ದೇಶ ಇಬ್ಭಾಗ ಮಾಡುವ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದಾವಣಗೆರೆ (ಫೆ.9): ದೇಶ ಇಬ್ಭಾಗ ಮಾಡುವ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಾಣ ಬೆದರಿಕೆ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ನಿವಾಸಿ ಹನುಮಂತ ಎಂಬುವವರಿಂದ ಐಪಿಸಿ 505(1)(ಸಿ), 505(2), ಮತ್ತು 506 ಅಡಿ ದೂರು ದಾಖಲಿಸಿದ್ದಾರೆ.
ನಿನ್ನೆ ದಾವಣಗೆರೆಯಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಸ್ ಈಶ್ವರಪ್ಪ, ಡಿಕೆ ಸುರೇಶ್, ವಿನಯ್ ಕುಲಕರ್ಣಿ ದೇಶದ್ರೋಹಿಗಳಾಗಿದ್ದು, ಎಐಸಿಸಿ ಮಲ್ಲಿಕಾರ್ಜುನ ಖರ್ಗೆಗೆ ತಾಕತ್ತು ಇದ್ರೆ ಪಕ್ಷದಿಂದ ಕಿತ್ತುಹಾಕಲಿ ಎಂದು ಸವಾಲು ಹಾಕಿದ್ದರು. ಈ ವೇಳೆ ದೇಶ ಒಡೆಯುವ ಇಂಥ ದೇಶದ್ರೋಹಿಗಳನ್ನು ಗುಂಡಿಟ್ಟುಕೊಲ್ಲಬೇಕು ಎಂಬಂಥ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಹಿಂದಿನಿಂದಲೂ ದೇಶ ಒಡೆಯುವ ಕೆಲಸ ಮಾಡುತ್ತಿದೆ: ಈಶ್ವರಪ್ಪ ವಾಗ್ದಾಳಿ
ಕೆಎಸ್ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು. ಸಿಎಂ ಸಿದ್ದರಾಮಯ್ಯ ಸಹ ಕೆಎಸ್ ಈಶ್ವರಪ್ಪಗೆ ಹೊಡಿ ಬಡಿ ಕಡಿ ಈ ಭಾಷೆ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಇಂದು ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದೆ.