ಜಯಮಾಲಾ ಪುತ್ರಿ, ನಾರಾಯಣಸ್ವಾಮಿ ಪುತ್ರ ವಿದೇಶದಲ್ಲಿ ಪರದಾಟ| ವಿದೇಶದಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗೆ ಮೇಲ್ಮನೆಯಲ್ಲಿ ಸರ್ವಪಕ್ಷ ಸದಸ್ಯರ ಮನವಿ
ಬೆಂಗಳೂರು[ಮಾ.19]: ಈ ಕೊರೋನಾ ವೈರಸ್‌ನಿಂದ ವಿದೇಶಗಳಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉನ್ನತ ವ್ಯಾಸಂಗಕ್ಕೆ ತೆರಳಿರುವ ನಮ್ಮ ಮಕ್ಕಳು ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ನಮ್ಮ ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಸರ್ವ ಪಕ್ಷಗಳ ಸದಸ್ಯರು ಮನವಿ ಮಾಡಿದರು.
ರಾಜ್ಯ ಸರ್ಕಾರ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಸದನಕ್ಕೆ ಮಾಹಿತಿ ನೀಡಿದರು. ಆಗ ಮಾತನಾಡಿದ ಕಾಂಗ್ರೆಸ್ ಸದಸ್ಯೆ ಜಯಮಾಲ ಅವರು, ತಮ್ಮ ಪುತ್ರಿ ಲಂಡನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಸುರಕ್ಷಿತವಾಗಿ ಕರೆತರಲು ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು, ತಮ್ಮ ಪುತ್ರ ಪ್ಯಾರಿಸ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸದನದ ಗಮನ ಸೆಳೆದರು. ಇದೇ ವೇಳೆ ಮಾತನಾಡಿದ ಜೆಡಿಎಸ್‌ನ ಮರಿತಿಬ್ಬೇಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡರು ತಮ್ಮ ಮಕ್ಕಳು ಸಹ ವಿದೇಶದಿಂದ ಇಂದು ಮನೆಗೆ ಮರಳಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಮಾತನಾಡಿ, ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗೆ ಸರ್ಕಾರ ಧಾವಿಸಬೇಕು. ವಿಮಾನ ನಿಲ್ದಾಣಗಳ ಸಮೀಪದ ಆಸ್ಪತ್ರೆ ಹಾಗೂ ಹೋಟೆಲ್‌ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ತಪಾಸಣೆ ಸರಿಯಿಲ್ಲ - ಐವಾನ್ ಆರೋಪ
ಕಾಂಗ್ರೆಸ್ ಸದಸ್ಯ ಐವಾನ ಡಿಸೋಜಾ ಮಾತನಾಡಿ, ಮಂಗಳೂರು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ತಪಾಸಣೆಗೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಕೇವಲ ಮೌಖಿಕವಾಗಿ ವಿಚಾರಿಸಿ ಹೊರಗೆ ಕಳುಹಿಸುತ್ತಿದ್ದಾರೆ. ಇನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವರು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕೊರೋನ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಕೆಲ ದಿನ ಬಂದ್ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.