India Gate: ರಾಜ್ಯ ಬಿಜೆಪಿಯೊಳಗೆ ನಿಜಕ್ಕೂ ಏನಾಗುತ್ತಿದೆ?, ಪ್ರಶಾಂತ್ ನಾತು
ಯಾವುದೋ ಒಂದು ಪಾರ್ಟಿ ಗೆದ್ದಾಗ ನಾಯಕತ್ವದ ಪ್ರಶ್ನೆಯನ್ನು ನಿರ್ಧರಿಸುವುದು ಸ್ವಲ್ಪ ಸುಲಭ. ಅಧಿಕಾರ ಇರುವ ಕಾರಣಕ್ಕಾದರೂ ನಾಯಕರನ್ನು ಸುಮ್ಮನೆ ಕೂರಿಸಬಹುದು. ಆದರೆ ಒಂದು ಹೀನಾಯ ಸೋಲಿನ ನಂತರ ಯಾರಿಗೆ ನಾಯಕತ್ವವನ್ನು ಕೊಡಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವೂ ಅಲ್ಲ ಸರಳವೂ ಇಲ್ಲ ಎನ್ನುವುದು ಕರ್ನಾಟಕದ ಬಿಜೆಪಿಗೆ ನಿಧಾನವಾಗಿ ಅರ್ಥ ಆಗುತ್ತಿದೆ.
ಬೆಂಗಳೂರು(ಜು.02): 2004ರಲ್ಲಿ ಅನಂತಕುಮಾರ್ ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ 79 ಸೀಟು ಬಂದಾಗ ಯಡಿಯೂರಪ್ಪನವರನ್ನು ವಿರೋಧ ಪಕ್ಷದ ನಾಯಕ ಎಂದು ಘೋಷಿಸಲು ಒಂದೂವರೆ ತಿಂಗಳು ಬೇಕಾಯಿತು. ಯಡಿಯೂರಪ್ಪ, ಅನಂತಕುಮಾರ್ ಎಂದು ಬಣ ತಿಕ್ಕಾಟ ಶುರುವಾಗಿದ್ದೇ ಅಲ್ಲಿಂದ. ಈಗ ಮರಳಿ ರಾಜ್ಯ ಬಿಜೆಪಿ ಅದೇ ಕವಲು ಒಡೆದ ದಾರಿಯಲ್ಲಿ ಬಂದು ನಿಂತಿದೆ.
ಯಾವುದೋ ಒಂದು ಪಾರ್ಟಿ ಗೆದ್ದಾಗ ನಾಯಕತ್ವದ ಪ್ರಶ್ನೆಯನ್ನು ನಿರ್ಧರಿಸುವುದು ಸ್ವಲ್ಪ ಸುಲಭ. ಅಧಿಕಾರ ಇರುವ ಕಾರಣಕ್ಕಾದರೂ ನಾಯಕರನ್ನು ಸುಮ್ಮನೆ ಕೂರಿಸಬಹುದು. ಆದರೆ ಒಂದು ಹೀನಾಯ ಸೋಲಿನ ನಂತರ ಯಾರಿಗೆ ನಾಯಕತ್ವವನ್ನು ಕೊಡಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವೂ ಅಲ್ಲ ಸರಳವೂ ಇಲ್ಲ ಎನ್ನುವುದು ಕರ್ನಾಟಕದ ಬಿಜೆಪಿಗೆ ನಿಧಾನವಾಗಿ ಅರ್ಥ ಆಗುತ್ತಿದೆ. ಏಕೆಂದರೆ ಯಾರಿಗೆ ನೇತೃತ್ವ ಕೊಟ್ಟರೂ ಇನ್ನೊಬ್ಬರು ಬೇಸರ ನುಂಗಿಕೊಂಡು