
ಬೆಂಗಳೂರು (ಸೆ.24): ಉದ್ಯಮಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಆರೋಪದಲ್ಲಿ ಜೈಲು ಸೇರಿರುವ ಕುಂದಾಪುರದ ಚೈತ್ರಾ ಹೆಸರಿನ ಜತೆಗೆ ‘ಕುಂದಾಪುರ’ ಉಲ್ಲೇಖಿಸಿ ಸುದ್ದಿ ಪ್ರಸಾರ, ಅಭಿಪ್ರಾಯ ವ್ಯಕ್ತಪಡಿಸುವುದನ್ನು, ಚರ್ಚೆ ನಡೆಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ 22ನೇ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಆರೋಪಿಯನ್ನು ಹೆಸರಿಸುವಾಗ ‘ಕುಂದಾಪುರ’ ಎಂದು ಮಾಧ್ಯಮಗಳಲ್ಲಿ ಉಲ್ಲೇಖಿಸುತ್ತಿರುವುದರಿಂದ ತಾಲೂಕಿನ ಹೆಸರಿಗೆ ಧಕ್ಕೆ ಆಗುತ್ತಿದೆ. ಕುಂದಾಪುರದ ನಿವಾಸಿಗಳಿಗೆ ಅವಮಾನವಾಗುತ್ತಿದೆ. ಈ ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಹೀಗಾಗಿ ಮಾಧ್ಯಮಗಳು ಕುಂದಾಪುರ ಎಂದು ಉಲ್ಲೇಖಿಸಿರುವ ಸುದ್ದಿ, ವಿಡಿಯೋ, ಲೇಖನ, ಪೋಸ್ಟ್, ಲಿಂಕ್ ಅನ್ನು ಶಾಶ್ವತವಾಗಿ ತೆಗೆದು ಹಾಕುವಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಬೇಕು.
ಅದೇ ರೀತಿ ಚೈತ್ರಾ ಅವರನ್ನು ಉಲ್ಲೇಖಿಸುವಾಗ ಕುಂದಾಪುರ ಎಂದು ಬಳಸದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಬಸವನಗುಡಿಯಲ್ಲಿ ಕಾಫಿ ಶಾಪ್ ನಡೆಸುತ್ತಿರುವ ಮೂಲತಃ ಕುಂದಾಪುರದ ಗಣೇಶ್ ಶೆಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಮುಂದಿನ ವಿಚಾರಣೆವರೆಗೆ ಕುಂದಾಪುರದ ಹೆಸರನ್ನು ಬಳಸಿಕೊಂಡು ಚೈತ್ರಾ ಅವರ ಬಗ್ಗೆ ಯಾವುದೇ ಸುದ್ದಿಯ ಪ್ರಸಾರ, ಪ್ರಕಟ, ಚರ್ಚೆ ನಡೆಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸಮನ್ಸ್ ಜಾರಿಗೊಳಿಸಿದೆ.
ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್: ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆಂದು 5 ಲಕ್ಷ ವಂಚನೆ
ಚೈತ್ರಾ ಕೇಸಲ್ಲಿ ಈವರೆಗೆ ₹2.76 ಕೋಟಿ ಜಪ್ತಿ: ಬಿಜೆಪಿ ಟಿಕೆಟ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳಿಂದ 2.76 ಕೋಟಿ ರು ಹಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ವಂಚನೆ ಪ್ರಕರಣ ಕುರಿತು ಸಮಗ್ರ ತನಿಖೆ ನಡೆದಿದೆ ಎಂದರು. ಇದುವರೆಗೆ ಚೈತ್ರಾ ಕುಂದಾಪುರ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಚೈತ್ರಾ ಬಳಿ 2 ಕೋಟಿ ರು., ಹಾಲಶ್ರೀ ಅವರಿಂದ 56 ಲಕ್ಷ ರು. ಹಾಗೂ ಮತ್ತೊಬ್ಬ ಆರೋಪಿಯಿಂದ 20 ಲಕ್ಷ ರು. ಹಣ ಜಪ್ತಿಯಾಗಿದೆ. ತನಿಖೆ ಮುಂದುವರೆದಿದ್ದು, ಮತ್ತಷ್ಟು ಮಾಹಿತಿ ಹೊರಬರಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