ಮಾಸ್ಕ್‌ ಧರಿಸದೆ ಓಡಾಡುವವರಿಗೆ ಕೊರೋನಾ ಟೆಸ್ಟ್‌!

By Kannadaprabha NewsFirst Published Oct 7, 2020, 9:40 AM IST
Highlights

ನಿಯಮ ಉಲ್ಲಂಘಿಸುವವರಿಗೆ ದಂಡ ಪ್ರಯೋಗದ ಜತೆ ಸೋಂಕು ಪರೀಕ್ಷೆ| ಬುದ್ಧಿ ಕಲಿಸಲು ಮಾರ್ಷಲ್‌ಗಳ ಹೊಸ ಅಸ್ತ್ರ| ಮಂಗಳವಾರ 5.5 ಲಕ್ಷ ದಂಡ ವಸೂಲಿ| ಮಾಸ್ಕ್‌ ಧರಿಸದೆ ವಾಯು ವಿಹಾರಕ್ಕೆ ಬಂದ ಯುವಕನೋರ್ವನಿಗೆ ಮಾರ್ಷಲ್‌ಗಳು ದಂಡ ವಿಧಿಸಿದಾಗ ಆತ ಹಣ ಇಲ್ಲದೆ ಗಳಗಳನೆ ಅತ್ತ ಪ್ರಸಂಗ ನಡೆದಿದೆ| 

ಬೆಂಗಳೂರು(ಅ.07): ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುವವರನ್ನು ಬಿಬಿಎಂಪಿ ಮಾರ್ಷಲ್‌ಗಳು ಕರೆದುಕೊಂಡು ಹೋಗಿ ಕೊರೋನಾ ಸೋಂಕು ಪರೀಕ್ಷೆ ಮಾಡಿಸುತ್ತಿದ್ದಾರೆ.

ಮಾಸ್ಕ್‌ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಜನ ಕೇಳುತ್ತಿಲ್ಲ. ದಂಡ ಪ್ರಮಾಣ ಹೆಚ್ಚು ಮಾಡಿದಕ್ಕೆ ಮಾರ್ಷಲ್‌ಗಳೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದಾರೆ ಹೊರೆತು ನಿಯಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ, ಬಿಬಿಎಂಪಿ ಮಾರ್ಷಲ್‌ಗಳು ಮಾಸ್ಕ್‌ ಧರಿಸದೇ ಸಿಕ್ಕಿಬಿದ್ದವರಿಗೆ ದಂಡ ವಿಧಿಸುವುದರ ಜೊತೆಗೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಸೋಂಕು ಪರೀಕ್ಷೆ ಮಾಡಿಸಿ ಕಳುಹಿಸುತ್ತಿದ್ದಾರೆ.

ಅದರಲ್ಲೂ ಇದೀಗ ನಗರದಲ್ಲಿ ಕೊರೋನಾ ಸೋಂಕು ಪರೀಕ್ಷೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಿದೆ. ಸೋಂಕು ಪರೀಕ್ಷಾ ತಂಡಗಳಿಗೆ ಗುರಿ ನೀಡಲಾಗಿದೆ. ಗುರಿ ಸಾಧನೆ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಖಡಕ್‌ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ.

ಮಾಸ್ಕ್‌ ಧರಿಸದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗ್ತಿದೆ?

ಅಧಿಕೃತವಲ್ಲ:

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಮಾಸ್ಕ್‌ ಧರಿಸದೇ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಕ್ಕೆ ಮಾತ್ರ ನಿರ್ದೇಶನ ನೀಡಲಾಗಿದೆ. ಆದರೆ, ಅವರನ್ನು ಕರೆದುಕೊಂಡು ಹೋಗಿ ಸೋಂಕು ಪರೀಕ್ಷೆ ಸೂಚಿಸಿಲ್ಲ. ಈ ಕುರಿತು ಯಾವುದೇ ಅಧಿಕೃತ ಆದೇಶ ಸಹ ಮಾಡಿಲ್ಲ. ವಲಯ ಮಟ್ಟದ ಅಧಿಕಾರಿಗಳು ಜನರಿಗೆ ಎಚ್ಚರಿಕೆ, ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿರಬಹುದು ಎಂದು ತಿಳಿಸಿದರು.

ದಂಡಕ್ಕೆ ಎದರಿ ಗಳಗಳನೆ ಅತ್ತ ಯುವಕ

ಮಾಸ್ಕ್‌ ಧರಿಸದೆ ವಾಯು ವಿಹಾರಕ್ಕೆ ಬಂದ ಯುವಕನೋರ್ವನಿಗೆ ಮಾರ್ಷಲ್‌ಗಳು ದಂಡ ವಿಧಿಸಿದಾಗ ಆತ ಹಣ ಇಲ್ಲದೆ ಗಳಗಳನೆ ಅತ್ತ ಪ್ರಸಂಗ ನಡೆದಿದೆ. ಮಂಗಳವಾರ ಬೆಳಗ್ಗೆ ಹಲಸೂರು ಕೆರೆ ಬಳಿ ವಾಯು ವಿಹಾರಕ್ಕೆ ಬಂದ ಯುವಕ ಮಾಸ್ಕ್‌ ಧರಿಸಿರಲಿಲ್ಲ. ಮಾಸ್ಕ್‌ ಹಾಕದ್ದಕ್ಕೆ ದಂಡ ಕಟ್ಟಿ ಎಂದಾಗ ಯುವಕ ಗಳಗಳನೆ ಅತ್ತಿದ್ದಾನೆ. ಯುವಕನ ವರ್ತನೆ ನೋಡಿ ಮಾರ್ಷಲ್‌ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಮಾರ್ಷಲ್‌ಗಳನ್ನು ನೋಡ್ತಿದ್ದಂತೆ ಮಾಸ್ಕ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಮಾಸ್ಕ್‌ ಹಾಕಿಲ್ಲ, ದಂಡ ಕಟ್ಟಿಅನ್ನುತ್ತಿದ್ದಂತೆ ಕಣ್ಣೀರು ಸುರಿಸಿ, ದುಡ್ಡಿಲ್ಲ. ಸಣ್ಣ ಬ್ಯುಸಿನೆಸ್‌ ಮಾಡುತ್ತಾ ಬದುಕುತ್ತಿದ್ದೇನೆ. ದಂಡ ಕಟ್ಟುವಷ್ಟುಹಣ ಇಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಅನಂತರ ಆತನನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.

ಮಂಗಳವಾರ 5.5 ಲಕ್ಷ ದಂಡ ವಸೂಲಿ

ಬಿಬಿಎಂಪಿಒ ಮಾರ್ಷಲ್‌ಗಳು ಮಂಗಳವಾರ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ 550 ಮಂದಿಗೆ ತಲಾ 1 ಸಾವಿರ ರು. ನಂತೆ 5,50,000 ರು. ದಂಡ ವಿಧಿಸಿದ್ದಾರೆ. ಈ ಪೈಕಿ ಮಾಸ್ಕ್‌ ಧರಿಸದ 520 ಮಂದಿಯಿಂದ 5,20,000 ರು. ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ 30 ಮಂದಿಯಿಂದ 30,000 ರು. ದಂಡ ವಸೂಲಿ ಮಾಡಲಾಗಿದೆ.
 

click me!