ಸೂಚನೆಯಂತೆ ನಡೆಯುವ ಪೊಲೀಸರು; ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿರಲು ಸಾಧ್ಯವೇ?: ಸಿಟಿ ರವಿ ಪ್ರಶ್ನೆ
ಪರಿಷತ್ ಕಾರ್ಯದರ್ಶಿ ಭೇಟಿ:
ಇದಕ್ಕೂ ಮುನ್ನ ಮೊದಲು ವಿಧಾನಸೌಧಕ್ಕೆ ತೆರಳಿದೆ ಸಿ.ಟಿ.ರವಿ ಅವರು, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ಭೇಟಿಯಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಪ್ರಕರಣದ ಕುರಿತು ಚರ್ಚೆ ನಡೆಸಿದರು. ಬಳಿಕ ಮಾತನಾಡಿ, ಸದನದೊಳಗೆ ಘಟನೆ ನಡೆದಿರುವುದರಿಂದ ಪ್ರಕರಣ ಸಭಾಪತಿ ವ್ಯಾಪ್ತಿಗೆ ಬರುತ್ತದೆ. ಅನುಮತಿ ಇಲ್ಲದೆ ಮೊಕದ್ದಮೆ ದಾಖಲು ಮಾಡಿದ್ದು ತಪ್ಪು. ಈಗ ಎಫ್‌ಎಸ್‌ಎಲ್‌ಗೆ ವಿಡಿಯೋ ಕಳಿಸುವುದಾಗಿ ಹೇಳಲಾಗುತ್ತಿದೆ. ನನ್ನ ಮೇಲೆ ದಾಳಿ ನಡೆಸಿದವರ ವಿರುದ್ದ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುವುದಕ್ಕೆ ಹೋಗುತ್ತೇನೆ. ನನ್ನ ಬಂಧನ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮ ಆಗಬೇಕು. ಈ ಬಗ್ಗೆ ಡಿಜಿಪಿ ಅವರಿಗೂ ದೂರು ಕೊಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.