
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.27) : ಆ ಒಂದು ಪ್ರದೇಶದ ಜನರೆಲ್ಲಾ ಬಹಳ ನೆಮ್ಮದಿಯಿಂದ ಇದ್ದರು. ಆದರೆ ಐದು ವರ್ಷಗಳ ಹಿಂದೆ ಎಲ್ಲರೊಂದಿಗೂ ನಿಮಗೆ ಸಂಪರ್ಕ ಜೋಡಿಸುತ್ತೇವೆ ಎಂದು ಬಂದ ಆ ಒಂದು ಟವರ್ ಇಡೀ ಏರಿಯಾದ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿತು. ಇದೀಗ ಒಂದಲ್ಲ ಅಂತ ಮತ್ತೊಂದು ಟವರ್ ಸಿದ್ಧವಾಗುತ್ತಿದ್ದು ಜನರು ಅದರ ವಿರುದ್ಧ ಸಿಡಿದೆದ್ದಿದ್ದಾರೆ.
ಮನೆಯಿಂದ ಕೇವಲ ಹತ್ತೇ ಅಡಿ ದೂರದಲ್ಲಿ ಮುಗಿಲೆತ್ತರಕ್ಕೆ ನಿಂತಿರುವ ಖಾಸಗಿ ಕಂಪೆನಿಯ ಟವರ್. ಅದರ ಪಕ್ಕದಲ್ಲೇ ಮತ್ತೊಂದು ಟವರ್ ನಿಲ್ಲಲು ನಡೆಯುತ್ತಿರುವ ಕಾಮಗಾರಿ. ಇರುವ ಟವರ್ ನಿಂದ ಹೃದಯ, ಮೆದುಳು ಪಾರ್ಶ್ವವಾಯು ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದೇವೆಂದು ಆಕ್ರೋಶ ಹೊರಹಾಕುತ್ತಿರುವ ಜನರು. ಹೌದು ಇಂತಹ ಒಂದು ಘಟನೆಗೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ರಾಣಿಪೇಟೆಯಲ್ಲಿ.
ಸುತ್ತಮುತ್ತ ಇರುವ 100 ಕ್ಕೂ ಹೆಚ್ಚು ಕುಟುಂಬಗಳು ಕಳೆದ ಹಲವು ವರ್ಷಗಳಿಂದಲೂ ನೆಮ್ಮದಿಯ ಬದುಕು ನಡೆಸುತ್ತಿದ್ದರು. ಆದರೆ ಇಲ್ಲಿನ ಖಾಸಗಿ ಖಾಲಿ ನಿವೇಶನದಲ್ಲಿ ವ್ಯಕ್ತಿಯೊಬ್ಬರು ಕಳೆದ ಐದು ವರ್ಷಗಳ ಹಿಂದೆ ಖಾಸಗಿ ಕಂಪೆನಿಯ ಟವರ್ ನಿರ್ಮಿಸುವುದಕ್ಕೆ ಅವಕಾಶ ನೀಡಿದ್ದರು. ಅದುವರೆಗೆ ಆರೋಗ್ಯವಾಗಿದ್ದ ರಾಣಿಪೇಟೆಯ ಜನರು ಒಬ್ಬೊಬ್ಬರೇ ಅನಾರೋಗ್ಯದಿಂದ ಬಳಲು ಆರಂಭಿಸಿದರು. ಕಳೆದ ಐದು ವರ್ಷಗಳಿಂದ ಈ ಏರಿಯಾದ 40 ಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಆರೇಳು ಜನರು ಮೆದುಳಿನ ವಾರ್ಶ್ವವಾಯುವಿಗೆ ತುತ್ತಾಗಿದ್ದರೆ, ಮೂರು ಜನರಿಗೆ ಬ್ರೈನ್ ಟ್ಯೂಮರ್ ಆಗಿದೆ. ಇದರಿಂದ ಜನರು ಪಡಬಾರದ ಕಷ್ಟಪಡುವಂತೆ ಆಗಿದೆ.
