* ವೈಕುಂಠ ಏಕಾದಶಿ ನಗರದ ಕೆಲ ದೇಗುಲಗಳಿಗೆ ಭಕ್ತರ ನಿಷೇಧ
* ಹಲವು ದೇವಾಲಯಗಳಲ್ಲಿ ಕೊರೋನಾ ನಿಯಮದನ್ವಯ ದರ್ಶನಕ್ಕೆ ಅವಕಾಶ
* ಕೊರೋನಾ ನಿಯಮ ಕಟ್ಟುನಿಟ್ಟಿನ ಜಾರಿ
ಬೆಂಗಳೂರು(ಜ. 12) ಕೊರೋನಾ(Coronavirus) ಹಿನ್ನೆಲೆಯಲ್ಲಿ ಜ.13ರಂದು ನಡೆಯಲಿರುವ ವೈಕುಂಠ ಏಕಾದಶಿ (Vaikuntha Ekadashi) ದಿನದಂದು ನಗರದ (Bengaluru)
ಬಹುತೇಕ ದೇವಾಲಯಗಳಿಗೆ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿದ್ದು, ಕೆಲವು ದೇವಾಲಯಗಳಲ್ಲಿ ಕೊರೋನಾ ನಿಯಮಗಳ ಅನ್ವಯ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಕೋಟೆ ವೆಂಕಟರಮಣ ದೇವಾಯ, ಜೆ.ಪಿ. ನಗರದ ದೇವಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅಲಂಕಾರ ಮತ್ತು ನೈವೇದ್ಯ ಮಾತ್ರ ಮಾಡಲಾಗುವುದು. ದೇವಾಲಯದ ಸಿಬ್ಬಂದಿ ಎಂದಿನಂತೆ ಸ್ವಾಮಿಗೆ ಅಭಿಷೇಕ, ಪೂಜೆ, ಅಲಂಕಾರ, ದ್ವಾರ ನಿರ್ಮಾಣಗಳನ್ನು ಮಾಡುತ್ತಾರೆ, ಆದರೆ, ಭಕ್ತರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಎಂದು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮಾಹಿತಿ ನೀಡಿದ್ದಾರೆ.
Shivakumar Swamiji Death Anniversary ಸಿದ್ಧಗಂಗೆಯಲ್ಲಿ ನಡೆಯಬೇಕಿದ್ದ ದಾಸೋಹ ದಿನ ರದ್ದು
ಸಣ್ಣ ಪುಟ್ಟದೇವಾಲಯಗಳಲ್ಲಿ ಕೊರೋನಾ ನಿಯಮಗಳ ಅನ್ವಯ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೇವಲ 10 ಮಂದಿಯಂತೆ ಸರತಿ ಸಾಲಿನಲ್ಲಿ ದೇವಾಲಯದ ಪ್ರವೆಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಖಿಲ ಕರ್ನಾಟಕ ಹಿಂದೂ ದೆವಾಯಲಗಳ ಅರ್ಚಕರು ಮತ್ತು ಆಗಮಿಕರ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷವೂ ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಹಾಗೂ ಸರಳವಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗಿತ್ತು. ಅದೇ ರೀತಿ ಈ ಬಾರಿಯೂ ಕೊರೋನಾ ಅಲೆಯಿಂದಾಗಿ ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ.
ಇಸ್ಕಾನ್, ಟಿಟಿಡಿಯಲ್ಲಿಆನ್‌ಲೈನ್ ದರ್ಶನ
ನಗರದ ಇಸ್ಕಾನ್ ಮತ್ತು ತಿರುಪತಿ ತಿರುಮಲ ದೇವಾಲಯದಿಂದ ಆನ್‌ಲೈನ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಟಿಟಿಡಿ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಅರಕಲಗೂಡು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೊಣನೂರು ಕೋಟೆ ವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಈ ವರ್ಷವೂ ಸಹ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವೆಂಕಟರಮಣಸ್ವಾಮಿ ದೇವಾಲಯ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಪ್ರತೀ ವರ್ಷದಂತೆ ಈ ವರ್ಷ ಸಪ್ತದ್ವಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ವಾಮಿಯವರ ದರ್ಶನಕ್ಕೆ ಅವಕಾಶವಿದ್ದು, ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನ ಪಡೆಯಬಹುದು, ಭಕ್ತರು ಸಹಕರಿಸಬೇಕೆಂದು ಕೋರಿದರು. ವೈಕುಂಠ ಏಕಾದಶಿ ಅಂಗವಾಗಿ ದೇವಾಲಯದಲ್ಲಿ ಗುರುವಾರ ಬೆಳಗಿನಿಂದಲೇ ಪಂಚಾಮೃತ ಅಭಿಷೇಕ, ವಿಷ್ಣು ಹೋಮ, ಮಹಾಮಂಗಳಾರತಿ, ಸಾಯಂಕಾಲ ಗಣಪತಿ ಹಾಗೂ ಪದ್ಮಾವತಿಗೆ ಬೆಣ್ಣೆ ಒಣ ದ್ರಾಕ್ಷಿ, ಬಾದಾಮಿ, ಚೆರ್ರಿ ಹಣ್ಣು ಹಾಗೂ ವೆಂಕಟರಮಣ ಸ್ವಾಮಿಗೆ ಬೆಣ್ಣೆ ಅಲಂಕಾರಗಳು ಮುಂತಾದ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದರು.
ಸಂಪೂರ್ಣ ಲಾಕ್‌ಡೌನ್ ಬಗ್ಗೆ ಚರ್ಚೆಯಾಗಿಲ್ಲ. ಪರಿಸ್ಥಿತಿ ಕೈಮೀರಿ ಹೋದಾಗ ಆ ಬಗ್ಗೆ ಚರ್ಚಿಸಲಾಗುತ್ತದೆ. ಸದ್ಯದ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರೆಯುತ್ತದೆ. ನಿರ್ಬಂಧಗಳ ಸೂಕ್ತ ಜಾರಿ ಸೇರಿದಂತೆ ಪರೀಕ್ಷೆ ಹೆಚ್ಚಳ, ಸೋಂಕಿತರ ಚಿಕಿತ್ಸೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇನ್ನೊಂದು ಕಡೆ ತಿಳಿಸಿದ್ದಾರೆ.