India gate: ಬಿಜೆಪಿ-ಜೆಡಿಎಸ್ ಮೈತ್ರಿಗೆ ಕ್ಷಣಗಣನೆ!

Published : Jul 16, 2023, 07:43 AM ISTUpdated : Jul 16, 2023, 11:36 AM IST
India gate: ಬಿಜೆಪಿ-ಜೆಡಿಎಸ್ ಮೈತ್ರಿಗೆ ಕ್ಷಣಗಣನೆ!

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ತಮ್ಮ ಪಕ್ಷದ ಉಳಿವಿಗಾಗಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ರಾಜಕೀಯವಾಗಿ ವೈರತ್ವ ಇರುವ ಕಾರಣ ಬಿಜೆಪಿಯೊಂದಿಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇಂಡಿಯಾ ಗೇಟ್‌ 

ವಿಧಾನಮಂಡಲ ಅಧಿವೇಶನ ಮುಗಿಯುತ್ತಾ ಬಂದರೂ ಬಿಜೆಪಿಯ ದೆಹಲಿ ವರಿಷ್ಠರು ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೇ ಇರುವುದಕ್ಕೆ ಜೆಡಿಎಸ್‌ ಜೊತೆಗಿನ ಮೈತ್ರಿ ಸಾಧ್ಯತೆಗಳು ಕಾರಣ ಎಂದು ಹೇಳಲಾಗಿದೆ. ಮೈತ್ರಿ ಬಗ್ಗೆ ಬಿಜೆಪಿ ವರಿಷ್ಠ ಅಮಿತ್‌ ಶಾ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ನಡುವೆ ಮಾತುಕತೆ ನಡೆಯುತ್ತಿದೆ. ಮೈತ್ರಿಯಾದರೆ ವಿಪಕ್ಷ ನಾಯಕನ ಆಯ್ಕೆ ಹಾಗೂ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರ ಆಯ್ಕೆಯ ಸಮೀಕರಣದ ಮೇಲೂ ಅದು ಪರಿಣಾಮ ಬೀರುತ್ತದೆ. ಹೀಗಾಗಿ ಜು.18ರ ಎನ್‌ಡಿಎ ಸಭೆ ಬಳಿಕವೇ ವಿಪಕ್ಷ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ದೆಹಲಿ ಮೂಲಗಳು ಹೇಳುತ್ತಿವೆ.

ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್‌ ತನ್ನ ನೆಲೆ ಕಂಡುಕೊಳ್ಳಲು ಇದೀಗ ರಾಜಕೀಯ ಸೈದ್ಧಾಂತಿಕ ವಿರೋಧಿಯಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಜತೆ ಕೈ ಜೋಡಿಸುವ ಬಗ್ಗೆ ಗಂಭೀರವಾಗಿ ಚಿಂತನೆ ಚಿಂತನೆ ನಡೆಸಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

India Gate: ರಾಜ್ಯ ಬಿಜೆಪಿಯೊಳಗೆ ನಿಜಕ್ಕೂ ಏನಾಗುತ್ತಿದೆ?, ಪ್ರಶಾಂತ್‌ ನಾತು

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯು ಇದಕ್ಕೆ ಪುಷ್ಟಿನೀಡಿದ್ದು, ಎನ್‌ಡಿಎ ಮೈತ್ರಿಯ ಸುಳಿವು ನೀಡಿದ್ದಾರೆ. ‘ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯಾಗಬೇಕು ಎಂಬುದು ಒಂದು ವರ್ಗದ ಜನರ ಭಾವನೆಯಾಗಿದೆ. ಆದರೆ, ಅದು ಇನ್ನೂ ಭಾವನೆ ಹಂತದಲ್ಲಿಯೇ ಇದೆ. ಅದಕ್ಕೆ ಯಾವುದೇ ರೀತಿಯಲ್ಲೂ ಚಾಲನೆ ಸಿಕ್ಕಿಲ್ಲ. ನಾವು ಯಾವುದೇ ರೀತಿಯಲ್ಲಿಯೂ ಸ್ಪಂದಿಸಿಲ್ಲ. ಬಿಜೆಪಿಯ ಯಾರನ್ನೂ ಸಹ ಭೇಟಿಯಾಗಿಲ್ಲ. ಅಂತಹ ಸಂದರ್ಭ ಬಂದರೆ ಜನತೆಗೆ ತಿಳಿಸಿಯೇ ಭೇಟಿ ಮಾಡುತ್ತೇವೆ’ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ?:

ಮೂಲಗಳ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು, ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಕಣಕ್ಕಿಳಿಯುವ ಯೋಚನೆಯನ್ನು ದಳಪತಿಗಳು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದ ಕಾರ್ಯಗಳು ನಡೆದಿವೆ ಎಂದು ಹೇಳಲಾಗಿದೆ.

