
ಬೆಂಗಳೂರು(ಜೂ.29): ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೆಚ್ಚಿಬಿದ್ದಿರುವ ಜನರು ಊರುಗಳತ್ತ ದೌಡಾಯಿಸುತ್ತಿದ್ದಾರೆ.
ಸೋಂಕು ಹರಡುವ ಭೀತಿಯಲ್ಲಿ ಬಸ್, ರೈಲು ಸೇರಿದಂತೆ ಸಮೂಹ ಸಾರಿಗೆಯಿಂದ ದೂರು ಉಳಿದಿದ್ದ ಜನರು, ಭಾನುವಾರ ಮುಂಜಾನೆಯಿಂದಲೇ ಸ್ವಂತ ಹಾಗೂ ಖಾಸಗಿ ವಾಹನಗಳಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ಊರುಗಳತ್ತ ಪ್ರಯಾಣಿಸಿದರು.
ಲಾಕ್‌ಡೌನ್ ಜಾರಿ ಬಳಿಕ ವಿವಿಧ ರಾಜ್ಯಗಳ ಸುಮಾರು 3.70 ಲಕ್ಷ ವಲಸೆ ಕಾರ್ಮಿಕರು ನಗರದಿಂದ ತವರು ರಾಜ್ಯಗಳಿಗೆ ತೆರಳಿದ್ದರು. ಅದೇ ರೀತಿ ಉದ್ಯೋಗ ನಿಮಿತ್ತ ನಗರದಲ್ಲಿ ನೆಲೆಸಿದ್ದ ರಾಜ್ಯದ ವಿವಿಧ ಭಾಗಗಳ ಜನರು ಊರುಗಳತ್ತ ಮುಖ ಮಾಡಿದ್ದರು. ಈಗ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟುಭಯಗೊಂಡಿರುವ ಜನರು ನಗರದ ಮನೆಗಳನ್ನು ಖಾಲಿ ಮಾಡಿಕೊಂಡು ಕುಟುಂಬ ಸಮೇತ ಊರುಗಳಿಗೆ ತೆರಳುತ್ತಿದ್ದಾರೆ. ಇದರಿಂದ ನಗರದ ಸಾಕಷ್ಟುಬಡಾವಣೆಗಳಲ್ಲಿ ಮನೆಗಳು ಖಾಲಿ ಉಳಿದಿದ್ದು, ‘ಮನೆ ಖಾಲಿ ಇದೆ’ ಫಲಕಗಳು ತೂಗು ಹಾಕಲಾಗಿದೆ.
ಟ್ರಾಫಿಕ್ ಜಾಮ್:
ಭಾನುವಾರ ಮುಂಜಾನೆಯಿಂದಲೇ ನಗರದ ವಿವಿಧ ಭಾಗಗಳಿಂದ ಜನರು ಊರುಗಳತ್ತ ಪ್ರಯಾಣ ಬೆಳೆಸಿದ ಪರಿಣಾಮ ಬೆಂಗಳೂರು-ತುಮಕೂರು, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಅದರಲ್ಲೂ ನೆಲಮಂಗಲ ಸಮೀಪದ ನವಯುಗ ಟೋಲ್, ಬಳ್ಳಾರಿ ರಸ್ತೆಯ ಸಾದಹಳ್ಳಿ ಗೇಟ್ ಟೋಲ್ ಕೇಂದ್ರದ ಬಳಿ ಕಿಲೋ ಮೀಟರ್ ಉದ್ದಕ್ಕೆ ವಾಹನಗಳು ಸಾಲುಗಟ್ಟಿನಿಂತಿದ್ದವು. ಟೋಲ್ ಪಾವತಿಗೆ ಹೆಚ್ಚು ಸಮಯದ ಹಿಡಿದ ಪರಿಣಾಮ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಕೆಲ ವಾಹನ ಚಾಲಕರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