ಸುಮ್ಮನಿರುತ್ತಾರೆ ಎಂಬ ಗ್ಯಾರಂಟಿ ಇಲ್ಲಿಯವರಿಗೂ, ಇಲ್ಲ ದಿಲ್ಲಿಯವರಿಗಂತೂ ಇಲ್ಲವೇ ಇಲ್ಲ. ಹೀಗಾಗಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಯತ್ನಾಳ, ಪ್ರತಾಪ ಸಿಂಹ, ಎ.ಎಸ್.ಪಾಟೀಲ್ ನಡಹಳ್ಳಿ ಅವರನ್ನು ಕರೆಸಿ ಮಾತಾಡಿ ರಮಿಸಿ ಕಳಿಸಿದ್ದಾರೆ. ‘ಸ್ವಲ್ಪ ಮಾತಾಡೋದು ಕಡಿಮೆ ಮಾಡಿ. ಭಾಳ ಮುಜುಗರ ಆಗುತ್ತಿದೆ. ಜುಲೈ 2ರಂದು ರಾಜ್ಯ ಬಿಜೆಪಿ ಪ್ರಭಾರಿ ಅರುಣ ಸಿಂಗ್ ಬರುತ್ತಾರೆ. ಆಗ ವಿರೋಧ ಪಕ್ಷದ ನಾಯಕನ ಹೆಸರು ಘೋಷಣೆ ಮಾಡುತ್ತಾರೆ. ನೀವು ಮಾತಾಡೋದು ಬಿಡಿ’ ಎಂದು ತಿಳಿಸಿ ಹೇಳಿದ್ದಾರೆ. ಈಗಿನ ಪರಿಸ್ಥಿತಿಯ ಪ್ರಕಾರ ಬೊಮ್ಮಾಯಿ ಅವರನ್ನೇ ವಿರೋಧ ಪಕ್ಷದ ನಾಯಕ ಮಾಡಿ ಎಂದು ಒಂದು ಬಣದವರು ದಿಲ್ಲಿ ನಾಯಕರಿಗೆ ಹೇಳಿದ್ದಾರಂತೆ. ಆದರೆ, ಆರ್‌ಎಸ್‌ಎಸ್‌ನ ಕೆಲ ನಾಯಕರು,‘ಕಾರ್ಯಕರ್ತರನ್ನು ಹುರಿದುಂಬಿಸಬೇಕಿದ್ದರೆ ಯತ್ನಾಳರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ’ ಎಂದು ದಿಲ್ಲಿಯವರಿಗೆ ಹೇಳಿದ್ದಾರಂತೆ. ಯತ್ನಾಳರನ್ನು ಮಾಡಿದರೆ ಯಡಿಯೂರಪ್ಪ, ನಿರಾಣಿ, ಬೊಮ್ಮಾಯಿ ಬೇಸರಗೊಳ್ಳುತ್ತಾರೆ. ಹಾಗೆಂದು ಬೊಮ್ಮಯಿ ಅವರನ್ನು ಮಾಡಿದರೆ ಬಿಜೆಪಿಯಲ್ಲಿರುವ ಸಂಘಪರಿವಾರದ ಹಿನ್ನೆಲೆಯವರು ಬೇಸರಗೊಂಡರೆ ಏನು ಮಾಡುವುದು ಎಂಬ ಚಿಂತೆ ದಿಲ್ಲಿ ಬಿಜೆಪಿ ನಾಯಕರಿಗೆ ಜಾಸ್ತಿ ಇದೆ. ಅತ್ತ ದರಿ ಇತ್ತ ಪುಲಿ ಅಂದರೆ ಇದೇ ಸ್ಥಿತಿ ನೋಡಿ.
ತೆಲಂಗಾಣದಲ್ಲಿ ಡಿಕೆ ‘ಶಿವ’ ತಾಂಡವ; ಕೈಗೊಂಬೆಯಾದ್ರು ಖರ್ಗೆ: ತಮಿಳ್ನಾಡು ರಾಜಕೀಯಕ್ಕೆ ಧುಮುಕಲು ದಳಪತಿ ರೆಡಿ
ಇಂದು ಏನಾಗಬಹುದು?
