
ಬೆಂಗಳೂರು(ಆ.10): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಾಕಿ ಬಿಲ್ ಪಾವತಿಸದಿರುವುದಕ್ಕೆ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಗುತ್ತಿಗೆದಾರರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯ ಬಳಿಕ ಇದೀಗ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಬುಧವಾರ ನಗರದ ಡಾಲರ್ಸ್ ಕಾಲೋನಿಯಲ್ಲಿನ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ನೇತೃತ್ವದಲ್ಲಿ ಗುತ್ತಿಗೆದಾರರು ಭೇಟಿಯಾಗಿ ತಮ್ಮ ಹೋರಾಟಕ್ಕೆ ಸಹಕಾರ ಕೋರಿದರು. ಬಿಬಿಎಂಪಿಯಲ್ಲಿ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು (ಡಿ.ಕೆ. ಶಿವಕುಮಾರ್) ಸಂಶಯ ವ್ಯಕ್ತಪಡಿಸಿ ಹಣ ಪಾವತಿಯನ್ನು ತಡೆಹಿಡಿದಿದ್ದಾರೆ ಎಂದು ಪತ್ರದಲ್ಲಿ ದೂರಲಾಗಿದೆ.
Bengaluru: ಬಿಬಿಎಂಪಿ 500 ಗುತ್ತಿಗೆದಾರರಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ತನಿಖೆಯಿಂದ ಹಣ ವಿಳಂಬ:
‘ಹಲವಾರು ಕಾಮಗಾರಿಗಳನ್ನು ಬಿಬಿಎಂಪಿಯ ಗುತ್ತಿಗೆದಾರರು ತಮ್ಮ ಸಮ್ಮುಖದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಬೆಂಗಳೂರು ಅಭಿವೃದ್ಧಿ ಸಚಿವರು ಈ ಕುರಿತು ಸಂಶಯ ವ್ಯಕ್ತಪಡಿಸಿ ತನಿಖಾ ತಂಡವನ್ನು ರಚಿಸಿ ವರದಿ ನೀಡುವಂತೆ ಕೋರಿದ್ದಾರೆ. ಆದರೆ, ಈ ತನಿಖಾ ಸಂಸ್ಥೆಗಳು ಪ್ರತಿಯೊಂದು ಕಾಮಗಾರಿಗಳನ್ನು ಪರಿಶೀಲಿಸಿ ವರದಿ ನೀಡುವುದು ತುಂಬಾ ತಡವಾಗುತ್ತದೆ. ಆದರೆ, ಈಗಾಗಲೇ ಪಾಲಿಕೆಯಲ್ಲಿ ಹಣಪಾವತಿ ತಡವಾಗಿರುವುದರಿಂದ ಗುತ್ತಿಗೆದಾರರ ಪರಿಸ್ಥಿತಿ ಸಂಕಷ್ಟಕ್ಕೆ ತುತ್ತಾಗಿ ಹಲವಾರು ಗುತ್ತಿಗೆದಾರರು ಈಗಾಗಲೇ ದಯಾಮರಣ ಪತ್ರವನ್ನು ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಪಾಲರಿಗೆ ನೀಡಿದ್ದಾರೆ’ ಎಂದು ಗುತ್ತಿಗೆದಾರರು ಹೇಳಿದ್ದಾರೆ.
ತನಿಖಾ ತಂಡ ವರದಿ ನೀಡುವುದು ತುಂಬಾ ಹೆಚ್ಚಿನ ಸಮಯ ಬೇಕಾಗಿರುತ್ತದೆ. ಹೀಗಾಗಿ ತಾವುಗಳು ಈಗಾಗಲೇ ಪೂರ್ಣಗೊಳಿಸಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕು ಎಂದು ಒತ್ತಾಯಿಸಲಾಗಿದೆ.
‘ನಮ್ಮ ಮನವಿಯನ್ನು ಮಾನವೀಯತೆ ಆಧಾರದ ಮೇಲೆ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸುವಂತೆ ಮತ್ತು ಗುತ್ತಿಗೆದಾರರ ಬಾಕಿ ಬಿಲ್ಲುಗಳಿಗೆ ಹಣ ಪಾವತಿಸುವಂತೆ ಕಳಕಳಿಯ ಮನವಿ ಮತ್ತು ನ್ಯಾಯ ಸಮ್ಮತ ಸಹಕಾರಕ್ಕಾಗಿ ನಿಮ್ಮನ್ನು ಕೋರುತ್ತೇವೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಿಬಿಎಂಪಿ 45 ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಖುದ್ದು ಫೀಲ್ಡ್‌ಗಿಳಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್
ಪಕ್ಷಾತೀತ ದೂರು, ನಮ್ಮ ಹಿಂದೆ ಯಾರೂ ಇಲ್ಲ:
ಭೇಟಿ ಬಳಿಕ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ‘ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮೇಲೂ ನಮ್ಮ ಕೆಲಸ ಆಗುತ್ತಿಲ್ಲ. ಪಕ್ಷಾತೀತವಾಗಿ ಎಲ್ಲರಿಗೂ ದೂರು ನೀಡುತ್ತಿದ್ದೇವೆ. ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ನಮ್ಮ ಹಿಂದೆ ಯಾರೂ ಇಲ್ಲ. ಕೇವಲ ಗುತ್ತಿಗೆದಾರರು ಮಾತ್ರ ಇದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗಿದೆ. ಇದುವರೆಗೆ ನಮ್ಮ ಬಾಕಿ ಹಣ ಬಿಡುಗಡೆಯಾಗಿಲ್ಲ’ ಎಂದು ಅಳಲು ತೋಡಿಕೊಂಡರು.
ಅವರಿಗೆ ಯಾರು ಸಲಹೆ ಕೊಡ್ತಿದ್ದಾರೆಂದು ಗೊತ್ತು
ಕಾಮಗಾರಿಗಳ ಹಣ ಬಿಡುಗಡೆಯಲ್ಲಿ ಕಮಿಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿರುವ ಗುತ್ತಿಗೆದಾರರಿಗೆ ಯಾರು ಸಲಹೆ ನೀಡುತ್ತಿದ್ದಾರೆ, ಯಾರು ಯಾರನ್ನು ಭೇಟಿ ಮಾಡುತ್ತಿದ್ದಾರೆ ಎಂಬುದೆಲ್ಲಾ ನನಗೆ ಗೊತ್ತಿದೆ. ನಾನೂ ಗಮನಿಸುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