ಕೊರೋನಾ ಗೆದ್ದವರ ಅನುಭವ: ಎಚ್ಚರಿಕೆ ವಹಿಸಿದರೆ ಪ್ರಾಣಕ್ಕೆ ಅಪಾಯ ಇಲ್ಲ!

By Kannadaprabha NewsFirst Published Jul 25, 2020, 7:56 AM IST
Highlights

ಸಾಮಾನ್ಯ ಜ್ವರದಂತೆ ಇತ್ತು| ಕೊರೋನಾ ಗೆದ್ದ ಜಲಮಂಡಳಿ ಎಂಜಿನಿಯರ್‌ ಅನುಭವದ ನುಡಿ| ಕೊರೋನಾ ಸೋಂಕು ಬಂದರೆ ಸಾವನ್ನಪ್ಪುತ್ತೇವೆ ಎಂಬುದು ಸುಳ್ಳು| ಕೊರೋನಾ ಸೋಂಕಿಗೆ ತುತ್ತಾಗಿ ಸಾಯುವವರ ಸಂಖ್ಯೆ ಅತ್ಯಂತ ಕಡಿಮೆ| ಧೈರ್ಯವಾಗಿದ್ದಲ್ಲಿ ಯಾವುದೇ ರೀತಿಯಲ್ಲಿಯೂ ಜೀವಕ್ಕೆ ಅಪಾಯವಿರುವುದಿಲ್ಲ. ಆತಂಕಕ್ಕೆ ಒಳಗಾಗಬಾರದು|

ಬೆಂಗಳೂರು(ಜು.25):  ಕೊರೋನಾ ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ಡುವಂತಹ ದೊಡ್ಡ ಕಾಯಿಲೆಯಲ್ಲ. ಸೋಂಕು ತಗುಲಿದವರಿಗೆ ಜ್ವರ ಮತ್ತು ಮೈಕೈನೋವು ಕಾಣಿಸಿಕೊಳ್ಳುತ್ತದೆ. ಧೈರ್ಯ ಮತ್ತು ಎಚ್ಚರಿಕೆ ವಹಿಸಿದರೆ ಪ್ರಾಣಕ್ಕೆ ಅಪಾಯ ಆಗುವುದಿಲ್ಲ...!

ಇದು ಕೊರೋನ ಸೋಂಕಿನಿಂದ ಗುಣಮುಖರಾಗಿ ತಮ್ಮ ಕರ್ತವ್ಯಕ್ಕೆ ಮರಳಿರುವ ಬೆಂಗಳೂರು ಜಲಮಂಡಳಿ ಎಂಜಿನಿಯರೊಬ್ಬರ ಅಭಿಪ್ರಾಯ. ಕೊರೋನಾ ಸೋಂಕು ತಗುಲಿದಾಗ ಜ್ವರ ಕಾಣಿಸಿಕೊಳ್ಳುತ್ತದೆ. ಜೊತೆಗೆ ಎರಡು ದಿನ ದೇಹದಲ್ಲಿ ನೋವು ಕಾಣಿಸಿಕೊಂಡಿತು. ಆದರೆ, ಸಾಮಾನ್ಯ ಜ್ವರಕ್ಕೆ ತೆಗೆದುಕೊಳ್ಳುವ ಮಾತ್ರೆಗಳು ಮತ್ತು ಮುನ್ನೆಚ್ಚರಿಕೆ ವಹಿಸಿದಲ್ಲಿ ಅದು ನಮ್ಮ ದೇಹದಿಂದ ದೂರು ಸರಿಯಲಿದೆ ಎಂದು ‘ಕನ್ನಡಪ್ರಭ’ ಪತ್ರಿಕೆಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಧೈರ್ಯವಾಗಿರಿ, ಸಾಮಾನ್ಯ ಕಾಯಿಲೆಯೆಂದು ಭಾವಿಸಿ: ಕೊರೊನಾ ಗೆದ್ದವರು ಹೇಳೋದಿದು..!