ಮೈತ್ರಿಗೆ ಕಾರಣ ಏನು?:

ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ತಮ್ಮ ಪಕ್ಷದ ಉಳಿವಿಗಾಗಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ರಾಜಕೀಯವಾಗಿ ವೈರತ್ವ ಇರುವ ಕಾರಣ ಬಿಜೆಪಿಯೊಂದಿಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ, ಯುಪಿಎ ಮೈತ್ರಿಕೂಟದ ಪಕ್ಷಗಳು ಪ್ರತ್ಯೇಕವಾಗಿ ಸಭೆ ನಡೆಸಲು ಮುಂದಾಗಿದೆ. ಇದಲ್ಲದೇ, ತೃತೀಯ ರಂಗ ಪಕ್ಷಗಳು ಒಗ್ಗೂಡಿ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಚರ್ಚೆಗಳು ನಡೆಯುತ್ತಿವೆ. ತೃತೀಯ ರಂಗದ ಸಭೆ ಜೆಡಿಎಸ್‌ಗೆ ಆಹ್ವಾನ ನೀಡಿಲ್ಲ. ಹೀಗಾಗಿ ಜೆಡಿಎಸ್‌ ತಟಸ್ಥವಾಗಿದ್ದು, ಪಕ್ಷದ ಮುಂದಿನ ಭವಿಷ್ಯವನ್ನು ಗಮನಿಸಿ ಕುಮಾರಸ್ವಾಮಿ ಎನ್‌ಡಿಎ ಜತೆ ಕೈಜೋಡಿಸುವುದಕ್ಕೆ ಹೆಚ್ಚಿನ ಒಲವು ಹೊಂದಿದ್ದಾರೆ. ಇದೇ 18ರಂದು ದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಭೆ ಇದೆ. ಸಭೆಯಲ್ಲಿ ಜೆಡಿಎಸ್‌ ಪಕ್ಷವು ಮೈತ್ರಿಕೂಟದ ಭಾಗವನ್ನಾಗಿಸಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ. ಸಭೆಯ ಬಳಿಕ ದೆಹಲಿಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಮೂಲಗಳು ಹೇಳಿವೆ.

ಸಿಗುತ್ತಾ ಸಮ್ಮತಿ?:

ಜೆಡಿಎಸ್‌ ಜಾತ್ಯತೀತ ನಿಲುವು ಹೊಂದಿದ್ದು, ಇದೀಗ ಕೋಮುವಾದಿ ಎಂದೇ ಬಿಂಬಿಸಿಕೊಂಡಿರುವ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗುತ್ತಿರುವುದು ಪಕ್ಷದಲ್ಲಿಯೇ ಒಮ್ಮತ ಮೂಡಲಿದೆಯೇ ಎಂಬ ಪ್ರಶ್ನೆಯೂ ಸಹ ಉದ್ಭವವಾಗಿದೆ. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ಇನ್ನೂ ಸ್ಪಷ್ಟವಾದ ತೀರ್ಮಾನ ಕೈಗೊಂಡಿಲ್ಲ. ಎನ್‌ಡಿಎ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಬಳಿಕ ಕುಮಾರಸ್ವಾಮಿ ಒಮ್ಮೆ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ದೆಹಲಿ ನಾಯಕರ ಮುಂದೆ ತಮ್ಮ ಬೇಡಿಕೆಯನ್ನು ಮುಂದಿಡಲಿದ್ದಾರೆ. ಎರಡು ಪಕ್ಷಗಳು ಬೇಡಿಕೆಗಳಿಗೆ ಸಹಮತ ವ್ಯಕ್ತಪಡಿಸಿದರೆ ಕುಮಾರಸ್ವಾಮಿ, ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಪಕ್ಷದ ಒಳಿತನ್ನು ಗಮನದಲ್ಲಿಟ್ಟುಕೊಂಡು ಮನವೊಲಿಕೆ ಮಾಡುವ ಸಾಧ್ಯತೆ ಇದೆ. ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಚುನಾವಣೆಯಲ್ಲಿ ಸೋಲಾಗಿರುವುದರಿಂದ ಪಕ್ಷವನ್ನು ಸದೃಢಗೊಳಿಸಲು ಮತ್ತು ಹಳೇ ಮೈಸೂರು ಭಾಗದಲ್ಲಿ ಮತ್ತೊಮ್ಮೆ ಪಕ್ಷವನ್ನು ಗಟ್ಟಿಗೊಳಿಸಲು ಎನ್‌ಡಿಎ ಮೈತ್ರಿ ಸಹಕಾರಿಯಾಗಲಿದೆ ಎಂಬುದು ಕುಮಾರಸ್ವಾಮಿ ಅಭಿಪ್ರಾಯವಾಗಿದೆ ಎನ್ನಲಾಗಿದೆ.

ಇಂಡಿಯಾ ಗೇಟ್ ಇನ್ನಷ್ಟು ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯಾಗಬೇಕು ಎಂಬುದು ಒಂದು ವರ್ಗದ ಜನರ ಭಾವನೆಯಾಗಿದೆ. ಆದರೆ, ಅದು ಇನ್ನೂ ಭಾವನೆ ಹಂತದಲ್ಲಿಯೇ ಇದೆ. ಅದಕ್ಕೆ ಯಾವುದೇ ರೀತಿಯಲ್ಲೂ ಚಾಲನೆ ಸಿಕ್ಕಿಲ್ಲ.

- ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಬಕಾರಿ ಭ್ರಷ್ಟಾಚಾರ: ಲೋಕಾಯುಕ್ತದಿಂದ ಜೈಲು ಸೇರಿರುವ ಅಧಿಕಾರಿಗಳ ಬ್ಯಾಂಕ್ ಖಾತೆ ಪರಿಶೀಲನೆ, ಹೆಚ್ಚು ನಗದು ಹಣ ಪಡೆದಿರೋ ಶಂಕೆ
Karnataka News Live: BBK 12 Grand Finale - ಬಿಗ್‌ಬಾಸ್ ಕನ್ನಡ 12 ಕಿರೀಟ ಯಾರ ಪಾಲು? ಟಾಪ್ 3ರಲ್ಲಿ ಅಚ್ಚರಿ ಅಭ್ಯರ್ಥಿ?