ಶನಿವಾರ ಸಂಜೆಯವರೆಗೂ ವಿರೋಧ ಪಕ್ಷದ ನಾಯಕ ಯಾರು ಎಂಬ ಬಗ್ಗೆ ದಿಲ್ಲಿ ನಾಯಕರು ಗುಟ್ಟು ಬಿಟ್ಟುಕೊಟ್ಟಿಲ್ಲ. ಧರ್ಮೇಂದ್ರ ಪ್ರಧಾನ್ ಕರ್ನಾಟಕದ ಎಲ್ಲಾ ನಾಯಕರೊಂದಿಗೆ ಮಾತನಾಡಿ ಅಭಿಪ್ರಾಯ ಕೇಳಿದ್ದು, ಅದನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಮತ್ತು ಅಮಿತ್ ಶಾ ಅವರಿಗೆ ತಲುಪಿಸಿದ್ದಾರೆ. ರವಿವಾರ ಬೆಂಗಳೂರಿಗೆ ಬರಲಿರುವ ಅರುಣ್ ಸಿಂಗ್ ಶಾಸಕಾಂಗ ಪಕ್ಷದ ಸಭೆಗೂ ಮುಂಚೆ ಯಾರು ನಾಯಕ ಎಂದು ಘೋಷಿಸಿ ಶಾಸಕಾಂಗದ ಔಪಚಾರಿಕತೆ ಪೂರ್ಣಗೊಳಿಸಲಿದ್ದಾರೆ. ಈಗಿನ ಪ್ರಕಾರ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಕೂಡ ಯತ್ನಾಳರನ್ನು ಸಹಿಸಿಕೊಳ್ಳೋದಿಲ್ಲ. ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ಬಿಗಿಹಿಡಿತ ಸಡಿಲಗೊಳಿಸಬೇಕು ಎಂದಾದರೆ ಈಗ ಯತ್ನಾಳರನ್ನು ವಿರೋಧ ಪಕ್ಷದ ನಾಯಕರಾಗಿ ಮಾಡಿ ಪ್ರಯೋಗ ಮಾಡುವುದು ಸೂಕ್ತ ಎಂದು ಹಿಂದುತ್ವ ಪ್ರೇರಿತ ನಾಯಕರಿಗೆ ಅನ್ನಿಸಿದೆ. ಯಡಿಯೂರಪ್ಪ ಬಣ ಮತ್ತು ಸಂತೋಷ್ ನಿಷ್ಠ ಬಣಗಳ ತಿಕ್ಕಾಟದ ನಡುವೆ ಬೊಮ್ಮಯಿ ಸ್ವತಃ ತಾವೇ ಸರ್ವಸಮ್ಮತ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂದು ಲೆಕ್ಕ ಹಾಕಿದ್ದಾರೆ. ದಿಲ್ಲಿ ನಾಯಕರು ಏನೇ ನಿರ್ಣಯ ತೆಗೆದುಕೊಂಡರೂ ಕೂಡ ಆರೋಪ ಪ್ರತ್ಯಾರೋಪಗಳು ಇಲ್ಲದೇ ಸುಸೂತ್ರವಾಗಿ ಬಗೆಹರಿಯುತ್ತದೆ ಎಂದು ಅನ್ನಿಸುತ್ತಿಲ್ಲ.
ಯಡಿಯೂರಪ್ಪ ವರ್ಸಸ್ ಸಂತೋಷ್
ಕರ್ನಾಟಕದಲ್ಲಿ ಬಿಜೆಪಿಗಿರುವ ಅತಿ ದೊಡ್ಡ ತಲೆನೋವಿನ ಪ್ರಶ್ನೆ ಎಂದರೆ ಯಡಿಯೂರಪ್ಪನವರ ತರಹದ ಇನ್ನೊಬ್ಬ ಮಾಸ್ ನಾಯಕನನ್ನು ತಯಾರು ಮಾಡಿ ಚುನಾವಣೆ ಗೆಲ್ಲುವುದು. ದಿಲ್ಲಿಯಲ್ಲಿ ಮೋದಿ ಇರುವಾಗ, ಅಮಿತ್ ಶಾರಂತಹ ರಣತಂತ್ರಗಾರ ಇರುವಾಗ, ಬಲಪಂಥೀಯ ವಿಚಾರಧಾರೆ ಏರು ಮುಖದಲ್ಲಿರುವಾಗ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಇನ್ನೊಬ್ಬ ಲಿಂಗಾಯತ ನಾಯಕನನ್ನು ತಂದು ಕೂರಿಸಿದರೆ ಸಾಕು, ಬಿಜೆಪಿ ಚುನಾವಣೆ ಗೆದ್ದುಬಿಡಬಹುದು ಎಂದು ದಿಲ್ಲಿ ನಾಯಕರು ಮತ್ತು ಆರ್‌ಎಸ್‌ಎಸ್ ಇಬ್ಬರಿಗೂ ಅನ್ನಿಸಿತ್ತು. ಆದರೆ ಚುನಾವನಾ ಫಲಿತಾಂಶಗಳು ಯಡಿಯೂರಪ್ಪ ಹತ್ತಿರ ಹತ್ತಿರ ಬರುವ ನಾಯಕನು ರಾಜ್ಯ ಬಿಜೆಪಿ ಬಳಿ ಇಲ್ಲ ಎಂದು ಷರಾ ಬರೆದಿವೆ. ಯಡಿಯೂರಪ್ಪ ಕುಳಿತಿದ್ದ ಕುರ್ಚಿ ಮೇಲೆ ಕೂತುಬಿಡುವುದು ಸುಲಭ. ಆದರೆ ವೋಟು ತರುವುದು ಅಷ್ಟೊಂದು ಸುಲಭ ಅಲ್ಲ ಅನ್ನುವುದನ್ನು ಕೂಡ ಫಲಿತಾಂಶಗಳು ಪುನರಪಿ ತೋರಿಸಿವೆ. ಆದರೆ ಬೊಮ್ಮಾಯಿ ಪ್ರಯೋಗ ವಿಫಲವಾಗಲು ಬೇರೆ ಕಾರಣಗಳಿದ್ದವು. ಈಗ ಯತ್ನಾಳರನ್ನು ಮುಂದಿಟ್ಟುಕೊಂಡು ಇನ್ನೊಂದು ಪ್ರಯೋಗ ಮಾಡುವುದು, ಅದಕ್ಕೆ ಬೇಡವೇ ಬೇಡ ಎಂದು ಯಡಿಯೂರಪ್ಪ ತುಂಬಾ ಹಟ ಹಿಡಿದರೆ ಬೊಮ್ಮಾಯಿ ಹೆಸರಿಗೆ ಸರ್ವಸಮ್ಮತಿ ತರುವುದು, ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಮಾತ್ರ ತಾವು ಹೇಳಿದವರಿಗೆ ಕೊಡಿಸುವುದು ಸ್ಥಳೀಯ ಆರ್‌ಎಸ್‌ಎಸ್ ಯೋಚನೆಯಲ್ಲಿದೆ. ಹೀಗಾಗಿ ಸಂತೋಷ್ ಅವರಿಗೆ ಆಪ್ತರಾಗಿರುವ ಅಶ್ವತ್ಥನಾರಾಯಣ ಮತ್ತು ಸಿ.ಟಿ.ರವಿ ಹೆಸರುಗಳು ಪರಿಗಣನೆಯಲ್ಲಿವೆ. ಆದರೆ ವಿಪಕ್ಷ ನಾಯಕನ ಸ್ಥಾನಕ್ಕೆ ಯತ್ನಾಳ್ ಹೆಸರಿಗೆ ಯಡಿಯೂರಪ್ಪ ಬೇಡವೇ ಬೇಡ ಎಂದು ಪಟ್ಟು ಹಿಡಿದಂತೆ ರಾಜ್ಯ ಅಧ್ಯಕ್ಷರ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ಸಿ.ಟಿ.ರವಿ ಬೇಡ ಎಂದು ಪಟ್ಟು ಹಿಡಿಯುತ್ತಾರೆ. ಆಗ ಅಶ್ವತ್ಥನಾರಾಯಣ ಅಥವಾ ಸುನೀಲ್ ಕುಮಾರ್ ಹೆಸರಿಗೆ ಸರ್ವಸಮ್ಮತಿ ದೊರಕಬಹುದು ಎಂಬ ಲೆಕ್ಕಾಚಾರ ಇರುವಂತೆ ಕಾಣುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಬಣಗಳು ಇದ್ದಷ್ಟೂಲಾಭ ಜಾಸ್ತಿ. ಆದರೆ ರಾಜ್ಯ ಬಿಜೆಪಿಗೆ ಬಣಗಳು ಮಾರಕ ಅನ್ನುವುದಕ್ಕೆ ಇತಿಹಾಸವೇ ಸಾಕ್ಷಿ.
ಯಡಿಯೂರಪ್ಪ ಬಯಸುವುದು ಏನು?
