ಕರ್ನಾಟಕದಲ್ಲಿ ಕೊರೋನಾ: ಕಳೆದ 17 ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣ

By Kannadaprabha News  |  First Published Nov 2, 2021, 12:34 AM IST

* ಸೋಮವಾರ ಕೋವಿಡ್‌ಗೆ ಕೇವಲ 2 ಬಲಿ
* ಕೊರೋನಾ 2ನೇ ಅಲೆಯಲ್ಲೇ ಕನಿಷ್ಠ
* 188 ಮಂದಿಗೆ ಸೋಂಕು, 17 ತಿಂಗಳ ಕನಿಷ್ಠ


ಬೆಂಗಳೂರು (ನ. 02): ರಾಜ್ಯದಲ್ಲಿ ಕೋವಿಡ್‌-19 (Covid-19) ದೈನಂದಿನ ಪ್ರಕರಣಗಳಲ್ಲಿ ಭಾರಿ ಇಳಿಕೆ ದಾಖಲಾಗಿದೆ. ಸೋಮವಾರ 188 ಪ್ರಕರಣ ವರದಿಯಾಗಿದ್ದು ಇದು ಕಳೆದ ಹದಿನೇಳು ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣವಾಗಿದೆ. ಇದೇ ವೇಳೆ ಇಬ್ಬರು ಮೃತರಾಗಿದ್ದು  ಕೊರೋನಾ ಎರಡನೇ ಅಲೆ (Corona second wave) ಪ್ರಾರಂಭಗೊಂಡ ಬಳಿಕ ಒಂದು ದಿನದಲ್ಲಿ ವರದಿಯಾದ ಕನಿಷ್ಠ ಸಾವು ಇದಾಗಿದೆ.

2020ರ ಜೂನ್‌ 14 ರಂದು 176 ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಹೆಚ್ಚು ಕಡಿಮೆ ಒಂದೂವರೆ ವರ್ಷದ ಅವಧಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 200ಕ್ಕಿಂತ ಕೆಳಗೆ ಇಳಿದಿರಲಿಲ್ಲ. ಜೂನ್‌ ತಿಂಗಳ ಕೊನೆಗೆ ಮೊದಲ ಅಲೆ ಸೃಷ್ಟಿಯಾಗಿ ಅಕ್ಟೋಬರ್‌ ಹೊತ್ತಿಗೆ ಇಳಿಕೆ ಪ್ರವೃತ್ತಿ ಕಂಡುಬಂದಿತ್ತು. 2021ರ ಜನವರಿ, ಫೆಬ್ರವರಿ ಹೊತ್ತಿನಲ್ಲಿ ಕೋವಿಡ್‌ ಶಾಂತವಾಗಿದ್ದರೂ 300ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗುತ್ತಿತ್ತು.

Tap to resize

Latest Videos

undefined

ಯುಎಸ್‌ಎ ಮತ್ತು ಯುರೋಪ್‌ನಲ್ಲಿ ಕೊರೋನಾ ಏಕಾಏಕಿ ಏರಿಕೆ, ಭಾರತಕ್ಕೂ ಆತಂಕ

ಮಾರ್ಚ್‌ನಲ್ಲಿ ಎರಡನೇ ಅಲೆ ಸೃಷ್ಟಿಯಾಗಿ ಏಪ್ರಿಲ್‌, ಮೇ ಹೊತ್ತಿಗೆ ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಯಾಗಿತ್ತು. ದೈನಂದಿನ ಪ್ರಕರಣಗಳು 40 ಸಾವಿರ, 50 ಸಾವಿರ ತಲುಪಿದ್ದು ಒಂದೆಡೆಯಾದರೆ ಪ್ರತಿದಿನ 400-500 ಮಂದಿ ಕೋವಿಡ್‌ನಿಂದ ಸಾವನ್ನಪ್ಪುತ್ತಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷ ಮೀರಿತ್ತು. ಆದರೆ ಜೂನ್‌ ಬಳಿಕ ಸೋಂಕಿತರ ಸಂಖ್ಯೆ ಇಳಿಕೆ ಹಾದಿಯಲ್ಲಿ ಸಾಗಿದ್ದು ಸೋಂಕು ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡ ಬಳಿಕದ ಕನಿಷ್ಠ ಪ್ರಕರಣ ದಾಖಲಾಗಿದೆ.

