ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಕರಿಲ್ಲ!

By Suvarna NewsFirst Published Jun 29, 2020, 9:44 AM IST
Highlights

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಕರಿಲ್ಲ!| ಕೊರೋನಾ ಭೀತಿಯಿಂದ ಬಸ್‌ ಹತ್ತದ ಪ್ರಯಾಣಿಕರು| ಗಿಜಿಗುಡುವ ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳು ಭಣಭಣ

ಬೆಂಗಳೂರು(ಜೂ. 29): ಲಾಕ್‌ಡೌನ್‌ ಸಡಿಲಿಕೆ ನಂತರ ಬಸ್‌ ಸೇವೆ ಪುನರಾರಂಭವಾದ ದಿನದಿಂದಲೂ ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಭಾನುವಾರ ನಿರೀಕ್ಷೆಗಿಂತ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಕುಸಿದಿತ್ತು.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಗಿಂತ ಬಸ್‌ಗಳ ಸಂಖ್ಯೆಯೇ ಹೆಚ್ಚಿತ್ತು. ಬಸ್‌ಗಳಲ್ಲಿ ಬೆರಳೆಣಿಯಷ್ಟುಮಾತ್ರ ಪ್ರಯಾಣಿಕರು ಸಂಚರಿಸಿದರು. ಕೆಲವು ಮಾರ್ಗಗಳಲ್ಲಿ ಸಂಚರಿಸಿದ ಬಿಎಂಟಿಸಿ ಬಸ್‌ಗಳಲ್ಲಿ ಚಾಲನಾ ಸಿಬ್ಬಂದಿ ಸೇರಿ ಇಬ್ಬರು-ಮೂವರು ಪ್ರಯಾಣಿಕರು ಇದ್ದರು. ಪ್ರಯಾಣಿಕರ ಕೊರತೆಯಿಂದ ಕಾರ್ಯಾಚರಣೆ ಮಾಡುವ ಬಸ್‌ಗಳ ಸಂಖ್ಯೆಯನ್ನು ಆರೂವರೆ ಸಾವಿರದಿಂದ ಐದು ಸಾವಿರಕ್ಕೆ ಇಳಿಕೆ ಮಾಡಿದ್ದ ಬಿಎಂಟಿಸಿ ಭಾನುವಾರ ಸುಮಾರು ಒಂದೂವರೆ ಸಾವಿರ ಬಸ್‌ಗಳ ಸಂಚಾರ ರದ್ದು ಮಾಡಿತ್ತು. ಕೆಎಸ್‌ಆರ್‌ಟಿಸಿ ಸಹ ಬಸ್‌ಗಳ ಸಂಖ್ಯೆ ಕಡಿತ ಮಾಡಿತ್ತು.

ಸೋಂಕು ಹರಡುವ ಭೀತಿ:

ಸದಾ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್‌ ಪ್ರದೇಶದಲ್ಲಿ ಜನಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣದ ಜೊತೆಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣದ ನಡುವೆ ಇರುವ ರಸ್ತೆಯ ಇಬ್ಬದಿಯಲ್ಲಿ ಬಸ್‌ಗಳನ್ನು ಸಾಲುಗಟ್ಟಿನಿಲುಗಡೆ ಮಾಡಲಾಗಿತ್ತು. ಕೊರೋನಾ ಸೋಂಕು ಉಲ್ಬಣಗೊಂಡು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಭೀತಿಯಲ್ಲಿ ಸಾರ್ವಜನಿಕರು ಬಸ್‌ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬದಲಾಗಿ ಪ್ರಯಾಣಕ್ಕೆ ಸ್ವಂತ ಹಾಗೂ ಖಾಸಗಿ ವಾಹನ ಬಳಕೆ ಹೆಚ್ಚು ಮಾಡಿದ್ದಾರೆ. ಇನ್ನು ಕೊರೋನಾ ಸೋಂಕಿಗೆ ಹೆದರಿ ಸಾಕಷ್ಟುಮಂದಿ ಪ್ರಯಾಣ ಮುಂದೂಡಿ ಮನೆಗಳಲ್ಲೇ ಉಳಿಯುತ್ತಿದ್ದಾರೆ.

click me!