2021ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಯಡಿಯೂರಪ್ಪನವರ ಒತ್ತಾಸೆ ಇರುವುದು ಪುತ್ರ ವಿಜಯೇಂದ್ರಗೆ ಜವಾಬ್ದಾರಿ ಕೊಡಿಸಿ ಮುಂದೆ ತರುವುದು. ಒಬ್ಬ ತಂದೆಯಾಗಿ ಇದು ನನ್ನ ಜವಾಬ್ದಾರಿ ಎಂದು ಯಡಿಯೂರಪ್ಪನವರಿಗೆ ಅನ್ನಿಸಿದ್ದರೆ ಅದು ಸಹಜ. ಆದರೆ, ವಿಜಯೇಂದ್ರರನ್ನು ಒಪ್ಪಿಕೊಂಡರೆ ಅದು ವಂಶ ರಾಜಕಾರಣ ಆಗುತ್ತದೆ ಎನ್ನುವುದು ಬಿ.ಎಲ್.ಸಂತೋಷ್ ಮತ್ತು ಸಂಘದ ಹಿನ್ನೆಲೆಯಿಂದ ಬಂದವರ ಆಕ್ಷೇಪ. ಈ ಎರಡು ಬಣಗಳ ಕಿತ್ತಾಟದ ನಡುವೆ ದಿಲ್ಲಿ ನಾಯಕರು ವಿಜಯೇಂದ್ರರನ್ನು ಒಬ್ಬ ಜೂನಿಯರ್ ಮಂತ್ರಿ ಮಾಡಿ, ಯತ್ನಾಳ್, ಅರವಿಂದ ಬೆಲ್ಲದ, ಸಿ.ಟಿ.ರವಿ, ಯೋಗೇಶ್ವರ್, ಪಿ.ರಾಜೀವ, ರಾಜುಗೌಡರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಂಡಿದ್ದರೆ ರಾಜ್ಯ ಬಿಜೆಪಿಗೆ ಒಂದು ಹೊಸ ಯುವಕರ ತಂಡ ದೊರಕುತ್ತಿತ್ತು. ಆದರೆ ವಿಜಯೇಂದ್ರ ಬೇಡವೇ ಬೇಡ ಎಂದು ಆರ್‌ಎಸ್‌ಎಸ್ ಹಿನ್ನೆಲೆಯವರು ಪಟ್ಟುಹಿಡಿದಿದ್ದರು. ಹಾಗಿದ್ದಲ್ಲಿ ಯತ್ನಾಳ್, ಬೆಲ್ಲದ, ರಾಜೀವ ಮತ್ತು ಯೋಗೇಶ್ವರ್ ಕೂಡ ಬೇಡ ಎಂದು ಯಡಿಯೂರಪ್ಪ ಪಟ್ಟು ಹಿಡಿದರು. ಪರಿಣಾಮ, ಬೊಮ್ಮಾಯಿ ಸಂಪುಟಕ್ಕೆ ಹೊಸತನದ ಪ್ರವೇಶಕ್ಕೆ ಅವಕಾಶವೇ ಕಮ್ಮಿ ಆಗಿತ್ತು. ಈಗ ವಿಜಯೇಂದ್ರರನ್ನು ಶಿಕಾರಿಪುರದ ಶಾಸಕ ಮಾಡಿದ ಮೇಲೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಡಬೇಕು. ಅದಕ್ಕಾಗಿ ಬೊಮ್ಮಾಯಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ, ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ತರಬೇಕು ಎಂದು ಯಡಿಯೂರಪ್ಪ ಆಲೋಚನೆ ಇರುವ ಹಾಗೆ ಕಾಣುತ್ತಿದೆ. ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ, ಆಗ ಒಕ್ಕಲಿಗರು ಬೇಡ ಹಿಂದುಳಿದವರನ್ನು ಅಧ್ಯಕ್ಷ ಮಾಡೋಣ ಎಂದು ಏನಾದರೂ ಚರ್ಚೆ ನಡೆದರೆ ಸುನೀಲಲ್ ಕುಮಾರ್ ಅವರಿಗೆ ಅವಕಾಶ ಸಿಗಬಹುದು. ಅಧಿಕಾರ ಹೋದ ಮೇಲೆ ಅಧ್ಯಕ್ಷ ಆಗಬೇಕು ಅಂದಾದರೆ ಅಲ್ಲಿ ಅಧಿಕಾರ ಕಡಿಮೆ, ಸಂಘರ್ಷ ಜಾಸ್ತಿ.