ಇದೇ ವೇಳೆ ಮೈಸೂರಿನಲ್ಲಿ ಇಬ್ಬರು ಮೃತರಾಗಿದ್ದು ರಾಜ್ಯದ ಉಳಿದೆಡೆ ಕೋವಿಡ್‌ನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. 2021ರ ಮಾಚ್‌ರ್‍ 21ರಂದು ಸಹ ಇಬ್ಬರು ಮೃತರಾಗಿದ್ದರು.

ಸೋಮವಾರ ಒಟ್ಟು 73,924 ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ. 0.25ರ ಪಾಸಿಟಿವಿಟಿ ದಾಖಲಾಗಿದೆ. 318 ಮಂದಿ ಚೇತರಿಸಿಕೊಂಡಿದ್ದಾರೆ.

ಲಸಿಕೆ ಅಭಿಯಾನ: ರಾಜ್ಯದಲ್ಲಿ ಸೋಮವಾರ 98,115 ಮಂದಿ ಕೋವಿಡ್‌-19ರ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ ಒಟ್ಟು 6.54 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. 4.25 ಕೋಟಿ ಮೊದಲ ಡೋಸ್‌ ಮತ್ತು 2.29 ಕೋಟಿ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 95, ಮೈಸೂರು 16, ದಕ್ಷಿಣ ಕನ್ನಡ 12, ಹಾಸನ 11, ಕೊಡಗು ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಬೀದರ್‌, ಚಾಮರಾಜನಗರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಹೊಸ ಪ್ರಕರಣ ವರದಿಯಾಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 29.88 ಲಕ್ಷ ಕೋವಿಡ್‌ ಪ್ರಕರಣ ಪತ್ತೆಯಾಗಿದ್ದು 29.41 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 8,512 ಸಕ್ರಿಯ ಪ್ರಕರಣಗಳಿವೆ. 38,084 ಮಂದಿ ಮರಣವನ್ನಪ್ಪಿದ್ದಾರೆ. 29 ಮಂದಿ ಕೋವಿಡ್‌ ಸೋಂಕಿತರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಒಟ್ಟು 5.09 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

ಭಾರತದಲ್ಲಿ ಕಡಿಮೆ ಪ್ರಕರಣಗಳು
ಭಾರತದಲ್ಲಿ ಕಳೆದ 126 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು, ಹೊಸ ಸೋಂಕು ಮತ್ತು ಸಾವು ಎರಡೂ ನಿಯಂತ್ರಣದಲ್ಲಿದೆ ಎಂದು ಕಂಡುಬರುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಅ.28ರಂದು ಬಿಡುಗಡೆ ಮಾಡಿದ ತನ್ನ ವಾರದ ಕೋವಿಡ್‌ ವರದಿಯಲ್ಲಿ, ‘ವಿಶ್ವದ ಎಲ್ಲಾ ದೇಶಗಳು ಇನ್ನೂ ಎರಡೂ ಲಸಿಕೆ ಪಡೆದವರೂ ಸೇರಿದಂತೆ ಎಲ್ಲರಿಗೂ ಹೊಸ ಕೊರೋನಾ ತಳಿಗಳು ಬಾಧಿಸುವ ಅಪಾಯ ಎದುರಿಸುತ್ತಿವೆ’ ಎಂದು ಎಚ್ಚರಿಕೆ ನೀಡಿದೆ. ಇದು ಭಾರತಕ್ಕೂ ಆತಂಕ ಮೂಡಿಸುವ ವಿಚಾರವಾಗಿದೆ.

click me!