ರಾಜ್ಯದ 3000 ಸ್ಥಳದಲ್ಲಿ ಲಸಿಕೆ: ಕೇಂದ್ರಗಳ ಸಂಖ್ಯೆ 10 ಪಟ್ಟು ಹೆಚ್ಚಳ!

By Kannadaprabha NewsFirst Published Mar 7, 2021, 7:14 AM IST
Highlights

ನಾಳೆಯಿಂದ ರಾಜ್ಯದ 3000 ಸ್ಥಳದಲ್ಲಿ ಲಸಿಕೆ| ಲಸಿಕಾ ಕೇಂದ್ರಗಳ ಸಂಖ್ಯೆ 10 ಪಟ್ಟು ಹೆಚ್ಚಳ| ನಿತ್ಯ 1.5 ಲಕ್ಷ ಮಂದಿಗೆ ಲಸಿಕೆ ಗುರಿ: ಡಾ| ಸುಧಾಕರ್‌| ಜಿಲ್ಲಾ, ತಾಲೂಕು, ಸಮುದಾಯ ಕೇಂದ್ರಗಳಲ್ಲೂ ಲಸಿಕೆ| ಮಹಿಳಾ ದಿನ ನಿಮಿತ್ತ ಪಿಂಕ್‌ ಲಸಿಕೆ ಬೂತ್‌

ಬೆಂಗಳೂರು(ಮಾ.07): ರಾಜ್ಯದಲ್ಲಿ ಸೋಮವಾರ (ಮಾಚ್‌ರ್‍ 8)ದಿಂದ ಮೂರು ಸಾವಿರ ಲಸಿಕಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಪ್ರಕಟಿಸಿದ್ದಾರೆ.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಧಾಕರ್‌, ಮುಂದಿನ ದಿನಗಳಲ್ಲಿ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ನಾವು ಈ ಗುರಿ ತಲುಪಲು ಸಾಧ್ಯವಾದರೆ ಅರವತ್ತು ದಿನಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ ಎಂದು ತಿಳಿಸಿದರು. ಹಾಲಿ ಸುಮಾರು 300 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಹಳ್ಳಿಹಳ್ಳಿಗೂ ತಲುಪಲಿರುವ ಲಸಿಕೆ:

ಲಸಿಕೆ ಅಭಿಯಾನವನ್ನು ಎಲ್ಲ ಜಿಲ್ಲೆಗಳ ಪ್ರಾಥಮಿಕ, ನಗರ, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ, ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಿಗೆ ವಿಸ್ತರಿಸಿ ಆರೋಗ್ಯ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ.

ಪ್ರಾಥಮಿಕ, ನಗರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ, ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವಾರದ ಎಲ್ಲ ದಿನಗಳಲ್ಲಿ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ.

ಲಸಿಕಾ ಅಭಿಯಾನವು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಲಭ್ಯವಿರುವ ಸ್ಥಳಾವಕಾಶ ಮತ್ತು ಮಾನವ ಸಂಪನ್ಮೂಲವನ್ನು ಆಧರಿಸಿ ಫಲಾನುಭವಿಗಳ ಸಂಖ್ಯೆಯನ್ನು ನಿಗದಿ ಪಡಿಸಲಾಗುತ್ತದೆ.

ಮಾಚ್‌ರ್‍ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಒಂದೊಂದು ಪಿಂಕ್‌ ಬೂತ್‌ ತೆರೆಯುವಂತೆ ಸೂಚಿಸಲಾಗಿದೆ. ಈ ಪಿಂಕ್‌ ಬೂತ್‌ಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದು, ಮಹಿಳೆಯರಿಗೆ ಲಸಿಕೆ ನೀಡಲಿದ್ದಾರೆ.

click me!