ಪ್ರತಾಪ್ ಸಿಂಹರಿಂದ ರೇಣುಕಾವರೆಗೆ
ಹಾಗೆ ನೋಡಿದರೆ ಜಗದೀಶ್ ಶೆಟ್ಟರ್, ಲಿಂಬಾವಳಿ, ರಾಮದಾಸ್, ರಘುಪತಿ ಭಟ್ಟರಿಗೆ ಟಿಕೆಟ್ ತಪ್ಪಲು ಕಾರಣ ಸ್ವತಃ ಮೋದಿ. ಏಕೆಂದರೆ ಸ್ವಲ್ಪ ಮಟ್ಟಿಗೆ ಟಿಕೆಟ್ ಬದಲಾವಣೆ ಮಾಡದೇ ಇದ್ದರೆ ಕರ್ನಾಟಕಕ್ಕೆ ಹೋಗಿ ಏನು ಪ್ರಚಾರ ಮಾಡಲಿ ಎಂದು ಸ್ವತಃ ಮೋದಿ ಸಾಹೇಬರು ಕೇಳಿದ ನಂತರವೇ ಟಿಕೆಟ್‌ಗಳು ಬದಲಾವಣೆ ಆದವು. ಆದರೆ ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿ, ರಾಮದಾಸ್ ಜಾಗಕ್ಕೆ ಶ್ರೀವತ್ಸ, ರಘುಪತಿ ಭಟ್ಟರ ಜಾಗಕ್ಕೆ ಯಶಪಾಲ್ ಸುವರ್ಣ ಹೀಗೆ ಟಿಕೆಟ್ ಪಡೆದವರು ಎಲ್ಲರೂ ಕೂಡ ಬಿ.ಎಲ….ಸಂತೋಷ್ ಅವರ ಪರಮಾಪ್ತರು. ಹೀಗಾಗಿ ಮೇ 13ಕ್ಕೆ ಸೋಲು ಆದಾಗ ನಿರಾಶೆಯಲ್ಲಿದ್ದ ಬಿಜೆಪಿಯ ಸೋತ ಅಭ್ಯರ್ಥಿಗಳು ಸಂತೋಷ್ ಅವರೇ ಇದಕ್ಕೆಲ್ಲ ಕಾರಣ ಎಂದು ಮಾತಾಡತೊಡಗಿದರು. ಅದು ಅಷ್ಟಕ್ಕೇ ನಿಲ್ಲದೆ ಸಂತೋಷ್ ಪರಮಾಪ್ತ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಸಿಟ್ಟು ತಿರುಗಿತು. ಆಗ ಸೋತಿದ್ದಕ್ಕೆ ಹೊಂದಾಣಿಕೆ ರಾಜಕೀಯ ಕಾರಣ ಎಂದು ಹುಯಿಲೆದ್ದಿತ್ತು. ಮತ್ತು ಬೆರಳನ್ನು ಯಡಿಯೂರಪ್ಪ ಮತ್ತು ಬೊಮ್ಮಾಯಿಯತ್ತ ತಿರುಗಿಸಲು ಪ್ರಯತ್ನ ನಡೆದಿತ್ತು. ಹೀಗಾಗಿ ಈಗ ಅದರ ವಿರುದ್ಧ ರೇಣುಕಾಚಾರ್ಯ ಮತ್ತು ಮುರುಗೇಶ್ ನಿರಾಣಿ ಮಾತನಾಡುತ್ತಿದ್ದಾರೆ. ಪೊಲಿಟಿಕ್ಸ್ ನೋಡಿ ಹೇಗಿರುತ್ತದೆ. ಬಂದೂಕು ಯಾರದೋ, ಹೆಗಲು ಯಾರದೋ. ಆದರೆ ಗುಂಡು ಹೊಡೆಯುತ್ತಿರುವುದು ಯಾರಿಗೆ ಮತ್ತು ಯಾಕೆ ಎಂಬುದನ್ನು ನಾವು ತಾಳೆ ಹಾಕಿ ನೋಡುತ್ತಿರಬೇಕು.
