ವುಹಾನ್‌ನಿಂದ ಮರಳಿರುವ ಹುಬ್ಬಳ್ಳಿ ಟೆಕ್ಕಿಗೆ ಜ್ವರ, ಕೊರೋನಾ ಸೋಂಕು ಶಂಕೆ!

Published : Feb 04, 2020, 07:51 AM ISTUpdated : Feb 04, 2020, 08:04 AM IST
ವುಹಾನ್‌ನಿಂದ ಮರಳಿರುವ ಹುಬ್ಬಳ್ಳಿ ಟೆಕ್ಕಿಗೆ ಜ್ವರ, ಕೊರೋನಾ ಸೋಂಕು ಶಂಕೆ!

ಸಾರಾಂಶ

ಹುಬ್ಬಳ್ಳಿ ಟೆಕ್ಕಿಗೆ ಕೊರೋನಾ ಸೋಂಕು ಶಂಕೆ| ಚೀನಾದ ಕರೋನಾ ಕೇಂದ್ರ ವುಹಾನ್‌ನಿಂದ ಮರಳಿರುವ ಎಂಜಿನಿಯರ್‌ಗೆ ಜ್ವರ, ಕಿಮ್ಸ್‌ನಲ್ಲಿ ಚಿಕಿತ್ಸೆ| ಲ್ಯಾಬ್‌ ವರದಿಗಾಗಿ ಕಾಯುತ್ತಿರುವ ವೈದ್ಯರು

ಹುಬ್ಬಳ್ಳಿ[ಫೆ.04]: 15 ದಿನಗಳ ಹಿಂದಷ್ಟೇ ಚೀನಾದಿಂದ ವಾಪಸಾಗಿರುವ ಹುಬ್ಬಳ್ಳಿ ಮೂಲದ ಟೆಕ್ಕಿಯೊಬ್ಬರು ತೀವ್ರ ಜ್ವರ, ತಲೆನೋವಿನ ಸಮಸ್ಯೆಗಳೊಂದಿಗೆ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಮಾರಕ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿರುವ ಶಂಕೆ ಮೂಡಿದೆ. ರೋಗಿಯ ರಕ್ತದ ಮಾದರಿಯನ್ನು ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ. ಒಂದು ವೇಳೆ ಸೋಂಕು ದೃಢಪಟ್ಟಲ್ಲಿ ಕರ್ನಾಟಕದ ಮೊದಲ ಹಾಗೂ ದೇಶದಲ್ಲಿ ಕೊರೋನಾ ವೈರಾಣು ಸೋಂಕು ಪತ್ತೆಯಾದ ನಾಲ್ಕನೇ ಪ್ರಕರಣ ಇದಾಗಲಿದೆ.

ಹುಬ್ಬಳ್ಳಿಯ ಕೇಶ್ವಾಪುರ ಮೂಲದ ಸಂದೀಪ್‌ ಸಿದ್ದಪ್ಪ ಕೆಳಸಂಗದ (39) ಅವರು ಜ್ವರದಿಂದ ಬಳಲುತ್ತಿದ್ದು, ಭಾನುವಾರ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಶ್ವಾದ್ಯಂತ ನಡುಕ ಸೃಷ್ಟಿಸಿರುವ ಕೊರೋನಾ ವೈರಸ್‌ ಪತ್ತೆಯಾದ ಚೀನಾದ ವುಹಾನ್‌ನಲ್ಲೇ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಸಂದೀಪ್‌ ಜ.18ರಂದು ಮುಂಬೈ ಮೂಲಕ ಬೆಂಗಳೂರಿಗೆ ಆಗಮಿಸಿದ್ದರು. 2 ದಿನ ಬೆಂಗಳೂರಿನ ಸಂಬಂಧಿಕರ ಮನೆಯಲ್ಲೇ ಇದ್ದರು. ಜ.21ರಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಿದ್ದಾರೆ. ಮೊದಲು ಮನೆಯಲ್ಲೇ ಚಿಕಿತ್ಸೆ ಪಡೆದಿದ್ದ ಅವರು ಜ್ವರ ತೀವ್ರ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರು ಏನಂತಾರೆ?

ರೋಗಿಯು ತೀವ್ರ ತಲೆನೋವು, ಕೆಮ್ಮು, ಜ್ವರದಿಂದ ಬಳಲುತ್ತಿರುವುದು, ಚೀನಾದಿಂದ ಹಿಂದಿರುಗಿರುವ ಕಾರಣಕ್ಕಾಗಿ ಕೊರೋನಾ ಸೋಂಕಿನ ಕೆಲ ಲಕ್ಷಣಗಳು ಇರಬಹುದೆಂಬ ಶಂಕೆ ಮೂಡಿದೆ ಅಷ್ಟೆ. ಆದರೆ, ಸಾಮಾನ್ಯವಾಗಿ ಕೊರೋನಾ ವೈರಾಣು ಸೋಂಕು ತಗುಲಿದ್ದರೆ ಇಷ್ಟುದಿನಗಳ ಕಾಲ ಚಿಕಿತ್ಸೆ ಇಲ್ಲದೆ ಉಳಿಯಲು ಸಾಧ್ಯವೇ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದೇವೆ. ರಕ್ತ ಮತ್ತು ಕಫದ ಮಾದರಿಯನ್ನು ಡಿಸ್ಟ್ರಿಕ್ಟ್ ಸರ್ವೆಲೆನ್ಸ್‌ ಆಫೀಸರ್‌ ಮೂಲಕ ಬೆಂಗಳೂರಿನ ನ್ಯಾಷನಲ್‌ ಇನ್ಸಿ$್ಟಟ್ಯೂಟ್‌ ಆಫ್‌ ವೈರಾಲಜಿಗೆ ಕಳಿಸಿಕೊಡಲಾಗಿದೆ. ಮಂಗಳವಾರ ವರದಿ ಬರುವ ಸಾಧ್ಯತೆ ಇದೆ ಎಂದು ಕಿಮ್ಸ್‌ ಅಧೀಕ್ಷಕ ಡಾ. ಅರುಣಕುಮಾರ ಮಾಹಿತಿ ನೀಡಿದ್ದಾರೆ.

