ಖಾಸಗಿ ಆಸ್ಪತ್ರೆಗಳಿಗೆ 22 ಕೋಟಿ ರು.ಕೋವಿಡ್‌ ಹಣ

By Kannadaprabha NewsFirst Published Aug 30, 2020, 8:26 AM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ನಿಟ್ಟಿನಲ್ಲಿ ಇದುವರೆಗೂ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ 22 ಕೋಟಿ ರು. ಹಣ ಬಿಡುಗಡೆ ಮಾಡಿದೆ. 

ವರದಿ : ಲಿಂಗರಾಜು ಕೋರಾ

 ಬೆಂಗಳೂರು(ಆ.3): ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಶಿಫಾರಸಿನ ಮೇಲೆ ದಾಖಲಾದ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಸರ್ಕಾರ ಇದುವರೆಗೂ (ಆ.28) ಖಾಸಗಿ ಆಸ್ಪತ್ರೆಗಳಿಗೆ 22 ಕೋಟಿ ರು. ಚಿಕಿತ್ಸಾ ಹಣ ಬಿಡುಗಡೆ ಮಾಡಿದೆ.

ಸರ್ಕಾರ ಶಿಫಾರಸು ಮಾಡಿದ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಿರುವ ಸಂಬಂಧ ಅಗತ್ಯ ದಾಖಲೆಗಳ ಸಹಿತ ಮಾಹಿತಿ ಸಲ್ಲಿಸುತ್ತಿರುವ ಆಸ್ಪತ್ರೆಗಳಿಗೆ ಸರ್ಕಾರದ ನೋಡಲ್‌ ಏಜೆನ್ಸಿಯಾದ ಸವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಸ್ಯಾಟ್‌) ಪರಿಶೀಲನೆ ನಡೆಸಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಆ.1ರಿಂದ 25ರವರೆಗೆ ಸಲ್ಲಿಸಿರುವ ರೋಗಿಗಳ ಮಾಹಿತಿ ಆಧಾರದ ಮೇಲೆ ಇದುವರೆಗೆ ಒಟ್ಟು 22.62 ಕೋಟಿ ರು. ಚಿಕಿತ್ಸಾ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಮರು ಪಾವತಿ ಮಾಡಲಾಗಿದೆ ಎಂದು ಸ್ಯಾಟ್‌ ಕಾರ್ಯನಿರ್ವಾಹಕ ನಿರ್ದೇಶಕಿ ಎನ್‌.ಟಿ.ಅಬ್ರೂ ಮಾಹಿತಿ ನೀಡಿದ್ದಾರೆ.

ಗಾಲಿ ಜನಾರ್ಧನ ರೆಡ್ಡಿಗೂ ವಕ್ಕರಿಸಿದ ಕೊರೋನಾ: ಆಸ್ಪತ್ರೆಗೆ ದಾಖಲು..

‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಸರ್ಕಾರದ ಶಿಫಾರಸಿನ ಮೇರೆಗೆ ಈವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 42,291 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ಗುಣಮುಖರಾದ ಬಳಿಕ ಪ್ರತಿ ರೋಗಿಯ ಚಿಕಿತ್ಸಾ ವೆಚ್ಚವನ್ನು ದಾಖಲೆ ಸಹಿತ ಆಸ್ಪತ್ರೆಗಳು ಮಾಹಿತಿ ಸಲ್ಲಿಸಬೇಕು. ನಂತರ ದಾಖಲೆ ಪರಿಶೀಲಿಸಿ ಹಣ ಮರುಪಾವತಿಸಲಾಗುತ್ತದೆ. ಇದುವರೆಗೆ ಶಿಫಾರಸು ಮಾಡಿದ ರೋಗಿಗಳ ಚಿಕಿತ್ಸಾ ವೆಚ್ಚವಾಗಿ ಸುಮಾರು 169.55 ಕೋಟಿ ರು. ಬಿಡುಗಡೆ ಮಾಡಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದು ಆಸ್ಪತ್ರೆಗಳು ಸಲ್ಲಿಸುವ ದಾಖಲೆಗಳ ಆಧಾರದಲ್ಲಿ ಹೆಚ್ಚು ಕಡಿಮೆ ಆಗಲಿದೆ. ಇದುವರೆಗೆ (ಆ.1ರಿಂದ 28) ಖಾಸಗಿ ಆಸ್ಪತ್ರೆಗಳು 14,789 ರೋಗಿಗಳ ಚಿಕಿತ್ಸಾ ಮಾಹಿತಿಯನ್ನು ಮಾತ್ರ ಸ್ಯಾಟ್‌ಗೆ ಸಲ್ಲಿಸಿವೆ. ಇದರಲ್ಲಿ ಈಗಾಗಲೇ ಸುಮಾರು 7 ಸಾವಿರ ರೋಗಿಗಳ ಚಿಕಿತ್ಸಾ ವೆಚ್ಚವಾಗಿ 22.62 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಸೋಂಕಿತೆಗೆ ಯಶಸ್ವಿ ಮಿದುಳು ಶಸ್ತ್ರಚಿಕಿತ್ಸೆ...

