
ವರದಿ : ರಾಕೇಶ್ ಎನ್.ಎಸ್
ಬೆಂಗಳೂರು (ಮಾ.29): ರಾಜ್ಯದಲ್ಲಿ ಆರಂಭವಾಗಿರುವ ಕೋವಿಡ್ ಎರಡನೇ ಅಲೆ, ಮೊದಲ ಅಲೆಗಿಂತ ವೇಗವಾಗಿ ಹರಡುತ್ತಿರುವುದು ಸದ್ಯ ನಿತ್ಯ ದಾಖಲಾಗುತ್ತಿರುವ ಸೋಂಕಿನ ಪ್ರಕರಣಗಳು ಪುಷ್ಟೀಕರಿಸುತ್ತಿವೆ. ಕೆಲವು ದಿನಗಳಿಂದ ಈಚೆಗೆ ಪ್ರತಿ ದಿನ 250ರಿಂದ 300 ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿನ ಸಂಖ್ಯೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಸಹ ಹೆಚ್ಚಾಗುತ್ತಿರುವುದು ಆತಂಕ ಉಂಟು ಮಾಡಿದೆ.
ಮೊದಲ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ 2000 ಗಡಿ ದಾಟಿ 10-11 ಸಾವಿರ ಮುಟ್ಟಿದ ಬಳಿಕ ಪುನಃ 2000ಕ್ಕಿಂತ ಕಡಿಮೆಯಾಗಲು ಬರೋಬ್ಬರಿ ಐದು ತಿಂಗಳು ತೆಗೆದುಕೊಂಡಿತ್ತು. ಮಾಚ್‌ರ್ 16 ರಿಂದ ಸತತ ಏಳು ದಿನ ಸಾವಿರಕ್ಕೂ ಮಿಕ್ಕಿ ದಾಖಲಾಗುತ್ತಿದ್ದ ಸೋಂಕಿನ ಪ್ರಕರಣಗಳು ಮಾಚ್‌ರ್ ಮಾ. 23 ಹೊತ್ತಿಗೆ ಎರಡು ಸಾವಿರದ ಗಟಿ ದಾಟಿತ್ತು. ಅಲ್ಲಿಂದ ಆರೇ ದಿನದಲ್ಲಿ 3 ಸಾವಿರದ ಗಡಿ ದಾಟಿದೆ. ಮೊದಲ ಅಲೆಯಲ್ಲಿ ಸೋಂಕಿನ ಪ್ರಕರಣ 2 ಸಾವಿರದಿಂದ 3 ಸಾವಿರ ಗಡಿ ದಾಟಲು (ಜುಲೈ 8 ರಿಂದ ಜುಲೈ 14) 7 ದಿನ ತೆಗೆದುಕೊಂಡಿತ್ತು.
ಬೆಂಗಳೂರು: 16 ಮಂದಿ ಪಬ್ ಸಿಬ್ಬಂದಿಗೆ ಕೊರೋನಾ ಸೋಂಕು
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ವರದಿಯಾಗಲು ಪ್ರಾರಂಭವಾಗಿದ್ದು 2020ರ ಜುಲೈ ತಿಂಗಳಿನಲ್ಲಿ. ಜುಲೈ 1 ರಿಂದ ಜುಲೈ 7ರವರೆಗೆ ಸತತ 7 ದಿನಗಳ ಕಾಲ 1ರಿಂದ 2 ಸಾವಿರದೊಳಗಿನ ಪ್ರಕರಣಗಳು ವರದಿಯಾಗಿತ್ತು. ಜುಲೈ 8ರಂದು ಮೊದಲ ಬಾರಿಗೆ 2,062 ಪ್ರಕರಣ ವರದಿಯಾಗಿತ್ತು. ಇದೇ ಮಾದರಿಯಲ್ಲಿ ಈ ತಿಂಗಳ 16ರಿಂದ 22ರವರೆಗೆ 1ರಿಂದ 2 ಸಾವಿರದೊಳಗಿನ ಪ್ರಕರಣಗಳು ದಾಖಲಾಗಿತ್ತು. ಮಾ. 23ರಂದು ಸೋಂಕಿನ ಪ್ರಕರಣ ಎರಡು ಸಾವಿರ ಗಡಿ ದಾಟಿದೆ. ಆ ಬಳಿಕ ಪ್ರತಿದಿನ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದೆ.