ಕಳೆದ ಒಂದು ತಿಂಗಳ ಹಿಂದೆ ಜ್ವರ ಕಾಣಿಸಿಕೊಂಡು ಸುಸ್ತಾಗುತ್ತಿತ್ತು. ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟೆ. ಎರಡು ದಿನಗಳ ನಂತರ ಬಿಬಿಎಂಪಿ ಸಿಬ್ಬಂದಿ ಕರೆ ಬಂದು ನಿಮಗೆ ಕೊರೋನಾ ಸೋಂಕು ತಗುಲಿದೆ. ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಬೇಕು. ಯಾರನ್ನೂ ಸಂಪರ್ಕಿಸಬಾರದು. 14 ದಿನ ಒಬ್ಬರೆ ಇರಬೇಕು ಎಂದು ಸೂಚಿಸಿದ್ದರು. ಅಲ್ಲದೆ, ಮನೆಯಲ್ಲಿ ಯಾರೊಂದಿಗೂ ಹತ್ತಿರದಿಂದ ಮಾತನಾಡಬೇಡಿ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣ ಸಂಪರ್ಕ ಮಾಡಲು ಸೂಚಿಸಿ ಆಸ್ಪತ್ರೆಯೊಂದರ ಮೊಬೈಲ್‌ ಸಂಖ್ಯೆ ನೀಡಿದ್ದರು. ಆದರೆ, ಯಾವುದೇ ರೀತಿಯ ಸಮಸ್ಯೆಯಾಗದ ಪರಿಣಾಮ ಆಸ್ಪತ್ರೆಗೆ ದಾಖಲಾಗಲಿಲ್ಲ. ಮನೆಯಲ್ಲಿಯೇ ಗುಣಮುಖರಾಗಿದ್ದೇನೆ ಎಂದರು.

ಪ್ರತಿನಿತ್ಯ ವೈದ್ಯರ ಸಂಪರ್ಕ:

ಪ್ರತಿದಿನ ಮೊಬೈಲ್‌ ಮೂಲಕ ವೈದ್ಯರನ್ನು ಮಾತನಾಡುತ್ತಿದ್ದೆ. ಆರೋಗ್ಯದ ಬಗ್ಗೆ ವಿವರಿಸುತ್ತಿದ್ದೆ. ಅವರು ನೀಡುತ್ತಿದ್ದ ಸೂಚನೆಗಳನ್ನು ಪಾಲಿಸುತ್ತಿದ್ದೆ. ಆದರೆ, ನನ್ನಿಂದ ಯಾರಿಗೂ ಸೋಂಕು ಹರಡಲಿಲ್ಲ. ಇದೀಗ ಸಂಪೂರ್ಣ ಗುಣಮುಖರಾಗಿದ್ದೇನೆ. ಕಚೇರಿ ಕೆಲಸಕ್ಕೂ ಹೋಗುತ್ತಿದ್ದೇನೆ ಎಂದರು.

ಲಕ್ಷಣಗಳಿರಲಿಲ್ಲ:

ಜ್ವರ ಮತ್ತು ದೇಹದ ನೋವು ಹೊರತು ಪಡಿಸಿ ಬೇರಾವ ಸಮಸ್ಯೆಯಿರಲಿಲ್ಲ. ಆದರೆ, 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದೆ. ಕೊಠಡಿಯಿಂದ ಹೊರಕ್ಕೆ ಬಂದಿರಲಿಲ್ಲ. ಆಹಾರದ ಜೊತೆಗೆ ವಿಟಮಿನ್‌ ‘ಸಿ’ ಇರುವ ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ. ಮಕ್ಕಳು ಸೇರಿದಂತೆ ಯಾರೊಂದಿಗೂ ಸಂಪರ್ಕ ಇಟ್ಟುಕೊಂಡಿರಲಿಲ್ಲ ಎಂದು ಎಂಜಿನಿಯರ್‌ ಹೇಳಿದ್ದಾರೆ.

ಕೊರೋನಾ ಸೋಂಕು ಬಂದರೆ ಸಾವನ್ನಪ್ಪುತ್ತೇವೆ ಎಂಬುದು ಸುಳ್ಳು. ಕೊರೋನಾ ಸೋಂಕಿಗೆ ತುತ್ತಾಗಿ ಸಾಯುವವರ ಸಂಖ್ಯೆ ಅತ್ಯಂತ ಕಡಿಮೆ. ಧೈರ್ಯವಾಗಿದ್ದಲ್ಲಿ ಯಾವುದೇ ರೀತಿಯಲ್ಲಿಯೂ ಜೀವಕ್ಕೆ ಅಪಾಯವಿರುವುದಿಲ್ಲ. ಆತಂಕಕ್ಕೆ ಒಳಗಾಗಬಾರದು ಎಂದಿದ್ದಾರೆ.

click me!