ಕುತೂಹಲಕ್ಕಾಗಿ ಟೆಸ್ಟ್‌ ಮಾಡಿಸಿದ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣಗೆ ಕೊರೋನಾ..!

By Kannadaprabha NewsFirst Published Jul 14, 2020, 9:46 AM IST
Highlights

ರ‍್ಯಾಪಿಡ್ ಟೆಸ್ಟ್‌ಗೆ ಚಾಲನೆ ವೇಳೆ ಪರೀಕ್ಷೆ ಮಾಡಿಸಿದ್ದ ಕಟ್ಟೆ ಸತ್ಯನಾರಾಯಣ| ಬಿಬಿಎಂಪಿ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಕಾರ್ಯಕ್ರಮ ಸಹಾಯಕ ಸಿಬ್ಬಂದಿಗೆ ಸೋಂಕು ಇರುವುದು ದೃಢ| ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದ ಆತನ ಸಹೋದರನನ್ನು ಕ್ವಾರಂಟೈನ್‌|

ಬೆಂಗಳೂರು(ಜು.14): ಬಿಬಿಎಂಪಿಯ ಬಸವನಗುಡಿ ವಾರ್ಡ್‌ನ ಸದಸ್ಯ ಹಾಗೂ ಮಾಜಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ (ಕಟ್ಟೆಸತ್ಯ)ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಬಿಬಿಎಂಪಿಯ ನಾಲ್ಕನೇ ಪಾಲಿಕೆ ಸದಸ್ಯನಿಗೆ ಸೋಂಕು ತಗುಲಿದಂತಾಗಿದೆ.

ದುರಂತವೆಂದರೆ, ಯಾವುದೇ ಸೋಂಕಿನ ಲಕ್ಷಣವಿಲ್ಲದ ಕಟ್ಟೆಸತ್ಯನಾರಾಯಣ ಅವರು ಸೋಮವಾರ ಬಸವಗುಡಿ ವಾರ್ಡ್‌ನಲ್ಲಿ ರ‍್ಯಾಪಿಡ್ ಆ್ಯಂಟಿಜನ್‌ ಕೊರೋನಾ ಸೋಂಕು ಪರೀಕ್ಷೆಗೆ (30 ನಿಮಿಷದಲ್ಲಿ ಸೋಂಕು ಪತ್ತೆ ಪರೀಕ್ಷೆ) ಚಾಲನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೇವಲ ಕುತೂಹಲಕ್ಕಾಗಿ ಸತ್ಯನಾರಾಯಣ್‌ ಅವರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ದುರಂತ ಸೋಂಕು ದೃಢಪಟ್ಟಿದೆ. ತಕ್ಷಣ ವೈದ್ಯರು ಅವರಿಗೆ ಹೋಂ ಕ್ವಾರಂಟೈನ್‌ ಆಗುವಂತೆ ಸೂಚಿಸಿದ್ದಾರೆ.

ಕೊರೋನಾ ಕಾಟ: ಜಿಲ್ಲಾ ಕೇಂದ್ರದಲ್ಲೂ ಸಾವಿರಾರು ಬೆಡ್‌ ಆರೈಕೆ ಕೇಂದ್ರ, ಸಚಿವ ಸುಧಾಕರ್‌

ಇತ್ತೀಚೆಗೆ ಬೆಂಗಳೂರು ದಕ್ಷಿಣ ವಲಯದ ವ್ಯಾಪ್ತಿ ಹೆಚ್ಚಿನ ಸಂಖ್ಯೆಯ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುತ್ತಿದೆ. ಹೀಗಾಗಿ, ಬಸವನಗುಡಿ ವಾರ್ಡ್‌ನಲ್ಲಿ ಅನೇಕ ಕಂಟೈನ್ಮೆಂಟ್‌ ಪ್ರದೇಶಗಳನ್ನು ಮಾಡಲಾಗಿತ್ತು. ಈ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಸತ್ಯನಾರಾಯಣ್‌ ಓಡಾಟ ನಡೆಸಿದ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸತ್ಯನಾರಾಯಣ್‌ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದ ಎಲ್ಲ ಸದಸ್ಯರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಈ ಹಿಂದೆ ಪಾದರಾಯನಪುರ ವಾರ್ಡ್‌ನ ಇಮ್ರಾನ್‌ ಪಾಷಾ, ಸಿದ್ಧಾಪುರ ವಾರ್ಡ್‌ ಸದಸ್ಯ ಮುಜಾಹಿದ್‌ ಪಾಷಾ, ಜಗಜೀವನ್‌ ರಾಮ್‌ನಗರ ವಾರ್ಡ್‌ನ ಸೀಮಾ ಅಲ್ತಾಫ್‌ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಬಸವನಗುಡಿ ಪಾಲಿಕೆ ಸದಸ್ಯ ಸತ್ಯನಾರಾಯಣ್‌ ಅವರಿಗೆ ಕಾಣಿಸಿಕೊಂಡಿದೆ.

ಮತ್ತೊಬ್ಬರಿಗೆ ಸೋಂಕು

ಬಿಬಿಎಂಪಿ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಕಾರ್ಯಕ್ರಮ ಸಹಾಯಕ ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಕಳೆದ ಶುಕ್ರವಾರ ಕಾರ್ಯಕ್ರಮ ಸಹಾಯಕ ಸಿಬ್ಬಂದಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದ ಆತನ ಸಹೋದರನನ್ನು ಕ್ವಾರಂಟೈನ್‌ ಮಾಡಲಾಗಿದೆ. ಇನ್ನು ಬಿಬಿಎಂಪಿ ಕಚೇರಿಯಲ್ಲಿ ಆವರಣದಲ್ಲಿರುವ ಬಿಎಂಟಿಎಫ್‌ ಕಚೇರಿಯ ಹೋಂ ಗಾರ್ಡ್‌ಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಎಂಟಿಎಫ್‌ ಕಚೇರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
 

click me!