ಇತಿಹಾಸದಲ್ಲಿ ಬಿಜೆಪಿ ಘರ್ಷಣೆ
ಕರ್ನಾಟಕದ ಇತಿಹಾಸದಲ್ಲಿ ಕಾಂಗ್ರೆಸ್ ಪಾರ್ಟಿಗೆ ಮಾತ್ರ ತಲೆಮಾರಿನಿಂದ ತಲೆಮಾರಿಗೆ ಚುನಾವಣೆ ಗೆಲ್ಲಿಸುವ ನಾಯಕತ್ವ ಸಿಕ್ಕಿದೆ. ಕೆಂಗಲ್ ಹನುಮಂತಯ್ಯರಿಂದ ಆರಂಭವಾಗಿ ವೀರೇಂದ್ರ ಪಾಟೀಲ, ದೇವರಾಜ್ ಅರಸ್, ಬಂಗಾರಪ್ಪ, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಮತ್ತು ಈಗ ಡಿ.ಕೆ.ಶಿವಕುಮಾರ್. ಆದರೆ ಸಂಸ್ಥಾ ಕಾಂಗ್ರೆಸ್‌ನಿಂದ ಜನತಾ ಪಾರ್ಟಿಗೆ ಬಂದ ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ…ರ ಒಂದು ತಲೆಮಾರು ಸಕ್ರಿಯರಾಗಿರುವವರೆಗೆ ಮಾತ್ರ ಜನತಾದಳಕ್ಕೆ ರಾಜ್ಯದಲ್ಲಿ ಅಸ್ತಿತ್ವ ಇತ್ತು. ಆ ಶೂನ್ಯತೆಯೇ ನಿಧಾನವಾಗಿ ಯಡಿಯೂರಪ್ಪ ಅವರ ಜನಪ್ರಿಯತೆ ಮತ್ತು ಅನಂತಕುಮಾರ್ ಅವರ ಸಂಘಟನಾ ಶಕ್ತಿಯ ಕಾರಣದಿಂದ ಬಿಜೆಪಿಗೆ ಆಮ್ಲಜನಕ ನೀಡಿತು. ಆದರೆ ಈಗ ಮೊದಲ ತಲೆಮಾರು ಹಿಂದೆ ಹೋದ ನಂತರ ಬಿಜೆಪಿ ಬರೀ ತಿಕ್ಕಾಟ, ಬಣಗಳಲ್ಲೇ ಮುಳುಗಿದರೆ ಹೊಸ ಶೂನ್ಯತೆ ಹೊಸ ಅಸ್ತಿತ್ವಕ್ಕೆ ಜನ್ಮ ನೀಡಬಹುದೋ ಏನೋ, ಅದನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. 1999ರಲ್ಲಿ ಯಡಿಯೂರಪ್ಪ, ಈಶ್ವರಪ್ಪ ಚುನಾವಣೆ ಸೋತಿದ್ದರು. ಬಿ.ಬಿ.ಶಿವಪ್ಪ ಅವರಿಗೆ ನಾಯಕತ್ವ ಕೊಡಬಾರದು ಎಂದು ಜಗದೀಶ್ ಶೆಟ್ಟರ್‌ರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದಾಗ ಶಾಸಕಾಂಗ ಪಾರ್ಟಿಯ ಸಭೆಯ ಹೊರಗಡೆ ಗಲಾಟೆಗಳಾದವು. ಇನ್ನು 2004ರಲ್ಲಿ ಅನಂತಕುಮಾರ್ ಅಧ್ಯಕ್ಷರಾಗಿ ಬಿಜೆಪಿಗೆ 79 ಸೀಟು ಬಂದಾಗ ಯಡಿಯೂರಪ್ಪನವರನ್ನು ವಿರೋಧ ಪಕ್ಷದ ನಾಯಕ ಎಂದು ಘೋಷಿಸಲು ಒಂದೂವರೆ ತಿಂಗಳು ಬೇಕಾಯಿತು. ಯಡಿಯೂರಪ್ಪ, ಅನಂತಕುಮಾರ ಎಂದು ಬಣ ತಿಕ್ಕಾಟ ಶುರುವಾಗಿದ್ದೇ ಅಲ್ಲಿಂದ. ಈಗ ಮರಳಿ ರಾಜ್ಯ ಬಿಜೆಪಿ ಅದೇ ಕವಲು ಒಡೆದ ದಾರಿಯಲ್ಲಿ ಬಂದು ನಿಂತಿದೆ.