ಕೊರೋನಾ ಕಾಟ: ಬೆಂಗಳೂರಲ್ಲಿ ICU ಸೇರ್ಪಡೆ ಭಾರೀ ಏರಿಕೆ, ಹೆಚ್ಚಿದ ಆತಂಕ

By Kannadaprabha NewsFirst Published Jun 26, 2020, 7:36 AM IST
Highlights

ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ ಆತಂಕ| ಬೆಂಗಳೂರಿನಲ್ಲಿ ದಿನವೂ ಹೆಚ್ಚುತ್ತಿದೆ ಐಸಿಯು ಸೇರುವವರ ಸಂಖ್ಯೆ| ಒಂದೇ ದಿನ 34 ಮಂದಿ ತೀವ್ರ ನಿಗಾ ಘಟಕಕ್ಕೆ ದಾಖಲು| ಗುರುವಾರವೂ ಶತಕ ದಾಟಿದ ಸೋಂಕಿತರ ಸಂಖ್ಯೆ| 113 ಮಂದಿಯ ಪೈಕಿ 34 ಜನರ ಸೋಂಕಿನ ಮೂಲವೇ ಪತ್ತೆ ಆಗುತ್ತಿಲ್ಲ|

ಬೆಂಗಳೂರು(ಜೂ.26): ನಗರದಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಬಾಗಲಕೋಟೆಯ ವೈದ್ಯರೊಬ್ಬರು ಮೃತಪಟ್ಟಿದ್ದು ಬಿಟ್ಟರೆ ಉದ್ಯಾನ ನಗರಿಯಲ್ಲಿ ಗುರುವಾರ ಕೊರೋನಾ ಯಾವ ಬಲಿ ಪಡೆದಿಲ್ಲ. ಆದರೆ, 112 ಮಂದಿ ಐಸಿಯು ಚಿಕಿತ್ಸೆಗೆ ದಾಖಲಾಗಿರುವುದು ಸಾವಿನ ಸರಣಿ ಸದ್ಯಕ್ಕೆ ನಿಲ್ಲುವುದಿಲ್ಲ ಎಂಬ ಸೂಚನೆ ನೀಡಿದೆ.

ನಗರದಲ್ಲಿ ಇಂದು 112 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬುಧವಾರದ ವೇಳೆಗೆ 78 ಐಸಿಯುನಲ್ಲಿ ಇದ್ದರು. ಗುರುವಾರ ಮತ್ತೆ 34 ಐಸಿಯು ಸೇರಿದ್ದಾರೆ. ಹೀಗೆ ಐಸಿಯು ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಇನ್ನು ಗುರುವಾರವೂ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನೂರರ ಗಡಿದಾಟಿದ್ದು, ಬಿಬಿಎಂಪಿ ಕಾರ್ಪೋರೇಟರ್‌, ಅಂಚೆ ಇಲಾಖೆ, ಬಿಎಂಟಿಸಿ, ವೈದ್ಯರು ಸೇರಿದಂತೆ ಒಟ್ಟು 113 ಮಂದಿಗೆ ಹೊಸದಾಗಿ ಸೋಂಕು ತಗುಲಿಸಿಕೊಂಡಿದ್ದಾರೆ. ಈ ಪೈಕಿ 59 ಮಂದಿ ಕೆಮ್ಮು, ಶೀತ ಹಾಗೂ ಜ್ವರ ಸಮಸ್ಯೆಯಿಂದ ಬಳಲುತ್ತಿರುವವರಾಗಿದ್ದಾರೆ.

34 ಮಂದಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. 9 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ವಾಪಾಸ್‌ ಬಂದಿದ್ದ ಐದು ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮತ್ತೈದು ಮಂದಿಗೆ ಉಸಿರಾಟದ ಸಮಸ್ಯೆ ಹಾಗೂ ಒಬ್ಬ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಓಡಾಡಿದ ಪರಿಣಾಮ ಸೋಂಕು ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,791ಕ್ಕೆ ಎರಿಕೆಯಾಗಿದೆ. ಗುರುವಾರ 30 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಸಂಖ್ಯೆ 505ಕ್ಕೆ ಏರಿಕೆಯಾಗಿದೆ. 1,207 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಈವರೆಗೆ ಕೊರೋನಾ ಸೋಂಕಿಗೆ 78 ಮಂದಿ ಬಲಿಯಾಗಿದ್ದಾರೆ.

ಸಿಬ್ಬಂದಿಗೆ ಕೊರೋನಾ: ಅಂಚೆ ಕಚೇರಿ ಸೀಲ್‌ಡೌನ್‌

ಎಚ್‌ಎಎಲ್‌ 2 ಹಂತದಲ್ಲಿರುವ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ವ್ಯಕ್ತಿಗೆ 3 ದಿನದಿಂದ ಜ್ವರ ಇದ್ದು, ಸಕ್ರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಅಂಚೆ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಕಚೇರಿಯ 64 ಸಿಬ್ಬಂದಿಯನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಮನೆಯಲ್ಲಿ 4 ಜನರಿದ್ದು, ಅವರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಅಗ್ನಿ ಶಾಮಕ ದಳದ 6 ಮಂದಿಗೆ ಸೋಂಕು

ನಗರದ ಹೈಗ್ರೌಂಡ್ಸ್‌ ಅಗ್ನಿಶಾಮಕ ಠಾಣೆಯ ಆರು ಮಂದಿ ಸಿಬ್ಬಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ರಾರ‍ಯಂಡಮ್‌ ಪರೀಕ್ಷೆ ವೇಳೆ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದರು. ಇನ್ನುಳಿದಂತೆ ಮತ್ತೆ ಆರು ಮಂದಿ ಸಿಬ್ಬಂದಿಗೆ ಯಾವುದೇ ಸೋಂಕಿನ ಲಕ್ಷಣಗಳು ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಇಬ್ಬರು ವೈದ್ಯಕೀಯ ಸಿಬ್ಬಂದಿಗೂ ಸೋಂಕು

ಕೋರಮಂಗಲ ಪೊಲೀಸ್‌ ಕಾಲೋನಿಯಲ್ಲಿರುವ ಸರ್ಕಾರಿ ಆಸ್ಪತ್ರೆಯ ನರ್ಸ್‌ ಹಾಗೂ ವಾರ್ಡ್‌ ಬಾಯ್‌ ಇಬ್ಬರಿಗೂ ಗುರುವಾರ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆಸ್ಪತ್ರೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

ಮತ್ತೆ ರ‌್ಯಾಂಡಮ್‌ ಪರೀಕ್ಷೆ ಆರಂಭ

ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ರ‌್ಯಾಂಡಮ್‌ ಪರೀಕ್ಷೆ ಆರಂಭಿಸಲಾಗಿದೆ. ಗುರುವಾರ ಆನಂದಪುರ, ಗಂಗೋಂಡನಹಳ್ಳಿ, ಕೆ.ಆರ್‌.ಮಾರುಕಟ್ಟೆ, ಜೆ.ಸಿ.ನಗರ ಮಾರುಕಟ್ಟೆಸೇರಿದಂತೆ ಹಲವು ಕಡೆ ರಾರ‍ಯಂಡಮ್‌ ಪರೀಕ್ಷೆ ಮಾಡಲಾಯಿತು.

ಸೀಲ್‌ಡೌನ್‌ ಆದರೂ ಕದ್ದುಮುಚ್ಚಿ ವ್ಯಾಪಾರ

ಕೆ.ಆರ್‌.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಪ್ರದೇಶದಲ್ಲಿ ಎಸ್‌.ಪಿ. ರಸ್ತೆ ಸೇರಿ ಸುಮಾರು 15 ರಸ್ತೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಆದರೆ, ಎಸ್‌.ಪಿ.ರಸ್ತೆಯಲ್ಲಿ ಕೆಲವು ವ್ಯಾಪಾರಿಗಳು ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದರು. ಇನ್ನು ಸೀಲ್‌ಡೌನ್‌ ರಸ್ತೆಗಳಲ್ಲಿ ಜನ ಭಯ ಭೀತಿ ಇಲ್ಲದೇ ಓಡಾಡುತ್ತಿದ್ದ ದೃಶ್ಯಗಳು ಗುರುವಾರ ಕಂಡು ಬಂದವು.

ಇನ್ನು ಕಲಾಸಿಪಾಳ್ಯ ಮತ್ತು ಕೆ.ಆರ್‌.ಮಾರುಕಟ್ಟೆಸೀಲ್‌ಡೌನ್‌ ಆಗಿದ್ದರಿಂದ ನಗರದ ಇತರೆ ಪ್ರದೇಶಗಳಲ್ಲೂ ಇದರ ಪರಿಣಾಮ ಉಂಟಾಯಿತು. ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟ ಮಾಡುವ ವ್ಯಾಪಾರಿಗಳು ಸಮಸ್ಯೆಗೆ ಸಿಲುಕಿದರು. ಗುರುವಾರ ಕೆಲವರು ಸೀಲ್‌ಡೌನ್‌ ಪ್ರದೇಶದಿಂದ ಹೊರಗೆ ವಾಹನಗಳನ್ನು ನಿಲ್ಲಿಸಿ ಸೀಲ್‌ಡೌನ್‌ ಪ್ರದೇಶದ ಒಳಗೆ ಹೋಗಿ ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕೆಂಗೇರಿ ಬಸ್‌ ಡಿಪೋ ಸಿಬ್ಬಂದಿಗೆ ಸೋಂಕು

ಕೆಂಗೇರಿ ಬಿಎಂಟಿಸಿ ಬಸ್‌ ಡಿಪೋದ ಚಾಲಕ ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿದ್ದ 4 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.
 

click me!