ಹೀಗೆ ಒಮ್ಮೆ 2,000ದ ಗಡಿ ದಾಟಿದ ದೈನಂದಿನ ಸೋಂಕಿತರ ಸಂಖ್ಯೆ ಆ ಮೇಲೆ ಹತ್ತು ಸಾವಿರದ ಗಡಿಯನ್ನು ದಾಟಿತು. ಇದಾದ ನಂತರ 2,000ದೊಳಗಿನ ಪ್ರಕರಣ ವರದಿಯಾಗಿದ್ದು ನವೆಂಬರ್ 2ಕ್ಕೆ. ಅಂದರೆ ಬರೋಬ್ಬರಿ ಐದು ತಿಂಗಳ ಕಾಲ ಕೋವಿಡ್ ಹೆಚ್ಚು ಕಡಿಮೆ ಉತ್ತುಂಗದಲ್ಲಿತ್ತು.
ಈ ವರ್ಷದ ಮಾಚ್‌ರ್ 9 ರಿಂದ ಮಾಚ್‌ರ್ 15ರ ಅವಧಿಯಲ್ಲಿ 5,733 ಪ್ರಕರಣ, ಮಾಚ್‌ರ್ 16 ರಿಂದ 22ರ ಅವಧಿಯಲ್ಲಿ 10,473 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದೇ ವೇಳೆ 47 ಮಂದಿ ಮೃತರಾಗಿದ್ದಾರೆ. ಮಾಚ್‌ರ್ 23 ರಿಂದ 28ರ ನಡುವೆ 15,565 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ವರ್ಷದ ಜೂನ್ 24 ರಿಂದ ಜೂನ್ 30ರ ಅವಧಿಯಲ್ಲಿ 5,521 ಜನರಲ್ಲಿ ಕಾಣಿಸಿಕೊಂಡ ಸೋಂಕು ಜುಲೈ 1 ರಿಂದ ಜುಲೈ 7ರ ಅವಧಿಯಲ್ಲಿ ಈ ಸಂಖ್ಯೆ 11,573ಕ್ಕೆ ಏರಿತ್ತು. ಇದೇ ವೇಳೆ 171 ಮಂದಿ ಪ್ರಾಣ ಕಳೆದುಕೊಂಡಿದ್ದರು. ಜುಲೈ 8 ರಿಂದ 13ರ ನಡುವಿನ ಆರು ದಿನದಲ್ಲಿ 14,766 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಈ ವರ್ಷದ ಮಾ. 23ರಿಂದ 28ರ ಅವಧಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ 342 ಮಂದಿ ಮೃತರಾಗಿದ್ದರು.
ಕೋವಿಡ್ ಲಸಿಕೆ ಬಂದಿದ್ದರೂ ಕೂಡ ಎರಡನೇ ಅಲೆಗೆ ತುತ್ತಾಗಿರುವ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮೊದಲ ಅಲೆಗಿಂತಲೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಅಲೆ ಒಮ್ಮೆ ನಿಯಂತ್ರಣ ತಪ್ಪಿದರೆ ಜೇನಿನ ಗೂಡಿಗೆ ಕಲ್ಲೆಸೆದಂತೆ. ಆ ಬಳಿಕ ಅದನ್ನು ನಿಯಂತ್ರಿಸಲು ಅನೇಕ ವಾರ, ತಿಂಗಳುಗಳೇ ಬೇಕಾಗುತ್ತದೆ ಎಂದು ಕೋವಿಡ್ ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