ಖಾಸಗಿ ಆಸ್ಪತ್ರೆಗಳಿಗೆ ಹಣ ಬಿಡುಗಡೆಯಲ್ಲಿ ಯಾವುದೇ ರೀತಿಯ ವಿಳಂಬ ಮಾಡುತ್ತಿಲ್ಲ. ಸಲ್ಲಿಸಿರುವ ಮಾಹಿತಿಗಳ ಪರಿಶೀಲನೆ ಹಾಗೂ ಟ್ರಸ್ಟ್‌ನ ನಿಯಮಾವಳಿಯಂತೆ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಇದಕ್ಕೆ ಕನಿಷ್ಠ ನಾಲ್ಕೈದು ದಿನಗಳು ಅಗತ್ಯವಿದೆ. ಉಳಿದ ಏಳು ಸಾವಿರಕ್ಕೂ ಹೆಚ್ಚು ರೋಗಿಗಳ ಮಾಹಿತಿ ಪರಿಶೀಲನಾ ಕೆಲಸ ನಡೆಯುತ್ತಿದೆ. ಈ ಮಧ್ಯೆ, ಪೂರ್ಣ ಮಾಹಿತಿ ನೀಡದ ಆಸ್ಪತ್ರೆಗಳಿಗೆ ಹೆಚ್ಚಿನ ಮಾಹಿತಿ ಕೇಳಲಾಗಿದೆ. ಮಾಹಿತಿ ನೀಡಿದ ಬಳಿಕ ಅವರಿಗೆ ಹಣ ಬಿಡುಗಡೆಯಾಗಲಿದೆ ಎಂದು ಅಬ್ರೂ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಮಾಹಿತಿ ಸಲ್ಲಿಸಿದ ದಿನವೇ ಚಿಕಿತ್ಸಾ ವೆಚ್ಚ ಬಿಡುಗಡೆ ಸಾಧ್ಯವಿಲ್ಲ. ಸರ್ಕಾರದ ಸೂಚನೆ ಹಾಗೂ ಟ್ರಸ್ಟ್‌ನ ನಿಯಮಾವಳಿಯಂತೆ ದಾಖಲೆಗಳನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಕೆಲ ಆಸ್ಪತ್ರೆಗಳು ಅರೆಬರೆ ಮಾಹಿತಿ ಸಲ್ಲಿಸಿರುವುದೂ ಉಂಟು, ಅಂತಹವರಿಗೆ ಪೂರ್ಣ ಮಾಹಿತಿ ನೀಡಲು ಸೂಚಿಸಲಾಗಿದೆ.

- ಎನ್‌.ಟಿ.ಅಬ್ರೂ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕಿ

ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಡುಗಡೆ ಮಾಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಕೋವಿಡ್‌ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸಂಕಷ್ಟದಲ್ಲಿವೆ. ಸಲ್ಲಿಸುವ ದಾಖಲೆ ಅಥವಾ ಮಾಹಿತಿಯಲ್ಲಿ ಸಣ್ಣಪುಟ್ಟಸಮಸ್ಯೆಗಳಿದ್ದರೆ ಹಣ ತಡೆಹಿಡಿಯದೆ, ನಂತರ ಸ್ಪಷ್ಟನೆ ಪಡೆದುಕೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ.

- ಡಾ. ಆರ್‌. ರವೀಂದ್ರ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಅಸೋಸಿಯೇಷನ್‌ (ಫಾನಾ) ಅಧ್ಯಕ್ಷ

click me!