ಆರೋಗ್ಯದ ತೀವ್ರ ಸಮಸ್ಯೆ ಎದುರಾಗಿದ್ದರಿಂದ ಕೆಲ ಕುಟುಂಬಗಳು ಅಲ್ಲಿಂದ ಮನೆ ಖಾಲಿ ಮಾಡಿ ಬೇರೆಡೆ ಬಾಡಿಗೆ ಮನೆ ಪಡೆದು ಅವುಗಳಲ್ಲಿ ಬದುಕುತ್ತಿದ್ದಾರೆ. ಟವರ್ ಇರುವುದರಿಂದ ಇಲ್ಲಿನ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾರೊಬ್ಬರೂ ಬದುಕಲು ಆಗುತ್ತಿಲ್ಲ. ರಾತ್ರಿ ಇಡೀ ಜನರೇಟರ್ ಶಬ್ಧ ನಿದ್ದೆ ಮಾಡಲು ಬಿಡುವುದಿಲ್ಲ ಎನ್ನುವುದು ಜನರ ಅಳಲು.
ಕಳೆದ ಐದು ವರ್ಷಗಳ ಹಿಂದೆ ಇಲ್ಲಿ ಟವರ್ ನಿರ್ಮಿಸುವಾಗಲೇ ಇದನ್ನು ತೀವ್ರ ವಿರೋಧಿಸಿದ್ದೆವು. ನಗರಸಭೆ, ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದೆವು. ಆದರೂ ಯಾರೂ ಕ್ರಮ ಕೈಗೊಳ್ಳಲಿಲ್ಲ. ಇದೀಗ ಎರಡನೇ ಟವರ್ ನಿರ್ಮಿಸುತ್ತಿದ್ದಾರೆ. ಯಾವುದೇ ಸಣ್ಣ ಕಾಮಗಾರಿ ನಡೆಯಬೇಕಾದರೂ ನಗರಸಭೆಗೆ ಮಾಹಿತಿ ಇರುತ್ತದೆ. ಆದರೆ ಇಷ್ಟು ದೊಡ್ಡ ಟವರ್ ನಿರ್ಮಾಣದ ಕೆಲಸ ಮಾಡುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೆ ಟವರ್ ನಿಂದಲೇ ಸಮಸ್ಯೆಯಾಗುತ್ತಿದೆ ಎಂದು ಹೇಗೆ ಹೇಳುತ್ತೀರಾ ಎಂದು ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ. ಹೀಗಾಗಿಯೇ ಇದೀಗ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ ಸ್ಥಳೀಯರಾದ ವಿವೇಕ ಹಾಗೂ ರಾಣಿ.
ಈ ಕುರಿತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಕೇಳಿದರೆ ಅದು ಎಷ್ಟು ರೇಡಿಯೇಷನ್ ಬಿಡುಗಡೆ ಮಾಡುತ್ತಿದೆ ಮತ್ತು ಇದರಿಂದ ಆರೋಗ್ಯಕ್ಕೆ ಎಷ್ಟು ಸಮಸ್ಯೆ ಆಗುತ್ತಿದ ಎನ್ನುತ್ತುವುದನ್ನು ವೈಜ್ಞಾನಿಕವಾಗಿ ನೋಡಬೇಕಾಗುತ್ತದೆ. ತಕ್ಷಣವೇ ಅದರದ ಬಗ್ಗೆ ವರದಿ ಕೊಡಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು. ಒಂದು ವೇಳೆ ಅದರಿಂದ ನೈಜವಾಗಿಯೂ ಸಮಸ್ಯೆ ಎದುರಾಗುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ನೂರಾರು ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡಿರುವ ಟವರ್ ಜೊತೆಗೆ ಮತ್ತೊಂದು ಟವರ್ ನಿರ್ಮಿಸಲು ಹೊರಟಿರುವುದರ ವಿರುದ್ಧ ಜನರು ರೊಚ್ಚಿಗೆದ್ದಿದ್ದು ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