ಚೀನಾದಿಂದ ಹಿಂದಿರುಗಿರುವ ಕಾರಣ ಹಾಗೂ ಕೊರೋನಾ ವೈರಸ್‌ ರೋಗದ ಕೆಲ ಲಕ್ಷಣಗಳು ಕಂಡಿರುವ ಹಿನ್ನೆಲೆಯಲ್ಲಿ ತೀವ್ರ ಮುನ್ನೆಚ್ಚರಿಕಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಕೊರೋನಾ ಶಂಕೆಯಷ್ಟೆ. ವರದಿ ಬಂದ ಬಳಿಕ ಕೊರೋನಾ ವೈರಾಣು ತಗುಲಿದೆಯೋ ಇಲ್ಲವೋ ಎಂಬುದು ದೃಢಪಡಲಿದೆ.

- ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ

ತೀವ್ರ ಜ್ವರದಿಂದ ಕಿಮ್ಸ್‌ ಆಸ್ಪತ್ರೆಗೆ ದಾಖಲಾದ ಅವರಿಗೆ ವಿಶೇಷ ನಿಗಾ ಘಟಕ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ರಕ್ತದ ಮಾದರಿಯನ್ನು ಬೆಂಗಳೂರಿಗೆ ರವಾನಿಸಲಾಗಿದ್ದು, ಮಂಗಳವಾರ ನಿಖರ ಮಾಹಿತಿ ತಿಳಿಯಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ವರದಿ ಬಂದ ನಂತರ ಜ್ವರದ ನಿಖರ ಕಾರಣ ಪತ್ತೆಯಾಗಲಿದೆ.

ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನಾ ವೈರಾಣು ಸೋಂಕಿನ ಲಕ್ಷಣವೂ ಇದೇ ರೀತಿ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರೋಗಿಯ ರಕ್ತದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಮಂಗಳವಾರ ಲ್ಯಾಬ್‌ನಿಂದ ವರದಿ ಬರಲಿದೆ. ಆದರೆ, ಕಿಮ್ಸ್‌ ವೈದ್ಯಾಧಿಕಾರಿಗಳು ಕೊರೋನಾ ವೈರಸ್‌ ತಗಲಿರುವ ಸಾಧ್ಯತೆಯನ್ನು ಬಹುತೇಕ ಅಲ್ಲಗಳೆಯುತ್ತಿರುವುದು ಸದ್ಯ ಸಮಾಧಾನದ ಸಂಗತಿ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ: ಕಿಮ್ಸ್‌ಗೆ ದಾಖಲಾಗುವ ಮುನ್ನ ಕೆಲ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದರೂ ಚೀನಾದಿಂದ ವಾಪಸಾಗಿದ್ದಾರೆಂಬ ಒಂದೇ ಕಾರಣಕ್ಕೆ ಸಂದೀಪ್‌ ಅವರನ್ನು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿವೆ. ಈ ಕಾರಣಕ್ಕೆ ಅವರು ಭಾನುವಾರ ಸಂಜೆ 6ಕ್ಕೆ ಕಿಮ್ಸ್‌ಗೆ ದಾಖಲಾಗಿದ್ದಾರೆ. ಇಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂದೀಪ್‌ ಅವರಿಗೆ ಪ್ರತ್ಯೇಕ ತೀವ್ರ ನಿಗಾ ಘಟಕ (ಐಸೋಲೇಷನ್‌ ವಾರ್ಡ್‌) ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಮೆಡಿಸಿನ್‌ ವಿಭಾಗದ ಡಾ.ಆನಂದ ಕೊಪ್ಪದ ನೇತೃತ್ವದ ತಂಡ ಸಂಪೀದ್‌ ಅವರ ಆರೋಗ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.

4 ಹಾಸಿಗೆಗಳ ಪ್ರತ್ಯೇಕ ಕೊಠಡಿ: ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕಿಮ್ಸ್‌ನ ಮೊದಲ ಮಹಡಿಯ ವಿಶೇಷ ವಾರ್ಡ್‌ನಲ್ಲಿ ನಾಲ್ಕು ಹಾಸಿಗೆಗಳ ಪ್ರತ್ಯೇಕ ಐಸೋಲೇಷನ್‌ ವಾರ್ಡ್‌ ತೆರೆಯಲಾಗಿದೆ. ಇಲ್ಲಿ ಅಗತ್ಯ ಔಷಧಗಳನ್ನು ಇರಿಸಿಕೊಳ್ಳಲಾಗಿದ್ದು, ವೆಂಟಿಲೇಟರ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮೆಡಿಸಿನ್‌ ವಿಭಾಗದ ವೈದ್ಯರು ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ವಾರ್ಡ್‌ನೊಳಗೆ ಯಾರನ್ನೂ ಬಿಡದಂತೆ ಕಟ್ಟೆಚ್ಚರ ವಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